ಭರವಸೆಗಳ ಬಚ್ಚನ್

7

ಭರವಸೆಗಳ ಬಚ್ಚನ್

Published:
Updated:
ಭರವಸೆಗಳ ಬಚ್ಚನ್

`ಒಳ್ಳೆಯತನವನ್ನು ವೀಕ್‌ನೆಸ್ ಎಂದುಕೊಳ್ಳೋದು ಮುಟ್ಠಾಳತನ~ ಎಂದು ಮುಖದ ಸ್ನಾಯುಗಳನ್ನೆಲ್ಲಾ ನಡುಗಿಸುತ್ತಾ ಸುದೀಪ್ ಸಂಭಾಷಣೆ ಹೇಳುತ್ತಾರೆ. ಅದು `ಬಚ್ಚನ್~ ಚಿತ್ರದ ಟ್ರೈಲರ್.ಅದನ್ನು ಬಿಡುಗಡೆ ಮಾಡಿದ ರವಿಚಂದ್ರನ್, `ಶಶಾಂಕ್ ಅವರ ಹಿಂದಿನ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದೆ. ಅದು ನಿರೀಕ್ಷಿತ ಮಟ್ಟಕ್ಕೆ ಇರಲಿಲ್ಲ. ಆ ಸೋಲಿನಿಂದ ಪಾಠ ಕಲಿತು ಅವರು ಕೆಲಸ ಮಾಡಬೇಕು. ಅವರಿಗೆ ಒಳ್ಳೆಯದಾಗಲಿ~ ಎಂದು ಕಟು ಮಾತುಗಳನ್ನಾಡಿ ಚಿತ್ರಕ್ಕೆ ಶುಭ ಕೋರಿದರು.ಜೂನ್ 20ರಿಂದ ಚಿತ್ರೀಕರಣ ಆರಂಭವಾಗುತ್ತಿರುವುದರಿಂದ ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆಯಲಾಗಿತ್ತು.ಚಿತ್ರತಂಡಕ್ಕೆ ಶುಭವಾಗಲಿ~ ಎಂದರು ಸುದೀಪ್. ಚಿತ್ರದ ನಾಯಕನಾಗಿದ್ದ ಅವರು ತಮಗೆ ತಾವೇ ನಾಟಕೀಯವಾಗಿ ಶುಭ ಹಾರೈಸಿಕೊಂಡರು. `ಶಶಾಂಕ್ ನಿರ್ದೇಶನದ ಎರಡು ಸಿನಿಮಾ ನೋಡಿರುವೆ.ಅವರು ಭಾವನಾತ್ಮಕ ಸನ್ನಿವೇಶಕ್ಕೆ ಸೃಷ್ಟಿಸುವ ವಾತಾವರಣ ಅದ್ಭುತವಾಗಿರುತ್ತದೆ. ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಅವರಲ್ಲಿ ನನಗೆ ಇಷ್ಟವಾದ ಅಂಶವೇ ಅದು. ಅವರು `ಬಚ್ಚನ್~ ಸ್ಕ್ರಿಪ್ಟ್ ಹೇಳಿದಾಗ ಅದು ನನ್ನ ವೃತ್ತಿ ಬದುಕಿನಲ್ಲೇ ವಿಭಿನ್ನವಾದದ್ದು ಎನಿಸಿತು.ಒಂದೂವರೆ ವರ್ಷದ ಹಿಂದೆ ಇದರ ಮಾತುಕತೆ ನಡೆಯಿತು~ ಎಂದು ಸುದೀಪ್ ಹೇಳಿದರು.

`ನಾನು ಸುದೀಪ್ ಅವರ ಅಭಿಮಾನಿ. ಸಹಾಯಕ ನಿರ್ದೇಶಕನಾಗಿದ್ದಾಗಿನಿಂದಲೂ ಅವರ ಸಿನಿಮಾ ನಿರ್ದೇಶಿಸುವ ಹಂಬಲ ಇತ್ತು. ಈಗ ಸುದೀಪ್ ಚಿತ್ರ ನಿರ್ದೇಶಿಸುತ್ತಿರುವುದು ಒಂದು ಖುಷಿಯಾದರೆ, ಚಿತ್ರಕ್ಕೆ `ಬಚ್ಚನ್~ ಹೆಸರು ಸಿಕ್ಕಿದ್ದು ಮತ್ತೊಂದು ಖುಷಿಯ ಸಮಾಚಾರ~ ಎಂದವರು ನಿರ್ದೇಶಕ ಶಶಾಂಕ್.`ಬಚ್ಚನ್ ಹೆಸರು ಜನರಲ್ಲಿ ಹುಟ್ಟಿಸುವ ನಿರೀಕ್ಷೆಗೆ ತಕ್ಕ ಸಿನಿಮಾ ಮಾಡುವೆವು. ಇದು ಆಕ್ಷನ್ ಮತ್ತು ಥ್ರಿಲ್ಲರ್ ಮಿಶ್ರಣವಾದ ಸಿನಿಮಾ. ದೀಪಾ ಸನ್ನಿಧಿ, ಭಾವನಾ ಮೆನನ್, ಪರುಲ್ ಯಾದವ್ ನಾಯಕಿಯರು. ಆಶಿಶ್ ವಿದ್ಯಾರ್ಥಿ, ನಾಸರ್, ಪ್ರದೀಪ್ ಸಿಂಗ್ ರಾವತ್, ಜಗಪತಿ ಬಾಬು ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸುದೀಪ್ ಗೆಳೆಯರಾದ ತೆಲುಗು ನಟ ಜಗಪತಿ ಬಾಬು ಅವರ ಕನ್ನಡದಲ್ಲಿ ನಟಿಸಬೇಕೆಂಬ ಆಸೆ ನಮ್ಮ ಚಿತ್ರದ ಮೂಲಕ ಈಡೇರುತ್ತಿದೆ. ಇದು ದೊಡ್ಡ ಬಜೆಟ್ ಸಿನಿಮಾ. ಇನ್ನೂ ಬಜೆಟ್ ಅಂದಾಜು ಮಾಡಿಲ್ಲ. ಕತೆ ಹೆಚ್ಚು ಶ್ರೀಮಂತಿಕೆ ಕೇಳುತ್ತೆ. ಸುದೀಪ್ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಹೊಸ ರೀತಿಯ ಕತೆಯನ್ನು ಹೇಳಲು ಹೊರಟಿದ್ದೇವೆ~ ಎಂದು ಮಾಹಿತಿ ಒದಗಿಸಿದರು.`ಬಚ್ಚನ್~ ಎಂಬ ಹೆಸರು ಏನನ್ನು ಪ್ರತಿನಿಧಿಸುತ್ತದೆ? ಎಂಬ ಪ್ರಶ್ನೆಗೆ, `ಬಚ್ಚನ್ ಅಂದ್ರೆ ಒಳ್ಳೆಯ ಕತೆ. ಒಳ್ಳೆಯ ನಾಯಕ. ಒಳ್ಳೆಯ ನಿರ್ದೇಶಕ. ಒಳ್ಳೆಯ ತಾಂತ್ರಿಕ ತಂಡ~ ಎಂದು ಉತ್ತರಿಸಿದವರು ನಿರ್ಮಾಪಕ ಉದಯ್ ಮೆಹ್ತಾ.`ಆ್ಯಂಗ್ರಿಯಂಗ್ ಮ್ಯಾನ್~ ಎಂಬ ಅಡಿಬರಹ ಹೊಂದಿದ `ಬಚ್ಚನ್~ ಚಿತ್ರೀಕರಣವನ್ನು ನೂರು ದಿನದೊಳಗೆ ಪೂರೈಸುವ ಇರಾದೆ ಚಿತ್ರತಂಡದ್ದು. ಬಹುತೇಕ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಯಲಿದ್ದು, ಶೇ 20ರಷ್ಟು ದೃಶ್ಯಗಳನ್ನು ಸೆರೆ ಹಿಡಿಯಲು ಕರ್ನಾಟಕದ ವಿವಿಧ ಜಾಗಗಳಿಗೆ ತಂಡ ತೆರಳಲಿದೆ. ಹರಿಕೃಷ್ಣ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry