ಭರವಸೆ ಮೂಡಿಸಿದ ರಾಬಿನ್-ರಾಹುಲ್

7
ರಣಜಿ: ದೆಹಲಿಗೆ ಇನಿಂಗ್ಸ್ ಮುನ್ನಡೆ, ತಿರುಗೇಟು ನೀಡುವತ್ತ ಕರ್ನಾಟಕದ ದಿಟ್ಟ ಹೆಜ್ಜೆ

ಭರವಸೆ ಮೂಡಿಸಿದ ರಾಬಿನ್-ರಾಹುಲ್

Published:
Updated:
ಭರವಸೆ ಮೂಡಿಸಿದ ರಾಬಿನ್-ರಾಹುಲ್

ಬೆಂಗಳೂರು: ಬರಡು ನೆಲದಲ್ಲಿ ಮಳೆ ಸುರಿದಂತಹ ಅನುಭವ. ಗೆಲುವನ್ನು ಅರಸಿ ಹೊರಟ ಕರ್ನಾಟಕ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ಖುಷಿ. ಇದಕ್ಕೆಲ್ಲಾ ಕಾರಣವಾಗಿದ್ದು ಆರಂಭಿಕ ಜೋಡಿ ರಾಬಿನ್ ಉತ್ತಪ್ಪ ಹಾಗೂ ಕೆ.ಎಲ್. ರಾಹುಲ್ ಅವರ ಅಮೋಘ  ಬ್ಯಾಟಿಂಗ್.ಈ ಸಲದ ರಣಜಿಯಲ್ಲಿ ಚೊಚ್ಚಲ ಗೆಲುವಿನ ಕನಸು ಕಾಣುತ್ತಿರುವ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮಆರಂಭವನ್ನೇ ಪಡೆದಿದೆ. ದೆಹಲಿ ತಂಡವನ್ನು 258 ರನ್‌ಗಳಿಗೆ ಆಲ್‌ಔಟ್ ಮಾಡಿದ ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯದಿಂದ ಹೊರಬರುವ ಹಾದಿಯಲ್ಲಿದ್ದಾರೆ.

ಪ್ರಥಮ ಇನಿಂಗ್ಸ್‌ನಲ್ಲಿ ದೆಹಲಿ 66 ರನ್‌ಗಳ ಮುನ್ನಡೆ ಗಳಿಸಿತ್ತು. ಈ ಮುನ್ನಡೆಯನ್ನು ಕರ್ನಾಟಕ 16 ಓವರ್‌ಗಳಾಗುವಷ್ಟರಲ್ಲಿ ಚುಕ್ತಾ ಮಾಡಿತು. ಉತ್ತಪ್ಪ (ಬ್ಯಾಟಿಂಗ್ 77, 113ಎಸೆತ, 13 ಬೌಂಡರಿ) ಮತ್ತು ರಾಹುಲ್ (ಬ್ಯಾಟಿಂಗ್ 53, 74 ಎಸೆತ) ಕರ್ನಾಟಕ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ಯವ ಮುನ್ಸೂಚನೆ ನೀಡಿದ್ದಾರೆ. ಈ ಆರಂಭಿಕ ಜೋಡಿಯ ಅರ್ಧಶತಕದಿಂದ ಆತಿಥೇಯರು ಭಾನುವಾರದ ಅಂತ್ಯಕ್ಕೆ 31 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 136 ರನ್ ಗಳಿಸಿದ್ದಾರೆ. ಇದರಿಂದ ವಿನಯ್ ಪಡೆ 70 ರನ್‌ಗಳ ಮುನ್ನಡೆ ಸಾಧಿಸಿದೆ.ಉತ್ತಪ್ಪ ಕಮಾಲ್: ತಮ್ಮ ಎಂದಿನ ನೈಜ ಆಟ ಆಡುವಲ್ಲಿ ವಿಫಲರಾಗಿದ್ದ ಉತ್ತಪ್ಪ ದ್ವಿತೀಯ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಹೆಜ್ಜೆ ಊರಿದರು. ನೇರ ಡ್ರೈವ್‌ಗಳಲ್ಲಿ ಗಳಿಸಿದ ಮೂರು ಬೌಂಡರಿಗಳು ಈ ಬಲಗೈ ಬ್ಯಾಟ್ಸ್‌ಮನ್‌ನ ಹಳೆಯ ಆಟದ ಶೈಲಿಯನ್ನು ನೆನಪಿಗೆ ತಂದುಕೊಟ್ಟಿತು. ಉತ್ತಪ್ಪ 64 ರನ್ ಗಳಿಸಿದ ವೇಳೆ ಜೀವದಾನ ಪಡೆದರು. ಪರ್ವಿಂದರ್ ಅವಾನ ಎಸೆತದಲ್ಲಿ ವೈಭವ್ ರಾವಲ್ ತಮ್ಮ ಬಳಿ ಬಂದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ಜೀವದಾನದ ಅವಕಾಶ ರಾಹುಲ್‌ಗೂ ಲಭಿಸಿತು. ಅದು 44ನೇ ಓವರ್‌ನಲ್ಲಿ. ಅನುಭವಿ ಉತ್ತಪ್ಪ ಜೊತೆಗೆ ರಾಹುಲ್ ಸಹ ಒಂಬತ್ತು ಬೌಂಡರಿ ಸಿಡಿಸಿದರು. ರಾಹುಲ್ ಈ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಗಳಿಸಿದರು. ಮುರಿಯದ ಮೊದಲ ವಿಕೆಟ್ ಈ ಜೋಡಿ 136 ರನ್ ಕಲೆ ಹಾಕಿದೆ. ಈ ಋತುವಿನಲ್ಲಿ ಕರ್ನಾಟಕದ ಅತ್ಯುತ್ತಮ ಆರಂಭಿಕ ಜೊತೆಯಾಟವಿದು. ಬರೋಡ ವಿರುದ್ಧದ ಪಂದ್ಯದಲ್ಲಿ ಕೆ.ಬಿ. ಪವನ್ ಮತ್ತು ಉತ್ತಪ್ಪ 112 ರನ್ ಗಳಿಸಿದ್ದು ಉತ್ತಮ ಆರಂಭಿಕ ಜೊತೆಯಾಟವಾಗಿತ್ತು.ದೆಹಲಿಗೆ ಇನಿಂಗ್ಸ್ ಮುನ್ನಡೆ: ಎರಡನೇ ದಿನದ ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡ ದೆಹಲಿ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಮಾತ್ರ ಹಿಂದೆ ಬೀಳಲಿಲ್ಲ. ಶನಿವಾರದ ಅಂತ್ಯಕ್ಕೆ 15 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 44 ರನ್ ಹಾಕಿದ್ದ ತಂಡ ಭೋಜನ ವಿರಾಮದ ವೇಳೆಗೆ ಏಳು ವಿಕೆಟ್ ಕಳೆದುಕೊಂಡಿತ್ತು. ದಿನದಾಟದ ಮೊದಲ ಅವಧಿಯಲ್ಲಿ ಐದು ವಿಕೆಟ್‌ಗಳು ಉರುಳಿದ್ದವು. ಕಲೆ ಹಾಕಿದ್ದು ಒಟ್ಟು 177 ರನ್ ಮಾತ್ರ. ಇನಿಂಗ್ಸ್ ಮುನ್ನಡೆ ಸಾಧಿಸಲು ಈ ಸಂದರ್ಭದಲ್ಲಿ 15 ರನ್‌ಗಳು ಅಗತ್ಯವಿದ್ದವು.ಭೋಜನ ವಿರಾಮದ ನಂತರ 47.2ನೇ ಓವರ್‌ನಲ್ಲಿ ಸುಮಿತ್ ನರ್ವಾಲ್ (29, 59ಎಸೆತ, 3 ಬೌಂಡರಿ) ಲೆಗ್‌ಸೈಡ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಪಡೆದು, ಒಟ್ಟು 1000 ರನ್ ಕಲೆ ಹಾಕಿದ ದೆಹಲಿಯ ಐದನೇ ಆಲ್‌ರೌಂಡರ್ ಎನ್ನುವ ಕೀತಿಯನ್ನೂ ಸುಮಿತ್ ಪಡೆದುಕೊಂಡರು.ತಿರುವು ನೀಡಿದ ಜೊತೆಯಾಟ: ಎಂಟು ಹಾಗೂ ಹತ್ತನೇ ವಿಕೆಟ್ ಜೊತೆಯಾಟದಲ್ಲಿ ಕಲೆ ಹಾಕಿದ ರನ್‌ಗಳು ದೆಹಲಿ ಇನಿಂಗ್ಸ್ ಮುನ್ನಡೆ ಕನಸಿಗೆ ಬಲ ತುಂಬಿದವು. ಎಂಟನೇ ವಿಕೆಟ್ ಜೊತೆಯಾಟದಲ್ಲಿ ಪರ್ವಿಂದರ್ ಅವಾನ (74, 61 ಎಸೆತ, 13 ಬೌಂಡರಿ, 2 ಸಿಕ್ಸರ್) ಸುಮಿತ್ ಜೊತೆ 62 ಮತ್ತು ಹತ್ತನೇ ವಿಕೆಟ್‌ಗೆ ವಿಕಾಸ್ ಮಿಶ್ರಾ ಜೊತೆ 50 ನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಪರ್ವಿಂದರ್ ಕೊನೆಯಲ್ಲಿ ಆಡಿದ ರೀತಿಯಂತೂ ಸ್ಮರಣೀಯ.ಬ್ಯಾಟ್ಸ್‌ಮನ್‌ಗಳು ಆಡಬೇಕಿದ್ದ ರೀತಿಯಲ್ಲಿ ಬೌಲರ್ ಪರ್ವಿಂದರ್ ಬ್ಯಾಟ್ ಬೀಸಿದರು. ಲಾಂಗ್ ಆನ್‌ನಲ್ಲಿ ಗಳಿಸಿದ ಎರಡೂ ಸಿಕ್ಸರ್‌ಗಳು ಆಕರ್ಷವಾಗಿದ್ದವು. ಪರ್ವಿಂದರ್ ರಣಜಿಯಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ ಇದಾಗಿದೆ. 2008-09ರಲ್ಲಿ ರಾಜಸ್ತಾನ ವಿರುದ್ಧ ಗಳಿಸಿದ್ದ 23 ರನ್ ಅವರ ಇದುವರೆಗಿನ ಗರಿಷ್ಠ ವೈಯಕ್ತಿಕ ಹೆಚ್ಚು ಸ್ಕೋರು ಆಗಿತ್ತು.ದಿನದಾಟದ ಆರಂಭದಿಂದಲೂ ವಿಕೆಟ್ ಪಡೆಯಲು ಪರದಾಡಿದ್ದ ಕೆ.ಪಿ. ಅಪ್ಪಣ್ಣ ಎರಡನೇ ಅವಧಿಯಲ್ಲಿ ಮೇಲಿಂದ ಮೇಲೆ ಎರಡು ವಿಕೆಟ್ ಉರುಳಿಸಿದರು.

52ನೇ ಓವರ್‌ನಲ್ಲಿ ತೋಡಿದ ಮೊದಲ `ಖೆಡ್ಡಾ'ಕ್ಕೆ ಸುಮಿತ್ ಬಿದ್ದರು. ನಂತರ ಆಶಿಶ್ ನೆಹ್ರಾ ಕ್ರೀಸ್‌ಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಮಂಡ್ಯದ ಎಚ್.ಎಸ್ ಶರತ್ (52ಕ್ಕೆ4) ಸಹ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry