ಮಂಗಳವಾರ, ನವೆಂಬರ್ 19, 2019
29 °C
ಜಿಲ್ಲಾ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಗ್ರಾಮೀಣ ಮಕ್ಕಳ ಮೇಲುಗೈ

ಭರವಸೆ ಮೂಡಿಸಿದ `ಯುವ ವಿಜ್ಞಾನಿಗಳು'

Published:
Updated:
ಭರವಸೆ ಮೂಡಿಸಿದ `ಯುವ ವಿಜ್ಞಾನಿಗಳು'

ನಾಪೋಕ್ಲು: ಗಣಿತ ಹಾಗೂ ವಿಜ್ಞಾನ ವಿಷಯಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ `ಕಬ್ಬಿಣದ ಕಡಲೆ' ಎಂಬ ಮಾತು ಈಗ ಸುಳ್ಳಾಗಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಇಂದು ಮುಂದಿದ್ದಾರೆ. ಇದಕ್ಕೆ ಕಾರಣ ಪ್ರೌಢಶಾಲೆ ಹಂತದಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ನಡೆಯುತ್ತಿರುವ ಕ್ರಿಯಾತ್ಮಕ ಚಟುವಟಿಕೆಗಳು.ಹೌದು. ವಿರಾಜಪೇಟೆ ಮತ್ತು ಗೋಣಿಕೊಪ್ಪ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಮಾತಿಗೆ ಪ್ರತ್ಯಕ್ಷ್ಯ ಸಾಕ್ಷಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಈ ಎರಡೂ ಪ್ರೌಢಶಾಲೆಗಳ ವಿದ್ಯಾರ್ಥಿಗಳೇ `ಯುವ ವಿಜ್ಞಾನಿ' ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಎಸ್. ಅಜಿತ್ 2012-13ರ ಸಾಲಿನ ಜಿಲ್ಲಾ ಮಟ್ಟದ ಯುವ ವಿಜ್ಞಾನಿಯಾಗಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ಇದೇ ಶಾಲೆಯ ನೆಲ್ಲಮಕ್ಕಡ ಡಿ.ಬೋಪಣ್ಣ ಮತ್ತು ಗೋಣಿಕೊಪ್ಪದ ಕಳತ್‌ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಎಂ.ಸಿ. ಮೋನಿಷ್ ಉತ್ತಪ್ಪ ಅವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದ `ಯುವ ವಿಜ್ಞಾನಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ.ಕೆ.ಎಸ್. ಅಜಿತ್ ಅವರು ವಿರಾಜಪೇಟೆಯ ಕೆ.ಎನ್. ಶಿವಶಂಕರ್ ಮತ್ತು ಪ್ರಮೀಳಾ ದಂಪತಿಯ ಪುತ್ರ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾದ ಇವರು, ರಾಜ್ಯ ವಿಜ್ಞಾನ ಪರಿಷತ್ತು ಸಂಘಟಿಸುತ್ತಿರುವ ರಸಪ್ರಶ್ನೆ ಹಾಗೂ ಇನ್ನಿತರ ವೈಜ್ಞಾನಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ನಿರಂತರವಾಗಿ ಉತ್ತಮ ಅಂಕ ಗಳಿಸಿದ್ದಾರೆ. ವಿಜ್ಞಾನ ವಸ್ತುಪ್ರದರ್ಶನ, ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲೂ ಮುಂದೆ. ಎಂಜಿನಿಯರ್ ಆಗುವ ಹಂಬಲ ಇರುವ ಅಜಿತ್ ಈಗಾಗಲೇ ಭರವಸೆ ಮೂಡಿಸಿದ್ದಾರೆ.ಜೂನ್ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಅಜಿತ್ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.ಸತತ ಐದು ಬಾರಿ ಪ್ರಶಸ್ತಿ!

ದ್ವಿತೀಯ ಸ್ಥಾನ ಗಳಿಸಿರುವ ನೆಲ್ಲಮಕ್ಕಡ ಡಿ.ಬೋಪಣ್ಣ ಕೂಡ ಸಂತ ಅನ್ನಮ್ಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ. ಎನ್.ಬಿ. ದೇವಯ್ಯ ಮತ್ತು ರೂಪಾ ದಂಪತಿಯ ಪುತ್ರ. ವೈಜ್ಞಾನಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೇ ಯುವ ವಿಜ್ಞಾನಿ ಪ್ರಶಸ್ತಿ ಗಳಿಸಲು ಸಹಕಾರಿಯಾಯಿತು ಎಂಬುದು ಬೋಪಣ್ಣ ಅವರ ಅಭಿಪ್ರಾಯ.ಶಿಕ್ಷಕ ಹ್ಯೂಬರ್ಟ್ ಅವರ ಮಾರ್ಗದರ್ಶನದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ನಿರಂತರವಾಗಿ ಐದು ವರ್ಷಗಳಿಂದ `ಯುವ ವಿಜ್ಞಾನಿ' ಪ್ರಶಸ್ತಿಗಳನ್ನು ಗಳಿಸುತ್ತಿದ್ದಾರೆ. ಇದರ ಕೀರ್ತಿ ಶಿಕ್ಷಕ ಹ್ಯೂಬರ್ಟ್ ಅವರಿಗೇ ಸಲ್ಲಬೇಕು.ತೃತೀಯ ಸ್ಥಾನ ಪಡೆದ ಎಂ.ಸಿ. ಮೋನಿಷ್ ಉತ್ತಪ್ಪ ಗೋಣಿಕೊಪ್ಪದ ಕಳತ್‌ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ. ಎಂ.ಯು. ಚೆಂಗಪ್ಪ ಮತ್ತು ವಿಂದ್ಯಾನೀಲಮ್ಮ ದಂಪತಿಯ ಪುತ್ರ.ಪ್ರಶಸ್ತಿ ಪಡೆದ ಮೂವರೂ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೂಡ ನೀಡಲಾಗಿದೆ. ವಿದ್ಯಾರ್ಥಿಗಳು ನಿರಂತರವಾಗಿ ಶಾಲೆಗೆ ಪ್ರಶಸ್ತಿಗಳ ಬುಟ್ಟಿಯನ್ನೇ ಹೊತ್ತು ತಂದಿದ್ದಕ್ಕೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)