ಭರವಸೆಯ ಅಥ್ಲೀಟ್ ಚಂದ್ರಿಕಾ

7

ಭರವಸೆಯ ಅಥ್ಲೀಟ್ ಚಂದ್ರಿಕಾ

Published:
Updated:
ಭರವಸೆಯ ಅಥ್ಲೀಟ್ ಚಂದ್ರಿಕಾ

ಜಿಲ್ಲಾ ಅಥ್ಲೀಟ್‌ನಲ್ಲಿ ಸಂಚಲನ ಮೂಡಿಸಿದ ಮಿಂಚು ಟಿ.ಎಂ.ಚಂದ್ರಿಕಾ. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕ್ರೀಡೆಯಲ್ಲಿನ ಅಪ್ರತಿಮ ಸಾಧನೆಗೆ ಜಿಲ್ಲೆಯ `ಶ್ರೇಷ್ಠ ಮಹಿಳಾ ಕ್ರೀಡಾಪಟು' ಪ್ರಶಸ್ತಿ ಸಂದಿದೆ.ಪ್ರಸ್ತುತ ಗುಬ್ಬಿ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ. ಚಿಕ್ಕಂದಿನಿಂದಲೂ ಓದಿನ ಜತೆ ಕ್ರೀಡೆಯ ನಂಟು. ಪ್ರೌಢಶಾಲೆ, ಕಾಲೇಜು ಕ್ರೀಡಾಕೂಟಗಳಲ್ಲಿ ಈಕೆಯದ್ದೇ ಮೇಲುಗೈ. ಈಕೆಯ ಓಟದಲ್ಲಿ ಚಿರತೆಯ ವೇಗ, ಚಿಗರೆಯ ನೆಗೆತ, ಕುದುರೆಯ ಕಾಲ್ಚೆಳಕನ್ನು ಕಂಡು ಬೆರಗಾದವರು ಬಹಳಷ್ಟು ಮಂದಿ.ವ್ಯಾಸಂಗದ ಜತೆ ಅಥ್ಲಿಟಿಕ್‌ನಲ್ಲಿ ಮಿಂಚುತ್ತಿರುವ ಜಿಲ್ಲೆಯ ಪ್ರತಿಭೆಗೆ ಅಥ್ಲೆಟಿಕ್ ತರಬೇತುದಾರ ಶಿವಪ್ರಸಾದ್ ಮಾರ್ಗದರ್ಶಕ. ಅವರ ಗರಡಿಯಲ್ಲಿ ಬೆವರು ಸುರಿಸುವ ಚಂದ್ರಿಕಾ ಗುರುವಿನ ನೆಚ್ಚಿನ ಶಿಷ್ಯೆ.ತುಮಕೂರಿನಲ್ಲಿ 2007ರಲ್ಲಿ ನಡೆದ ಜಿಲ್ಲಾ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ನೀಡಿ ತರಬೇತುದಾರರ ಮೆಚ್ಚುಗೆ ಪಡೆದರು.ಇಲ್ಲಿಂದ ಆರಂಭಗೊಂಡ ಕ್ರೀಡಾಯಾತ್ರೆ ಈಗಲೂ ಮುಂದುವರಿದಿದೆ. ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಜಿಲ್ಲೆಯ ಕ್ರೀಡಾ ಕೀರ್ತಿಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ನೂರು, ಇನ್ನೂರು, ನಾನೂರು ಮೀಟರ್ ಓಟ, ರಿಲೆ, ಹರ್ಡಲ್ಸ್‌ನಲ್ಲೂ ಅಭ್ಯಾಸ ನಡೆಸಿ ಯಶಸ್ಸು ಕಂಡುಕೊಂಡಿದ್ದಾರೆ.2009, 2010, 2011ರಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ ಮೂರು ಬಾರಿಯೂ ಪ್ರಥಮ ಸ್ಥಾನ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿ ಚಿನ್ನದ ಪದಕ ಗಳಿಸಿದ ಸಂಭ್ರಮ ಈಕೆಯದ್ದು. ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲೂ ಪದಕ ವಿಜೇತೆ. ನಾನೂರು ಮೀಟರ್ ಹರ್ಡಲ್ಸ್‌ನಲ್ಲೂ ಪದಕ ಗೆದ್ದು ವಿಜಯದ ನಗೆ ಬೀರಿದರು.ಉತ್ತರ ಪ್ರದೇಶದ ಹರಿದ್ವಾರದಲ್ಲಿ 2007ರಲ್ಲಿ ನಡೆದ ಐದನೇ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗೆಲ್ಲಲಾಗದಿದ್ದರೂ; ಗಮನಾರ್ಹ ಸಾಧನೆ ಪ್ರದರ್ಶಿಸಿದರು. 2012ನೇ ಸಾಲಿನ ದಸರಾ ಕ್ರೀಡಾಕೂಟದಲ್ಲಿ ನಾನೂರು ಮೀಟರ್ ರಿಲೆ ಓಟದಲ್ಲಿ ತೀವ್ರ ಪೈಪೋಟಿ ನೀಡಿಯೂ ಕಂಚಿನ ಪದಕಕ್ಕೆ ತೃಪ್ತರಾದರು.ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಕಾಲೇಜು ಕ್ರೀಡಾಕೂಟದಲ್ಲಿ ಸತತ ಎರಡು ವರ್ಷ ಪಾಲ್ಗೊಂಡು ನೀಡಿದ ಸರ್ವಾಂಗೀಣ ಪ್ರದರ್ಶನಕ್ಕೆ ಮಹಿಳಾ ವಿಭಾಗದ `ಶ್ರೇಷ್ಠ ಅಥ್ಲೀಟ್' ಪ್ರಶಸ್ತಿ ಈಕೆಯನ್ನು ಅರಸಿ ಬಂತು. ಗದಗದಲ್ಲಿ ನಡೆದ 2012-13ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದು ಜಿಲ್ಲೆಯ ಕ್ರೀಡಾ ಕೀರ್ತಿ ಹೆಚ್ಚಿಸಿದರು.ಕೊಪ್ಪಳದಲ್ಲಿ ನಡೆದ 2012-13ನೇ ಸಾಲಿನ ರಾಜ್ಯ ಮಹಿಳಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಚಂದ್ರಕಲಾ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ತನ್ನ ಸಾಧನೆಯನ್ನು ಉತ್ತಮ ಪಡಿಸಿಕೊಂಡರು.ಜಾರ್ಖಂಡ್‌ನ ರಾಂಚಿಯಲ್ಲಿ 2011-12ರಲ್ಲಿ ನಡೆದ 37ನೇ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ರಾಜ್ಯ ಅಥ್ಲೆಟಿಕ್ ತಂಡ ಪ್ರತಿನಿಧಿಸಿದರು. ಚೆನ್ನೈನಲ್ಲಿ 2012-13ರಲ್ಲಿ ನಡೆದ 38ನೇ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry