ಭರದಿಂದ ಸಾಗಿದ ತುಂಗಭದ್ರಾ ಸೇತುವೆ ಕಾಮಗಾರಿ

7

ಭರದಿಂದ ಸಾಗಿದ ತುಂಗಭದ್ರಾ ಸೇತುವೆ ಕಾಮಗಾರಿ

Published:
Updated:

ರಾಯಚೂರು: ರಾಯಚೂರು- ಮಂತ್ರಾಲಯ ನಡುವೆ ಸಂಪರ್ಕ ಕಲ್ಪಿಸುವ 43 ಕೋಟಿ ರೂ ವೆಚ್ಚದ ತುಂಗಭದ್ರಾ ಸೇತುವೆ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಏಪ್ರಿಲ್‌ನಲ್ಲಿ ಇದು ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.ಅಂತರರಾಜ್ಯ ಹಾಗೂ ಪ್ರಮುಖ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯವಾದ ಈ ಸೇತುವೆ ಎರಡೂವರೆ ವರ್ಷಗಳ ಹಿಂದೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.ಇದೇ ಅವಧಿಯಲ್ಲಿ ಸುಮಾರು ಎರಡು ಕೋಟಿ ಖರ್ಚು ಮಾಡಿ ತಾತ್ಕಾಲಿಕ ಸೇತುವೆಯನ್ನು ನದಿಯಲ್ಲಿ ಸರ್ಕಾರ ನಿರ್ಮಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುತ್ತಿತ್ತು. ಮತ್ತೆ ದುರಸ್ತಿ ಮಾಡುತ್ತ ಬರಲಾಗಿದೆ. ಈಗಲೂ ಈ ತಾತ್ಕಾಲಿಕ ಸೇತುವೆಯಲ್ಲಿ  ವಾಹನಗಳು ಸಂಚರಿಸುತ್ತಿವೆ.ಮುಖ್ಯಸೇತುವೆ ಕೊಚ್ಚಿ ಹೋದುದರಿಂದ ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗಕ್ಕೆ ಪ್ರತಿನಿತ್ಯ 2 ಲಕ್ಷ ರೂ ನಷ್ಟವಾಗುತ್ತಿದೆ. ಮೊದಲು 80 ಟ್ರಿಪ್ ಆಗುತ್ತಿದ್ದವು. ಈಗ 20 ಟ್ರಿಪ್ ಕೂಡ ಆಗುತ್ತಿಲ್ಲ ಎಂದು ಸಾರಿಗೆ ಅಧಿಕಾರಿಗಳು ವಿವರಿಸುತ್ತಾರೆ. ಹುಬ್ಬಳ್ಳಿ, ಬಾಗಲಕೋಟ, ವಿಜಾಪುರ, ಮಹಾರಾಷ್ಟ್ರದಿಂದ ಮಂತ್ರಾಲಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಬಸ್‌ಗಳು ರಾಯಚೂರುವರೆಗೆ ಬಂದು ವಾಪಸು ಹೋಗುತ್ತಿದ್ದವು. ಈಗ ಸರಿ ಇಲ್ಲದ ತಾತ್ಕಾಲಿಕ ಸೇತುವೆಯಲ್ಲಿ ವಾಹನಗಳು ಎದ್ದು ಬಿದ್ದು ಸಾಗುತ್ತಿವೆ.ವಿಳಂಬಿತ ಕಾಮಗಾರಿ: ಒಂದೂವರೆ ವರ್ಷದ ಬಳಿಕ ಮುಖ್ಯ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಯಿತು. 43 ಕೋಟಿ ವೆಚ್ಚದಲ್ಲಿ ನೂತನ ಸೇತುವೆಯನ್ನು ಹೈದರಾಬಾದ್‌ನ ಜಿ.ವಿ.ಆರ್ ನಿರ್ಮಾಣ ಸಂಸ್ಥೆಯು ನಿರ್ಮಿಸುತ್ತಿದೆ.ಎರಡು ತಿಂಗಳ ಹಿಂದೆ ಜಿಲ್ಲೆಗೆ ಮುಖ್ಯಮಂತ್ರಿ ಸದಾನಂದಗೌಡ ಭೇಟಿ ನೀಡಿದ್ದಾಗ ಬರುವ    ಮಾರ್ಚ್ ಒಳಗೆ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ನಿರ್ಮಾಣ ಸಂಸ್ಥೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆಯು ಕಾಮಗಾರಿಯನ್ನು ಚುರುಕುಗೊಳಿಸಿದೆ.ಅತ್ಯಾಧುನಿಕ ಉಪಕರಣಗಳು, ಹೈಡ್ರಾಲಿಕ್ ತಂತ್ರಜ್ಞಾನ ಬಳಸಿಕೊಂಡು `ಸ್ಟಿಲ್ ಬ್ರಿಡ್ಜ್~ ನಿರ್ಮಾಣ ಕಾಮಗಾರಿಯನ್ನು ಸಂಸ್ಥೆಯು ಕೈಗೊಂಡಿದೆ.ಸೇತುವೆ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿದೆ. ಏಪ್ರಿಲ್ ವೇಳೆಗೆ ನೂತನ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry