ಶುಕ್ರವಾರ, ನವೆಂಬರ್ 22, 2019
22 °C
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಆಂಟನಿ

ಭರವಸೆಗಳ ಮಹಾಪೂರ

Published:
Updated:

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಪ್ರತಿ ಕೆ.ಜಿ.ಗೆ ರೂ. 1 ದರದಲ್ಲಿ 30 ಕೆ.ಜಿ. ಅಕ್ಕಿ, ಹಾಲು ಉತ್ಪಾದಕ ರೈತರಿಗೆ ಲೀಟರ್ ಹಾಲಿಗೆ ರೂ. 4 ಸಹಾಯ ಧನ, ರೈತರಿಗೆ ರೂ. 2 ಲಕ್ಷದ ವರೆಗೆ ಬಡ್ಡಿರಹಿತ ಕೃಷಿ ಸಾಲ, ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರತಿ ವರ್ಷ ರೂ. 10 ಸಾವಿರ ಕೋಟಿ ಮೀಸಲು, ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಡಿಜಿಟಲ್ ನೋಟ್‌ಬುಕ್ ವಿತರಣೆ, ವಸತಿ ಯೋಜನೆಗಳ ಸಹಾಯಧನದ ಮೊತ್ತ ರೂ. 1.2 ಲಕ್ಷಕ್ಕೆ ಹೆಚ್ಚಳ...ವಿಧಾನಸಭಾ ಚುನಾವಣೆಗಾಗಿ `ಸ್ವಚ್ಛ ಆಡಳಿತ- ಸಮರ್ಥ ನಾಯಕತ್ವ' ಘೋಷಣೆಯ ಅಡಿಯಲ್ಲಿ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು. ಕೆ.ಆರ್.ರಮೇಶಕುಮಾರ್ ನೇತೃತ್ವದ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಸಿದ್ಧಪಡಿಸಿರುವ ಈ ಪ್ರಣಾಳಿಕೆಯನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಬುಧವಾರ ಬಿಡುಗಡೆ ಮಾಡಿದರು.28 ಪುಟಗಳ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲ ಪ್ರದೇಶಗಳು ಮತ್ತು ಸಮಾಜದ ಎಲ್ಲ ವರ್ಗಗಗಳನ್ನು ಗುರಿಯಾಗಿಸಿಕೊಂಡ ಹಲವು ಆಶ್ವಾಸನೆಗಳಿವೆ. `ಇವು ಕೇವಲ ಕಾಗದದ ಮೇಲಿನ ಭರವಸೆಗಳಲ್ಲ, ನಮ್ಮ ಬದ್ಧತೆ. ಅನುಷ್ಠಾನಕ್ಕೆ ತರಲು ಸಾಧ್ಯ ಇರುವಂತಹ ಭರವಸೆಗಳನ್ನು ಮಾತ್ರವೇ ನಾವು ಪ್ರಣಾಳಿಕೆಯಲ್ಲಿ ನೀಡಿದ್ದೇವೆ. ಇಲ್ಲಿ ಆಡಳಿತ ಸೂತ್ರಗಳ ಹಲವು ಅಂಶಗಳು ಪ್ರಸ್ತಾಪವಾಗಿದ್ದರೂ, ಸ್ವಚ್ಛ, ಸುಭದ್ರ, ಪಾರದರ್ಶಕ, ಜನಮುಖಿ ಆಡಳಿತ ನೀಡುವುದೇ ನಮ್ಮ ನಿಜವಾದ ಪ್ರಣಾಳಿಕೆ' ಎಂದು ಕಾಂಗ್ರೆಸ್ ಹೇಳಿಕೊಂಡಿದೆ.`ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಬಿಜೆಪಿಗೆ ಸಾಧ್ಯವಾಗಲಿಲ್ಲ. ಹಿಂದೆ ಇದ್ದ ಹಲವು ಯೋಜನೆಗಳೂ ಈ ಅವಧಿಯಲ್ಲಿ ಸ್ಥಗಿತವಾದವು. ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನೂ ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ಈ ಸರ್ಕಾರ ವಿಫಲವಾಯಿತು. ಮತ್ತೊಮ್ಮೆ ಜಾತಿವಾದಿ, ಕೋಮುವಾದಿ ಶಕ್ತಿಗಳ ಹಿಡಿತಕ್ಕೆ ರಾಜ್ಯದ ಆಡಳಿತದ ಚುಕ್ಕಾಣಿ ನೀಡುವುದು ಬೇಡ' ಎಂಬ ಮನವಿ ಪ್ರಣಾಳಿಕೆಯಲ್ಲಿದೆ.ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವ ವಾಗ್ದಾನವನ್ನು ಕಾಂಗ್ರೆಸ್ ನೀಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆ.ಜಿ.ಗೆ ರೂ. 1 ದರದಲ್ಲಿ 30 ಕೆ.ಜಿ. ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪೂರೈಸುವುದಾಗಿ ಪ್ರಕಟಿಸಿದೆ.ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಲು ರೈತ ಪ್ರತಿನಿಧಿಗಳು ಮತ್ತು ಕೃಷಿ ತಜ್ಞರನ್ನು ಒಳಗೊಂಡ ರಾಜ್ಯ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗ ಮತ್ತು ಜಿಲ್ಲಾ ಸಮಿತಿಗಳನ್ನು ಅಸ್ತಿತ್ವಕ್ಕೆ ತರುವ ಭರವಸೆ ನೀಡಿದೆ. ಇದಕ್ಕಾಗಿ ರೂ. 1,500 ಕೋಟಿ ಆವರ್ತ ನಿಧಿ ಸ್ಥಾಪಿಸುವುದಾಗಿಯೂ ಹೇಳಿದೆ. ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿದಾಗ ರೈತರಿಗೆ ತಕ್ಷಣದ ಪರಿಹಾರ ಒದಗಿಸಲು ರೂ. 1,500 ಕೋಟಿ ಮೊತ್ತದ ಶಾಶ್ವತ ಪರಿಹಾರ ನಿಧಿ ಸ್ಥಾಪಿಸುವುದಾಗಿಯೂ ಕಾಂಗ್ರೆಸ್ ಹೇಳಿದೆ.`ಕೃಷ್ಣಾ ಮತ್ತು ಕಾವೇರಿ ಕಣಿವೆಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ 10 ಸಾವಿರ ಕೋಟಿ ರೂಪಾಯಿಯಷ್ಟು ಅನುದಾನವನ್ನು ಬಜೆಟ್‌ನಲ್ಲೇ ಮೀಸಲಿಡಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಪೂರೈಸಲು ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ರಾಜ್ಯ ಕೆರೆ ಅಭಿವೃದ್ಧಿ ನಿಗಮವನ್ನು ಅಸ್ತಿತ್ವಕ್ಕೆ ತರಲಾಗುವುದು' ಎಂಬ ಭರವಸೆಗಳನ್ನು ರೈತ ಸಮುದಾಯದ ಮುಂದಿಟ್ಟಿದೆ.

 

ಮಿತಿ ಇಳಿಕೆ: ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ ಪ್ರವೇಶ ಪಡೆಯುವ ಮಗುವಿನ ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ರೂ. 3 ಲಕ್ಷದಿಂದ ರೂ.1.5 ಲಕ್ಷ ಇಳಿಕೆ ಮಾಡಲಾಗುವುದು. 7ನೇ ತರಗತಿಯವರೆಗೆ ಕನ್ನಡ ಶಿಕ್ಷಣ ಮಾಧ್ಯಮವನ್ನು ಕಡ್ಡಾಯಗೊಳಿಸುವ ಜೊತೆಗೆ, ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ವಸತಿ ಸಹಿತ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಪಿಯುಸಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಡಿಜಿಟಲ್ ನೋಟ್‌ಬುಕ್‌ಗಳನ್ನು ವಿತರಿಸಲಾಗುವುದು ಎಂಬ ಆಶ್ವಾಸನೆಗಳನ್ನು ನೀಡಿದೆ.5 ವರ್ಷಗಳಲ್ಲಿ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ಗುರಿ ಪ್ರಣಾಳಿಕೆಯಲ್ಲಿದೆ. ವಸತಿ ಯೋಜನೆಗಳ ಫಲಾನುಭವಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ರೂ.1.2 ಲಕ್ಷ ಹೆಚ್ಚಿಸುವುದು ಮತ್ತು ಗ್ರಾಮೀಣ ಪ್ರದೇಶದ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ನೀಡುವ ಸಹಾಯಧನದ ಮೊತ್ತವನ್ನು ರೂ. 15 ಸಾವಿರ ಹೆಚ್ಚಿಸುವುದಾಗಿ ಪ್ರಕಟಿಸಿದೆ.ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, `ಈ ಬಾರಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸ್ವಚ್ಛ ಆಡಳಿತ ನೀಡುವುದೇ ನಮ್ಮ ಗುರಿ. ಇದಕ್ಕಾಗಿ ಅನುಷ್ಠಾನದ ಸಾಧ್ಯತೆ ಇರುವ ವಿಚಾರಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ' ಎಂದರು.ಲೋಕಾಯುಕ್ತ ವರದಿ ಜಾರಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, `ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಪ್ರಗತಿಯಲ್ಲಿದೆ. ಪ್ರಕರಣ ಸುಪ್ರೀಂಕೋರ್ಟ್‌ನಲ್ಲೂ ಬಾಕಿ ಇದೆ.ಈ ಕಾರಣದಿಂದ ಪ್ರಣಾಳಿಕೆಯಲ್ಲಿ ಯಾವುದೇ ವಿಷಯ ಪ್ರಸ್ತಾಪಿಸಿಲ್ಲ. ಹಿಂದಿನ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ವರದಿಯ ಶಿಫಾರಸುಗಳ ಜಾರಿಗೊಳಿಹಾಗೂ ಲೋಕಾಯುಕ್ತ ಬಲವರ್ಧನೆಗೂ ಕಾಂಗ್ರೆಸ್ ಆದ್ಯತೆ ನೀಡಲಿದೆ. ಲೋಕಾಯುಕ್ತರು ಸಲ್ಲಿಸುವ ಎಲ್ಲ ಶಿಫಾರಸುಗಳನ್ನೂ ಒಪ್ಪಿಕೊಂಡು, ಜಾರಿಗೆ ತರಲಾಗುವುದು ಎಂದರು.ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಕೆ.ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಅಂಬಿಕಾ ಸೋನಿ, ಜಿತೇಂದ್ರ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ಮಧುಸೂದನ ಮಿಸ್ತ್ರಿ, ಗೋವಾದ ಮಾಜಿ ಮುಖ್ಯಮಂತ್ರಿ ಲೂಸಿಯಾನೊ ಫೆಲೆರೊ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಸಹ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಮೇಶ್‌ಕುಮಾರ್, ಮುಖಂಡರಾದ ಸಿ.ಕೆ.ಜಾಫರ್ ಷರೀಫ್, ಎಸ್.ಆರ್.ಪಾಟೀಲ, ಎಂ.ವಿ.ರಾಜಶೇಖರನ್ ಮತ್ತಿತರರು ಉಪಸ್ಥಿತರಿದ್ದರು.ಪ್ರತಿಕ್ರಿಯಿಸಿ (+)