ಭಾನುವಾರ, ಜನವರಿ 19, 2020
20 °C

ಭರತ ಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭಾರತದ ಪ್ರಾಚೀನ ಸಾಧು-ಸಂತರೆಲ್ಲ ಇಲ್ಲಿ ಒಂದೆಡೆ ಸಮಾಗಮಗೊಂಡಿದ್ದಾರೆ. ಸರಸ್ವತಿ, ಗಂಗಾ, ಯಮುನಾ, ಕೃಷ್ಣಾ, ಕಾವೇರಿ ಸೇರಿದಂತೆ ಎಲ್ಲ ಪ್ರಮುಖ ನದಿಗಳು ಅದೇ ಸ್ಥಳದಲ್ಲಿ ಸಂಗಮಿಸಿವೆ.ಆ ನದಿಗಳ ದಂಡೆ ಮೇಲೆಯೇ ನಮ್ಮ ದೇಶೀ ಕ್ರೀಡೆಗಳೆಲ್ಲ ಪರಾಕ್ರಮ ಮೆರೆಯುತ್ತಿವೆ. ಇತಿಹಾಸದ ಪೊರೆ ಕಳಚಿಕೊಂಡು ಭಾರತೀಯ ವಿಜ್ಞಾನ ಕ್ಷೇತ್ರ ಪುಟಿದೆದ್ದು ನಿಂತಿದ್ದರೆ, ಜಗತ್ತಿನ ತುಂಬಾ ಭಾರತೀಯ ಸಂಸ್ಕೃತಿಯನ್ನು ಸಾರುತ್ತಾ ನಿಂತಿರುವ ದೇವಾಲಯಗಳು ಅಲ್ಲಿಯೇ ಒಂದಾಗಿವೆ.ಆರ್‌ಎಸ್‌ಎಸ್ ವತಿಯಿಂದ ಶುಕ್ರವಾರದಿಂದ ಏರ್ಪಡಿಸಿರುವ ಹಿಂದೂ ಶಕ್ತಿ ಸಂಗಮದ ಹಿನ್ನೆಲೆಯಲ್ಲಿ ಗುರುವಾರ ಉದ್ಘಾಟನೆಗೊಂಡ `ಯುಗದೃಷ್ಟಿ~ ಪ್ರದರ್ಶಿನಿಯಲ್ಲಿ ಕಂಡುಬಂದ ನೋಟ ಇದು. ದೇಶ, ಸಂಸ್ಕೃತಿ ಮತ್ತು ಸಂಘದ ವೈಭವವನ್ನು ಸಾರುವಂತಹ 500ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇತಿಹಾಸಾಸಕ್ತರಿಗೆ ಪ್ರಾಚೀನ ಮಾಹಿತಿಯನ್ನು ಮೊಗೆದು ಕೊಡುತ್ತಿವೆ.ಪ್ರದರ್ಶಿನಿ ದ್ವಾರದಲ್ಲಿ ಭರತ ಮಾತೆಯ ಮಂಟಪವಿದ್ದು, ರಾಗಿ ಸಸಿಗಳ ಹಾಸಿನಿಂದ ತಯಾರಿಸಿದ ಜೀವಂತ ಮಂಟಪ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮಂಟಪದ ಮುಂದೆ ಹಾಕಲಾದ ದೊಡ್ಡ ಗಾತ್ರದ ರಂಗೋಲಿ ಕಲಾವಿದನ ಕೈಚಳಕವನ್ನು ತೋರುತ್ತದೆ. ಭಾರತಾಂಬೆ ನೆಲೆನಿಂತ ಸ್ಥಳದ ಪಕ್ಕದಲ್ಲೇ ಹಿಮಾಲಯ ಪರ್ವತ ಶ್ರೇಣಿ ಹಬ್ಬಿ ನಿಂತಿದೆ. ಅದರ ಹತ್ತಿರ ವಿಜಯನಗರ ಸಾಮ್ರಾಜ್ಯದ ಭವ್ಯ ಕಥಾನಕ ಚಿತ್ರಗಳ ರೂಪದಲ್ಲಿ ಕಣ್ಮುಂದೆ ತೆರೆದುಕೊಳ್ಳುತ್ತದೆ.ಅಸ್ಸಾಮಿನ `ಬಿಹು~ದಿಂದ ಖಾಲಸಾ ಪಂಥದ ಬೈಸಾಖಿವರೆಗೆ ಎಲ್ಲ ಹಿಂದು ಹಬ್ಬಗಳ ಪರಿಪೂರ್ಣ ಮಾಹಿತಿ ಅಲ್ಲಿದೆ. ಕ್ರೀಡೆಗಳಿಗಾಗಿಯೇ ಒಂದು ವಿಭಾಗವನ್ನು ಮಾಡಲಾಗಿದ್ದು, ಕುಸ್ತಿ, ಮಲ್ಲಕಂಬ, ಹಗ್ಗ-ಜಗ್ಗಾಟ, ಚದುರಂಗ, ಪಗಡೆ, ಚನ್ನಮಣೆ, ಲಗೋರಿ, ಬುಗುರಿ, ಕಬಡ್ಡಿ, ಚಿನ್ನಿ ಕೋಲು, ಹುಂಜದಾಟಗಳು ಗತಕಾಲದ ವೈಭವದ ನೆನಪುಗಳು ಮನದಂಗಳದಲ್ಲಿ ಮೆರವಣಿಗೆ ಹೊರಡುವಂತೆ ಮಾಡುತ್ತವೆ.ದೇಶದ ಬಗೆಗೆ ಮಾಹಿತಿ ಒದಗಿಸುವ ಭರತ ಭೂಮಿ ನನ್ನ ತಾಯಿ ಎಂಬ ಪ್ರತ್ಯೇಕ ವಿಭಾಗವನ್ನೇ ತೆರೆಯಲಾಗಿದೆ. 72,40,900 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದ ಅಖಂಡ ಭಾರತ ಈಗ 32,93,200 ಚದರ ಕಿ.ಮೀ. ಹೊಂದಿದ ಹಿಂದುಸ್ತಾನವಾಗಿ ಮಾತ್ರ ಉಳಿದಿದ್ದು, ಮಿಕ್ಕ ಭಾಗ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶಗಳಲ್ಲಿ ಹರಿದು ಹಂಚಿಹೋಗಿದೆ ಎಂಬ ಮಾಹಿತಿ ನೀಡಲಾಗಿದೆ. ದೇಶದ ಎಲ್ಲ ಪ್ರಮುಖ ನದಿಗಳ ಚಿತ್ರಪಟಗಳನ್ನು ಹಾಕಲಾಗಿದ್ದು, ಅವುಗಳ ಹರಿವು, ಕ್ರಮಿಸುವ ದೂರ, ಸಂಧಿಸುವ ಸ್ಥಳ, ಬೆಳೆಸಿದ ಸಂಸ್ಕೃತಿ ವಿಷಯವಾಗಿಯೂ ಅಡಿ ಟಿಪ್ಪಣಿ ಬರೆಯಲಾಗಿದೆ.ಕೈಲಾಸ ಮತ್ತು ಮಾನಸ ಸರೋವರಗಳನ್ನು ಇಲ್ಲಿಯೇ ದರ್ಶನಾರ್ಥಿಗಳ ಮುಂದೆ ಅನಾವರಣ ಮಾಡಲಾಗಿದೆ. `ವಿಜ್ಞಾನ ತಂತ್ರಜ್ಞಾನಗಳ ತವರು ಪ್ರಾಚೀನ ಭಾರತ~ ಎಂಬ ತಲೆಬರಹದ ವಿಭಾಗ ಪ್ರಾಚೀನ ಭಾರತದ ಆವಿಷ್ಕಾರಗಳನ್ನು ತೋರಲು ಕೈಬೀಸಿ ಕರೆಯುತ್ತದೆ. ಋಕ್ ಸಂಹಿತಾದಲ್ಲಿ ಬರುವ ಬೆಳಕಿನ ವೇಗದ ವಿವರಣೆಯನ್ನು ಶ್ಲೋಕಗಳ ಸಹಿತ ವಿವರಿಸಲಾಗಿದೆ. ಬಟ್ಟಿ ಇಳಿಸುವ ಸಾಧನ ತಿರ್ಯಕ್ ಪಾತನ ಯಂತ್ರ ಸೋಜಿಗ ಮೂಡಿಸುತ್ತದೆ. ಲೋಹ ಶುದ್ಧಿ ಉಪಕರಣಗಳಾದ ಮೂಸೆಗಳು ಕಣ್ಣು ಪಿಳಿಕಿಸದೆ ತಮ್ಮತ್ತ ನೋಡುವಂತೆ ಮಾಡುತ್ತವೆ.`ನಮ್ಮ ಸಂತ ಪರಂಪರೆ~ ಎಂಬ ಇನ್ನೊಂದು ವಿಭಾಗದಲ್ಲಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವರು, ಗುರುನಾನಕ್, ಕಬೀರರು, ಬಸವಣ್ಣ, ಸೂರದಾಸರು, ಪೋತನ, ಮೋಳಿಗೆ ಮಾರಯ್ಯ, ಮೀರಾಬಾಯಿ, ಅಂಡಾಳ್, ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರು ಸೇರಿದಂತೆ ನೂರಾರು ಸಾಧು, ಸಂತ, ಶರಣರು ಒಂದೆಡೆ ಮೇಳೈಸಿದ್ದಾರೆ. `ಸಾಹಿತ್ಯ ಪರಂಪರೆ~ಯ ಅಗಾಧ ಜಗತ್ತನ್ನು ನಾವಿಲ್ಲಿ ಹತ್ತಾರು ಹೆಜ್ಜೆ ಕ್ರಮಿಸುವಷ್ಟರಲ್ಲಿ ದರ್ಶನ ಮಾಡಬಹುದು. ಕುಮಾರವ್ಯಾಸ, ಗಳಗನಾಥ, ಶರಶ್ಚಂದ್ರ ಚಟರ್ಜಿ, ಫರ್ಡಿನಾಂಡ್ ಕಿಟೆಲ್ ಅವರನ್ನೊಳಗೊಂಡು ಸಾಹಿತ್ಯದ ದಿಗ್ಗಜರ ಪುಟ್ಟ ಜಗತ್ತು ಇಲ್ಲಿ ಅನಾವರಣಗೊಂಡಿದೆ. ಕಲಾ ಪರಂಪರೆಯಲ್ಲಿ ನಮ್ಮನ್ನು ಕೈಹಿಡಿದು ಮುನ್ನಡೆಸಲು ನಂದಲಾಲ್ ಬೋಸ್, ಅಮೃತಾ ಶೇರ್‌ಗಿಲ್, ಬಳ್ಳಾರಿ ರಾಘವ ಅವರಂತಹ ಕಲಾವಿದರಿದ್ದಾರೆ.ಇಂಕಾ ನಾಗರಿಕತೆಯಲ್ಲಿ ಕಾಣಸಿಗುವ ಯಜ್ಞಕುಂಡ, ರೋಮ್ ಸಾಮ್ರಾಜ್ಯದ ಪೇಗನ್ ದೇವಾಲಯ, ಚೀನಾದ ರಾಮಾಯಣ ಚಿತ್ರಗಳು, ಮೆಕ್ಸಿಕೊದ ಗಣೇಶ ಮಂದಿರ, ಗಾಂಧಾರದ ಬಾಮುಯನ್ ಬುದ್ಧ, ಭಾರತದ ಎಲ್ಲ ರಾಜ್ಯಗಳ ಸಂಸ್ಕೃತಿಗಳು ಈ ಪ್ರದರ್ಶಿನಿಯಲ್ಲಿ ಅನಾವರಣಗೊಂಡಿವೆ. ಜೀವನ ಮೌಲ್ಯಗಳ ಕುರಿತು ನೋಡುಗರಿಗೆ ಪಾಠವೂ ಇಲ್ಲಿದ್ದು, ಆರ್‌ಎಸ್‌ಎಸ್ ಬೆಳೆದುಬಂದ ಬಗೆಯನ್ನೂ ವಿವರಿಸಲಾಗಿದೆ.

 

ಪ್ರತಿಕ್ರಿಯಿಸಿ (+)