ಶನಿವಾರ, ಫೆಬ್ರವರಿ 27, 2021
27 °C

ಭರವಸೆಯ ಈ ಹೊತ್ತಿನಲ್ಲಿ...

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಭರವಸೆಯ ಈ ಹೊತ್ತಿನಲ್ಲಿ...

ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹೆಸರು ರಾರಾಜಿಸಲು ಕಾರಣವಾಗಿರುವುದು ಶೂಟಿಂಗ್‌ ಸ್ಪರ್ಧೆ. ಒಲಿಂಪಿಕ್ಸ್‌, ಏಷ್ಯನ್‌ ಕೂಟ, ಕಾಮನ್‌ವೆಲ್ತ್‌ ಕೂಟ, ವಿಶ್ವ ಚಾಂಪಿಯನ್‌ಷಿಪ್‌, ವಿಶ್ವಕಪ್‌ಗಳಲ್ಲಿ ಭಾರತಕ್ಕೆ ಪದಕ ಕಟ್ಟಿಟ್ಟ ಬುತ್ತಿ. ರಿಯೊ ಒಲಿಂಪಿಕ್ಸ್‌ನಲ್ಲೂ ಭಾರತದ ಭರವಸೆ ಇರುವುದು ಶೂಟಿಂಗ್‌ ಮೇಲೆಯೇ. ಈ ಕುರಿತು ಕೆ. ಓಂಕಾರ ಮೂರ್ತಿ ವಿಶ್ಲೇಷಣೆ ಮಾಡಿದ್ದಾರೆ.ಒಲಿಂಪಿಕ್ಸ್‌ನಲ್ಲಿ 4 ಪದಕ...!

ಶೂಟಿಂಗ್‌ ವಿಭಾಗದಲ್ಲಿ ಭಾರತದ ಸಾಧನೆ ಇದು. ಇದುವರೆಗೆ ನಡೆದ ಒಲಿಂಪಿಕ್ಸ್‌ಗಳಲ್ಲಿ ಭಾರತ ಒಟ್ಟು 26 ಪದಕ ಜಯಿಸಿದೆ. ಅದರಲ್ಲಿ 4 ಪದಕಗಳು ಶೂಟಿಂಗ್‌ನಿಂದಲೇ ಬಂದಿರುವುದು ವಿಶೇಷ. ಅಷ್ಟೇ ಅಲ್ಲ; ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟವರೇ ಶೂಟರ್‌ ಅಭಿನವ್‌ ಬಿಂದ್ರಾ. ಇದು ಶೂಟಿಂಗ್‌ನಲ್ಲಿ ಭಾರತದ ಸಾಧನೆಯ ಪ್ರತಿಬಿಂಬ ಕೂಡ.

ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟಗಳ ಪದಕ ಪಟ್ಟಿಯಲ್ಲಿ ಭಾರತ ರಾರಾಜಿಸಲು ಕಾರಣವಾಗುತ್ತಿರುವುದು ಶೂಟರ್‌ಗಳು. ಬಿಂದ್ರಾ, ಜಸ್ಪಾಲ್ ರಾಣಾ, ಜಿತು ರಾಯ್‌, ರಾಜ್ಯವರ್ಧನ್‌ ಸಿಂಗ್‌ ರಾಠೋಡ್‌, ಮಾನವಜಿತ್‌ ಸಿಂಗ್‌ ಸಂಧು, ಸಮರೇಶ್‌ ಜಂಗ್‌, ಸಂಜೀವ್‌ ರಜಪೂತ್‌, ವಿಜಯ್‌ ಕುಮಾರ್, ಗಗನ್‌ ನಾರಂಗ್, ಅಪೂರ್ವಿ ಚಾಂಡೇಲಾ, ರಂಜನ್‌ ಸೋಧಿ, ಪಿ.ಎನ್‌.ಪ್ರಕಾಶ್‌ , ಅಂಜಲಿ ಭಾಗವತ್‌ ಹಾಗೂ ಹೀನಾ ಸಿಧು ಭಾರತ ಕಂಡ ಪ್ರಮುಖ ಶೂಟರ್‌ಗಳು.2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ರಾಠೋಡ್‌ ಅವರು ಗೆದ್ದ ಬೆಳ್ಳಿ ಪದಕ ಭಾರತದ ಶೂಟಿಂಗ್ ಕ್ಷೇತ್ರಕ್ಕೆ ಹೊಸ ತಿರುವು ನೀಡಿತು. ಕಳೆದ ಬಾರಿ ಎರಡು ಪದಕ ಒಲಿದಿತ್ತು. ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಭಾರತದ ಭರವಸೆ ಶೂಟಿಂಗ್. ಕಳೆದ ಬಾರಿಗಿಂತ ಹೆಚ್ಚು ಪದಕ ಜಯಿಸುವ ನಿರೀಕ್ಷೆ ಇದೆ.ಪ್ರತಿ ಬಾರಿಯೂ ಹೊಸ ಹಾಗೂ ಭರವಸೆಯ ಶೂಟರ್‌ಗಳ ಪ್ರವೇಶವಾಗುತ್ತಿದೆ. ಇದಕ್ಕೆ ಕಾರಣ ಶೂಟಿಂಗ್‌ನಲ್ಲಿ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಲಭಿಸುತ್ತಿರುವ ಯಶಸ್ಸು. ಈ ಬಾರಿಯ ಒಲಿಂಪಿಕ್ಸ್‌ನ ಕೇಂದ್ರ ಬಿಂದುಗಳೆಂದರೆ ಜಿತು ರಾಯ್‌, ಪಿ.ಎನ್‌.ಪ್ರಕಾಶ್‌ ಹಾಗೂ ಹೀನಾ ಸಿಧು. ಜೊತೆಯಲ್ಲಿ ’ಹಳೆಯ ಹುಲಿ’ಗಳಾದ ಅಭಿನವ್‌ ಬಿಂದ್ರಾ ಹಾಗೂ ಗಗನ್ ನಾರಂಗ್‌ ಇದ್ದಾರೆ.ಹೀನಾ ಸಾಧನೆಯ ಹಿಂದೆ...

ದಂತ ವೈದ್ಯೆಯೂ ಆಗಿರುವ ಹೀನಾ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಹೋದ ವಾರವಷ್ಟೇ ಏಷ್ಯಾ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್‌ಗೆ ಅವಕಾಶ ಗಿಟ್ಟಿಸಲು ಇದು ಕೊನೆಯ ಅವಕಾಶವಾಗಿತ್ತು.ಪಂಜಾಬ್‌ ಮೂಲದ ಇವರು ಕಾಮನ್‌ವೆಲ್ತ್ ಕೂಟ, ಏಷ್ಯಾನ್ ಕೂಟ, ವಿಶ್ವಕಪ್‌ಗಳಲ್ಲಿ ಪದಕ ಜಯಿಸಿದ್ದಾರೆ. 10 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ಇವರಿಗೆ ಪತಿ ರೋನಕ್‌ ಪಂಡಿತ್‌ ಕೋಚ್‌. ರೋನಕ್‌ ಕೂಡ ಚಾಂಪಿಯನ್ ಶೂಟರ್‌.ಶೂಟಿಂಗ್‌ ಕೋಟಾದಡಿ ಭಾರತೀಯ ರೈಫಲ್‌ ಸಂಸ್ಥೆಯು 2012ರಲ್ಲಿ ಲಂಡನ್‌ ಒಲಿಂಪಿಕ್ಸ್‌ಗೆ ಸಿಧು ಅವರನ್ನು ಆಯ್ಕೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ತಮಗೆ ಸಲ್ಲಬೇಕಾಗಿದ್ದ ಕೋಟಾದಡಿ ಸಿಧುಗೆ ಅವಕಾಶ ನೀಡಲಾಗಿದೆ ಎಂದು ಅಥೆನ್ಸ್‌ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ರಾಜ್ಯವರ್ಧನ್‌ ಸಿಂಗ್‌ ರಾಠೋಡ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ರೈಫಲ್‌ ಸಂಸ್ಥೆ ತನ್ನ ನಿರ್ಧಾರ ಬದಲಾಯಿಸಲಿಲ್ಲ.ವೃತ್ತಿ ತೊರೆದು ಶೂಟಿಂಗ್‌ ಪ್ರೀತಿಗೆ ಬಿದ್ದಿರುವ ಹೀನಾ ತಮ್ಮ ಮನೆಯಲ್ಲಿ ಶೂಟಿಂಗ್‌ ರೇಂಜ್‌ ನಿರ್ಮಿಸಿಕೊಂಡಿದ್ದಾರೆ. ಇವರ ತಂದೆ ರಾಜ್ಬೀರ್‌ ಸಿಧು ರಾಷ್ಟ್ರೀಯ ಮಟ್ಟದ ಶೂಟರ್‌. ‘ಲಂಡನ್‌ ಒಲಿಂಪಿಕ್ಸ್‌ ನನಗೆ ಹಲವು ಪಾಠ ಕಲಿಸಿದೆ. ಆ ಒಲಿಂಪಿಕ್ಸ್‌ ಬಳಿಕ ನನ್ನ ತರಬೇತಿಯ ವಿಧಾನವೇ ಬದಲಾಯಿತು. ದಿನವಿಡೀ ಅಭ್ಯಾಸ ನಡೆಸುವುದರಲ್ಲಿ ನನಗೆ ನಂಬಿಕೆ ಇಲ್ಲ. ಎರಡು ಗಂಟೆ ತೃಪ್ತಿಯಿಂದ ಹಾಗೂ ಗಮನವಿಟ್ಟು ಅಭ್ಯಾಸ ನಡೆಸಿದರೆ ಸಾಕು’ ಎನ್ನುತ್ತಾರೆ ಹೀನಾ.27 ವರ್ಷ ವಯಸ್ಸಿನ ಹೀನಾ ಎರಡು ವರ್ಷಗಳ ಹಿಂದೆ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಅದು ಅವರ ಜೀವನದ ಮಹತ್ವದ ಸಾಧನೆ. ವಿಶ್ವಕಪ್‌ನ ಪಿಸ್ತೂಲ್‌ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಚಿನ್ನದ ಗೆದ್ದ ಭಾರತದ ಮೊದಲ ಶೂಟರ್‌ ಕೂಡ. ಒಂದು ವರ್ಷದಿಂದ ವಿವಿಧ ಸ್ಪರ್ಧೆಗಳಲ್ಲಿ ಪದಕ ಜಯಿಸಿರುವ ಅವರ ಮೇಲೆ ಒಲಿಂಪಿಕ್ಸ್‌ನಲ್ಲಿ ಅಪಾರ ನಿರೀಕ್ಷೆಗಳಿವೆ.ಹಾಗೆಯೇ, ಜಿತು ರಾಯ್‌ ಮೇಲೂ ಪದಕದ ಭರವಸೆ ಇದೆ. ಎರಡು ವರ್ಷಗಳಿಂದ ಅದ್ಭುತ ಫಾರ್ಮ್‌ನಲ್ಲಿರುವ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, ಇಂಚೆನ್ ಏಷ್ಯನ್‌ ಕೂಟದಲ್ಲಿ ಚಿನ್ನ ಹಾಗೂ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದಾರೆ. ಒಂದೇ ವಿಶ್ವಕಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್‌ ಕೂಡ. 10 ಮೀಟರ್‌ ಏರ್‌ ಪಿಸ್ತೂಲ್‌ ಹಾಗೂ 50 ಮೀಟರ್‌ ಪಿಸ್ತೂಲ್‌ ಅವರ ನೆಚ್ಚಿನ ಸ್ಪರ್ಧೆಗಳು. ಏರ್‌ ಪಿಸ್ತೂಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.ರಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಸ್ಪರ್ಧೆಯ 15 ವಿಭಾಗಗಳಲ್ಲಿ ವಿಶ್ವದ ಸುಮಾರು 390 ಶೂಟರ್‌ಗಳು ಪೈಪೋಟಿ ನಡೆಸಲಿದ್ದಾರೆ. ಈ ಸವಾಲಿನ ನಡುವೆ ಭಾರತಕ್ಕೆಷ್ಟು ಪದಕ ಬರಬಹುದು ಎಂಬುದು ಎಲ್ಲರ ಕುತೂಹಲ.ಲಂಡನ್‌ ಒಲಿಂಪಿಕ್ಸ್‌ನಲ್ಲಿ 11 ಶೂಟಿಂಗ್‌ಪಟುಗಳು...

ಲಂಡನ್‌ನಲ್ಲಿ ನಡೆದ 2012ರ ಒಲಿಂಪಿಕ್ಸ್‌ನಲ್ಲಿ ಭಾರತದ 11 ಶೂಟರ್‌ಗಳು ಪಾಲ್ಗೊಂಡಿದ್ದರು. ಅವರಲ್ಲಿ 4 ಮಹಿಳೆಯರಿದ್ದರು. ಈ ಬಾರಿಯ ಒಲಿಂಪಿಕ್ಸ್‌ಗೆ ಹೀನಾ ಸಿಧು, ಕಿನಾನ್‌ ಚೆನೈ, ಗಗನ್‌ ನಾರಂಗ್‌, ಕರ್ನಾಟಕದ ಪಿ.ಎನ್‌.ಪ್ರಕಾಶ್‌, ಚೈನ್‌ ಸಿಂಗ್‌, ಗುರುಪ್ರೀತ್‌ ಸಿಂಗ್‌, ಜಿತು ರಾಯ್‌, ಅಪೂರ್ವಿ ಚಾಂಡೇಲಾ, ಅಯೋನಿಕಾ ಪಾಲ್‌ ಹಾಗೂ ಅಭಿನವ್‌ ಬಿಂದ್ರಾ ಈಗಾಗಲೇ ಅರ್ಹತೆ ಗಿಟ್ಟಿಸಿದ್ದಾರೆ. ವಿಶೇಷವೆಂದರೆ ಬಿಂದ್ರಾ ಅವರ ಪಾಲಿಗೆ ಇದು ಸತತ ಐದನೇ ಒಲಿಂಪಿಕ್ಸ್‌. 2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದರು.

ಲಂಡನ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ವಿಜಯ್‌ ಕುಮಾರ್‌ ಈ ಬಾರಿ ಇನ್ನೂ ಅರ್ಹತೆ ಗಿಟ್ಟಿಸಿಲ್ಲ. ಏಷ್ಯನ್‌ ಒಲಿಂಪಿಕ್‌ ಶೂಟಿಂಗ್ ಅರ್ಹತಾ ಸುತ್ತಿನ ಪೈಪೋಟಿಯಲ್ಲಿ ಅವರು ಎಡವಿದರು.ಒಲಿಪಿಂಕ್ಸ್‌ಗೆ ರಾಜ್ಯದ ಪ್ರಕಾಶ್‌

ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಕರ್ನಾಟಕದ ಪಿ.ಎನ್‌.ಪ್ರಕಾಶ್‌ ಈಗಾಗಲೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧಿಸುವ ಅವರು 2015ರ ಆಗಸ್ಟ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಈ ಅವಕಾಶ ಪಡೆದುಕೊಂಡಿದ್ದಾರೆ.

ಪ್ರಕಾಶ್‌ ಅವರು ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ರಜತ ಪದಕ ಜಯಿಸಿದ್ದರು. ಹೋದ ವರ್ಷ ದಕ್ಷಿಣ ಕೊರಿಯದ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅನಾರೋಗ್ಯದ ಸಮಸ್ಯೆ ನಡುವೆಯೂ ಏಷ್ಯನ್‌ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.