ಮಂಗಳವಾರ, ನವೆಂಬರ್ 12, 2019
21 °C

`ಭರವಸೆಯೊಂದಿಗೆ ಹೋರಾಟ'

Published:
Updated:

ಬೆಂಗಳೂರು: `ಭಾರತದ ಟೆನಿಸ್‌ನಲ್ಲಿ ಹಲವು ವಿವಾದಗಳು ಆಗಿ ಹೋಗಿವೆ. ಆದೆಲ್ಲಾ ಈಗ ಇತಿಹಾಸ. ಹೊಸ ಭರವಸೆ ಹಾಗೂ ಹೊಸ ಕನಸಿನೊಂದಿಗೆ ಮತ್ತೆ ಹೋರಾಟ ಆರಂಭಿಸುತ್ತೇವೆ. ಇಂಡೊನೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವ ಆತ್ಮವಿಶ್ವಾಸವಿದೆ' ಎಂದು ಭಾರತದ ಸಿಂಗಲ್ಸ್ ಆಟಗಾರ ಸೋಮದೇವ್ ದೇವವರ್ಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಏಪ್ರಿಲ್ 5 ರಿಂದ 7ರ ವರೆಗೆ ಏಷ್ಯಾ ಓಸಿನಿಯಾ ಡೇವಿಸ್ ಕಪ್ ಪಂದ್ಯಗಳು ನಡೆಯಲಿವೆ. ಈ ಪಂದ್ಯದಲ್ಲಿ ಆಡಲು ಸೋಮದೇವ್, ಲಿಯಾಂಡರ್ ಪೇಸ್, ಸನಮ್ ಸಿಂಗ್ ಹಾಗೂ ಯೂಕಿ ಭಾಂಬ್ರಿ ಸೋಮವಾರ ಬೆಂಗಳೂರಿಗೆ ಬಂದಿದ್ದಾರೆ.`ಭಾರತದಲ್ಲಿ ಟೆನಿಸ್ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೇರಿಸಬೇಕೆಂಬುದು ನನ್ನ ಗುರಿ. ಇತ್ತೀಚಿಗೆ ಹಲವು ವಿವಾದಗಳ ಕಾರಣ ಟೆನಿಸ್ ಅಭಿಮಾನಿಗಳಿಗೆ ಬೇಸರವಾಗಿದೆ. ಯುವ ಪ್ರತಿಭೆಗಳು  ಸ್ಪರ್ಧಾತ್ಮಕವಾಗಿ ಬಲಿಷ್ಠರಾಗುತ್ತಿದ್ದಾರೆ. ಅವರ ನೆರವಿನಿಂದ ಭಾರತದಲ್ಲಿ ಅತ್ಯುತ್ತಮ ತಂಡವನ್ನು ಕಟ್ಟಬೇಕೆನ್ನುವ ಗುರಿ ಹೊಂದಿದ್ದೇವೆ' ಎಂದು 28 ವರ್ಷದ ಸೋಮದೇವ್ ಮಾಧ್ಯಮದವರ ಎದುರು ಹೇಳಿದರು.ಚೇತರಿಕೆಯ ಹಾದಿ: ಕಳೆದ ವರ್ಷ ಬಹುತೇಕ ಗಾಯದ ಸಮಸ್ಯೆಯಿಂದ ಬಳಲಿದ್ದ ಸೋಮ್ ಇತ್ತೀಚಿಗಷ್ಟೇ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ಮುಕ್ತಾಯವಾದ ಮಿಯಾಮಿ ಮಾಸ್ಟರ್ಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರು. ವಿಶ್ವ ರರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಎದುರು ಮೂರನೇ ಸುತ್ತಿನಲ್ಲಿ ಸೋಮ್ ಸೋಲು ಕಂಡಿದ್ದರು.ದೀರ್ಘ ವಿಶ್ರಾಂತಿಯ ಬಳಿಕ ಚೇತರಿಸಿಕೊಂಡಿದ್ದ ಈ ಆಟಗಾರ ಲಂಡನ್ ಒಲಿಂಪಿಕ್ಸ್‌ಗೆ `ವೈಲ್ಡ್‌ಕಾರ್ಡ್' ಪ್ರವೇಶ ಪಡೆದಿದ್ದರು. ಆದರೆ, ಮೊದಲ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಟಾಮ್ ಬೂನ್ ಎದುರು ನಿರಾಸೆ ಅನುಭವಿಸಿದ್ದರು. ಅಮೆರಿಕ ಓಪನ್ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದರು.`ನಮ್ಮ ತಂಡವೂ ಬಲಿಷ್ಠವಾಗಿದೆ. ಆಟಗಾರರ ನಡುವೆ ಉತ್ತಮ ಹೊಂದಾಣಿಕೆಯಿದೆ. 2011ರಲ್ಲಿ ಜಪಾನ್ ವಿರುದ್ಧ ಕೊನೆಯ ಸಲ ಡೇವಿಸ್ ಕಪ್‌ನಲ್ಲಿ ಆಡಿದ್ದೆ. ಎರಡು ವರ್ಷಗಳ ನಂತರ ಈಗ ಮತ್ತೊಮ್ಮೆ ಆಡುವ ಅವಕಾಶ ಲಭಿಸಿದೆ. ಭುಜದ ನೋವಿನ ಕಾರಣ ಕಳೆದ ವರ್ಷ ಬಹುತೇಕ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿದ್ದೇನೆ' ಎಂದು ಸೋಮದೇವ್ ನುಡಿದರು.ಇದೇ ವರ್ಷದ ಚೆನ್ನೈ ಓಪನ್, ಆಸ್ಟ್ರೇಲಿಯನ್ ಓಪನ್, ಬಿಎನ್‌ಪಿ ಪರಿಬಾಸ್ ಓಪನ್ ಟೂರ್ನಿಗಳಲ್ಲಿ ಸೋಮ್ ಪಾಲ್ಗೊಂಡಿದ್ದರು. ಆದರೆ, ಎರಡನೇ ಸುತ್ತನ್ನು ದಾಟಿ ಹೋಗಲು ಅವರಿಂದ ಸಾಧ್ಯವಾಗಿರಲಿಲ್ಲ. 2008ರಲ್ಲಿ ಉಜ್ಬೇಕಿಸ್ತಾನ ವಿರುದ್ಧ ಸೋಮದೇವ್ ಮೊದಲ ಸಲ ಡೇವಿಸ್ ಕಪ್ ಆಡಿದ್ದರು.`ಮಿಯಾಮಿ ಟೂರ್ನಿಯಲ್ಲಿ ಜೊಕೊವಿಚ್ ಜೊತೆಗೆ ಆಡಿದ್ದು ಅತ್ಯುತ್ತಮ ಅನುಭವ. ಅದೊಂದು ಉತ್ತಮ ಪಂದ್ಯ. ಆ ಪಂದ್ಯದಿಂದ ಸಾಕಷ್ಟು ಪಾಠ ಕಲಿತಿದ್ದೇನೆ' ಎಂದು ಅವರು ನುಡಿದರು. ಈ ಆಟಗಾರ 64ನೇ ರ‍್ಯಾಂಕ್‌ನಲ್ಲಿದ್ದಾರೆ.ಟೆನಿಸ್ ಕೋರ್ಟ್‌ನಲ್ಲಿ ಫುಟ್‌ಬಾಲ್!:

ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕ್ರಿಕೆಟ್ ಆಟಗಾರರು ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಆಡುವುದು ಸಹಜ. ಆದರೆ, ಟೆನಿಸ್ ಆಟಗಾರರು ಸೋಮವಾರ ಕೋರ್ಟ್‌ನಲ್ಲಿಯೇ ಫುಟ್‌ಬಾಲ್ ಆಡಿ ಗಮನ ಸೆಳೆದರು! ಉದ್ಯಾನನಗರಿಗೆ ಬಿಸಿಲಿನ ಕಾವು ತಡೆಯಲಾಗದೇ ಸನಮ್ ಅಂಗಿ ಬಿಚ್ಚಿ ಅಭ್ಯಾಸ ನಡೆಸಿದರು.ಮೂಲತಃ ತ್ರಿಪುರದವರಾದ ಸೋಮದೇವ್ ಇಂಡೊನೇಷ್ಯಾ ವಿರುದ್ಧದ ಪಂದ್ಯದಲ್ಲಿ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)