ಭರ್ಜರಿ ಬಾಳೆ: ಬೇಡಿಕೆಗೆ ಬರ

7

ಭರ್ಜರಿ ಬಾಳೆ: ಬೇಡಿಕೆಗೆ ಬರ

Published:
Updated:

ಮಾಗಡಿ: `ತಾಲ್ಲೂಕಿನಲ್ಲಿ ಕೊಳವೆ ಬಾವಿ ನೀರಿನ ಆಶ್ರಯದಲ್ಲಿ ಈ ಬಾರಿ ಒಟ್ಟು 500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ' ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕಿ ರೂಪಶ್ರೀ ತಿಳಿಸಿದ್ದಾರೆ.ರೋಗದ ಕಾರಣ ತಾಲ್ಲೂಕಿನಾದ್ಯಂತ ಏಲಕ್ಕಿ ಬೆಳೆಯನ್ನು ಕಡಿಮೆ ಬೆಳೆಯಲಾಗುತ್ತಿದ್ದು ರೈತರು ಪಚ್ಚಬಾಳೆಗೇ ಮೊದಲ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.ಇಲಾಖೆಯ ವತಿಯಿಂದ ಬಾಳೆ ಬೆಳೆಗಾರರಿಗೆ ಸೂಕ್ತ ತರಬೇತಿ ನೀಡಿ ಎಲ್ಲ ಸವಲತ್ತುಗಳನ್ನೂ ವಿತರಿಸಲಾಗಿದೆ. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆ ಬೆಳೆದ ರೈತರಿಗೆ ಕೆ.ಜಿ.ಯೊಂದಕ್ಕೆ 30 ರೂಪಾಯಿ ಲಭಿಸುತ್ತಿದೆ. ಹೆಚ್ಚಿನದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಪಚ್ಚಬಾಳೆಗೆ ರೂ.9 ಬೆಲೆ ಇದೆ. ರೈತರಿಂದ ಬಾಳೆಹಣ್ಣು ಖರೀದಿಸುವಲ್ಲಿ ಹಾಪ್‌ಕಾಮ್ಸಮತ್ತು ಸ್ಥಳೀಯ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.ರೂಪಶ್ರಿ ಅವರ ಮಾತಿಗೆ ಅಪವಾದ ಎಂಬಂತೆ ತಾಲ್ಲೂಕಿನ ಮತ್ತಿಕೆರೆ ಗ್ರಾಮದ ಯುವ ರೈತ ಜಿ.ತಿಮ್ಮೇಗೌಡ ಉತ್ಸಾಹದಿಂದ ಬೆಳೆದಿದ್ದ ಬಾಳೆ ಮಾರಾಟವೇ ಒಂದು ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ.ನೀರಾವರಿ ಸೌಲಭ್ಯವಿಲ್ಲದಿದ್ದರೂ ಅದನ್ನು ಲೆಕ್ಕಿಸದೇ ಸಾಹಸದಿಂದ ಬಾಳೆ ನೆಟ್ಟಿದ್ದ ತಿಮ್ಮೇಗಡರ ಎರಡು ಎಕರೆ ಜಮೀನಿನಲ್ಲಿ ಎಸ್‌ಆರ್-1ಪಚ್ಚಬಾಳೆಯನ್ನು ಬೆಳೆದಿದ್ದಾರೆ.ಒಂದೊಂದು ಬಾಳೆಗೊನೆ 80 ರಿಂದ 90 ಕೆ.ಜಿ. ತೂಕ ಹೊಂದಿವೆ. ಒಂದು ಕೆಜಿಗೆ ಕೇವಲ ನಾಲ್ಕೈದು ಬಾಳೆಹಣ್ಣುಗಳು ತೂಗುತ್ತಿವೆ. ಏನಿಲ್ಲವೆಂದರೂ ಒಂದು ಬಾಳೆಹಣ್ಣು ಸುಮಾರು 200 ಗ್ರಾಂನಿಂದ 250 ಗ್ರಾಂಗಳವರೆಗೆ ತೂಗುತ್ತದೆ.ಆದರೆ ಇವುಗಳಿಗೆ ಮಾರುಕಟ್ಟೆಯ ಸಮಸ್ಯೆ ಕಂಡುಬರುತ್ತಿರುವುದು ಬಾಳೆ ಬೆಳೆಗಾರರಲ್ಲಿ ದಿಗಿಲು ಹುಟ್ಟಿಸಿದೆ.

ಬೆಂಗಳೂರಿನಿಂದ ಕೊಳ್ಳಲು ಬಂದ ಖರೀದಿದಾರರು ಈ ಗಾತ್ರದ ಹಣ್ಣುಗಳನ್ನು ಖರೀದಿಸಿದರೆ ಚಿಲ್ಲೆರೆ ಮಾರಾಟದಲ್ಲಿ ಇವುಗಳನ್ನು ಮಾರಲು ಸಮಸ್ಯೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ರೈತನಿಗೆ ಒಳ್ಳೆಯ ಫಸಲು ಬಂದರೂ ಕಷ್ಟ, ಫಸಲು ಕುಂಠಿತಗೊಂಡರೂ ಕಷ್ಟ ಎಂಬಂತಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ ತಿಮ್ಮೇಗೌಡ.ನುಭೋಗನಹಳ್ಳಿಯ ರಾಮಚಂದ್ರ, ಹೊಸಪಾಳ್ಯದ ಪ್ರೊ.ಗಂಗಾಧರಯ್ಯ ಅವರೂ ಇದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು `ತಾವು ಉತ್ತಮ ಬಾಳೆ ಬೆಳೆದಿದ್ದರೂ ಸೂಕ್ತ ಲಾಭದ ನಿರೀಕ್ಷೆಯಿಲ್ಲದೆ ಮಾರಾಟದ ಸಮಸ್ಯೆ ಎದುರಿಸುತ್ತ್ದ್ದಿದೇವೆ' ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry