ಭಳಾರೆ ಬೈಕ್

7

ಭಳಾರೆ ಬೈಕ್

Published:
Updated:
ಭಳಾರೆ ಬೈಕ್

ತುಂಬಾ ಬೇಕಾದವರು ಸಮಾರಂಭಕ್ಕೆ ಕರೆದಿದ್ದರು. ಅವರ ಮನೆ ಇದ್ದದ್ದು ಮುಂಬೈ ಹೊರವಲಯದಲ್ಲಿ. ಹೋಗಲೇಬೇಕಿತ್ತು. ಅಂಗರಕ್ಷಕರ ಸಮೇತ ಕಾರು ಹತ್ತಿದ್ದಾಯಿತು. ಚಾಲಕ ಯಥಾಪ್ರಕಾರ ಓಡಿಸಲಾರಂಭಿಸಿದ. ಹತ್ತು ನಿಮಿಷದ ಡ್ರೈವ್ ಆದಮೇಲೆ ಟ್ರಾಫಿಕ್ ಜಾಮ್. ಕಾರು ತೆವಳತೊಡಗಿತು.ಹಿಂದಿನ ಸೀಟಿನಲ್ಲಿ ಆರಾಮಾಗಿ ಕೂತಿದ್ದ ನಟನಿಗೆ ಚಿಂತೆ. ಸಮಾರಂಭ ಮುಗಿಸಿಕೊಂಡು ಜಾಹೀರಾತಿನ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಗಡಿಯಾರವನ್ನು ಪದೇಪದೇ ನೋಡಿಕೊಳ್ಳುತ್ತಲೇ ಇದ್ದ ಆ ನಟನಿಗೆ ತೆವಳುತ್ತಿದ್ದ ಕಾರಿನ ಬಗ್ಗೆ ರೇಜಿಗೆ ಹುಟ್ಟಿತು. ಕೆಳಗೆ ಇಳಿಯೋಣವೆಂದರೆ ಅಭಿಮಾನಿಗಳ ಕಾಟ.ತಕ್ಷಣ ಒಂದು ಉಪಾಯ ಹೊಳೆಯಿತು. ಸ್ನೇಹಿತನಿಗೆ ಫೋನ್ ಮಾಡಿ, ಬೈಕ್ ತರುವಂತೆ ಆಜ್ಞಾಪಿಸಿದ್ದಾಯಿತು.ಸ್ನೇಹಿತನ ಬಳಿ ಸೂಪರ್‌ಬೈಕ್ ಇತ್ತು. ಒಂದೆರಡು ಸಲ ನಡುರಾತ್ರಿಯಲ್ಲಿ ಖುಷಿಗೆಂದು ಆ ಬೈಕ್ ಓಡಿಸಿದ್ದ ನಟನಿಗೆ ಟ್ರಾಫಿಕ್ ಜಾಮ್ ಆದಾಗ ಅದು ನೆನಪಿಗೆ ಬಂತು.ಮತ್ತೆ ಏನೋ ಮರೆತವರಂತೆ ಆ ನಟ ಅದೇ ಸ್ನೇಹಿತನಿಗೆ ಇನ್ನೊಂದು ಫೋನ್ ಮಾಡಿ, `ನನಗೂ ಮುಖ ಮುಚ್ಚುವಂಥ ಒಂದು ಹೆಲ್ಮೆಟ್ ತೆಗೆದುಕೊಂಡು ಬಾ~ ಎಂದು ಹೇಳಿದರು. ಕಾರು ಯಾವ ಜಾಗದಲ್ಲಿದೆ ಎಂಬುದನ್ನು ತಿಳಿಸಲು ನಿಮಿಷ ನಿಮಿಷಕ್ಕೂ ಸ್ನೇಹಿತನಿಗೆ ಫೋನ್ ಮಾಡುತ್ತಲೇ ಇದ್ದರು.ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಕಾರುಗಳ ಸಂದುಗಳಿಂದಲೇ ಹಾದುಬಂದ ಸೂಪರ್‌ಬೈಕ್ ನಟನ ಕಾರಿನ ಪಕ್ಕ ನಿಂತಿತು.ಕಾರಿನ ಕಿಟಕಿಯನ್ನು ಕೆಳಗಿಳಿಸಿದ ನಟ ಮೊದಲು ಹೆಲ್ಮೆಟ್ ಹಾಕಿಕೊಂಡರು. ಆಮೇಲೆ ಕೆಳಗಿಳಿದು ಬೈಕ್‌ನ ಹಿಂದಿನ ಸೀಟಿನಲ್ಲಿ ಕೂತು ಸಮಾರಂಭಕ್ಕೆ ಹೊರಟರು.ಇಂಥ ನಟ ತನ್ನ ಸ್ನೇಹಿತ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವವರ ಮನೆಯ ಸಮಾರಂಭ ಅದು. ಅಲ್ಲಿ ಅನೇಕರು ನಟ ಈಗ ಬಂದಾರು ಆಗ ಬಂದಾರು ಎಂಬ ನಿರೀಕ್ಷೆಯಲ್ಲಿದ್ದರು. ಕಾರಿನ ನಿರೀಕ್ಷೆಯಲ್ಲಿದ್ದ ಅವರಿಗೆ ಸೂಪರ್‌ಬೈಕ್‌ನಿಂದ ನಟ ಇಳಿದದ್ದನ್ನು ನೋಡಿ ಅಚ್ಚರಿಯಾಯಿತು.`ಈ ಮುಂಬೈ ಟ್ರಾಫಿಕ್ ಕಿರಿಕಿರಿ ಜಾಸ್ತಿಯಾಗಿಬಿಟ್ಟಿದೆ. ಎರಡು ಮೂರು ಕೆಲಸ ಒಂದೇ ದಿನ ಇದ್ದರಂತೂ ಕಷ್ಟಕಷ್ಟ~ ಎನ್ನುತ್ತಾ ಸಮಾರಂಭದಲ್ಲಿ ಸೇರಿಕೊಂಡ ಆ ನಟನ ಹೆಸರು ಅಕ್ಷಯ್ ಕುಮಾರ್.ಅಲ್ಲಿಂದಾಚೆಗೆ ಅಕ್ಷಯ್ ಕುಮಾರ್ ಅನೇಕ ಸಮಾರಂಭಗಳಿಗೆ ಬೈಕ್‌ನಲ್ಲಿ ಓಡಾಡಿದ್ದುಂಟು. ತಮ್ಮದೇ ಒಂದು ಸೂಪರ್‌ಬೈಕ್ ಕೊಂಡದ್ದೂ ಆಯಿತು. ಅವರು ಕಾರಿನಲ್ಲಿ ಓಡಾಡುವಾಗ ಸಹಾಯಕರಿಗೆ ಆ ಬೈಕ್ ಓಡಿಸುವ ಅವಕಾಶ.ನಟ ಜಾನ್ ಅಬ್ರಹಾಂಗೇನೋ ಮೊದಲಿನಿಂದಲೂ ಸೂಪರ್‌ಬೈಕ್‌ಗಳ ಹುಚ್ಚು. ಅವರು ಪದೇಪದೇ ಹೊಸ ಸೂಪರ್‌ಬೈಕ್ ಕೊಳ್ಳುತ್ತಾ ಅದನ್ನು ವೇಗವಾಗಿ ಓಡಿಸಿಕೊಂಡು ಹೋಗುವ ಹವ್ಯಾಸ ಮುದ್ದಿಸುತ್ತಾ ಬಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರೂ ಕಾರಿಗಿಂತ ತಮಗೆ ಬೈಕ್ ಓಡಿಸುವುದೇ ಸಂತೋಷ ಕೊಡುತ್ತದೆ ಎಂದು ಹೇಳಿಕೊಂಡಿದ್ದರು.`ಸಿಂಗಂ~ ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಓಡಿಸುವ ಅಜಯ್ ದೇವಗನ್ ಸಹ ಬೈಕ್ ಮೆಚ್ಚುವ ನಟ. ಅವರು `ಫೂಲ್ ಔರ್ ಕಾಂಟೆ~ ಚಿತ್ರದಲ್ಲಿ ಎರಡು ಬೈಕ್‌ಗಳ ಮೇಲೆ ಕಾಲಿಟ್ಟು ಎಂಟ್ರಿ ಕೊಡುವ ದೃಶ್ಯವನ್ನು ನಾವೆಲ್ಲಾ ನೋಡಿದ್ದೇವಷ್ಟೆ.ಅಪ್ಪ ವೀರೂ ದೇವಗನ್ ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡುವುದನ್ನು ಹತ್ತಿರದಿಂದ ನೋಡಿ, ತಾವೂ ಬೈಕ್‌ಗಳ ಮೇಲೆ ಸ್ಟಂಟ್ ಮಾಡಿಯೇ ಬೆಳೆದ ದೇವಗನ್ ಆಮೇಲಾಮೇಲೆ ಕಾರಿನಲ್ಲಿ ಓಡಾಡುವ ಸುಖಕ್ಕೆ ಒಗ್ಗಿಹೋಗಿದ್ದರು. ಈಗ ಅವರೂ ಮುಂಬೈ ರಸ್ತೆಗಳು ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ ಉಂಟುಮಾಡುತ್ತಿರುವುದರಿಂದ ಬೈಕ್ ಓಡಿಸುವ ಹಳೆ ಚಾಳಿಯನ್ನು ಮತ್ತೆ ಅಭ್ಯಾಸ ಮಾಡಿಕೊಂಡಿದ್ದಾರೆ.ಕರೀನಾ ಕಪೂರ್ ಜೊತೆಗೇ ಹೆಚ್ಚು ಓಡಾಡುವ ಸೈಫ್ ಅಲಿ ಖಾನ್ ಕೂಡ ಇತ್ತೀಚೆಗೆ ಒಂದು ಸೂಪರ್‌ಬೈಕ್ ಕೊಂಡರಂತೆ. ಮೊದಮೊದಲು ಅದನ್ನು ಓಡಿಸಲು ಪರದಾಡಿದ ಅವರಿಗೀಗ ಅದು ಒಗ್ಗಿದೆಯಂತೆ. ಅವರೂ ಟ್ರಾಫಿಕ್ ತೊಂದರೆಗೆ ಅದೇ ಪರಿಹಾರವೆಂದು ಭಾವಿಸಿದ್ದಾರೆ.ಬಾಲಿವುಡ್ ನಟರ ಈ ದಿಢೀರ್ ಬೈಕ್ ಮೋಹಕ್ಕೆ ಟ್ರಾಫಿಕ್ ಸಮಸ್ಯೆ ಕಾರಣವಿರಬಹುದು. ಇತ್ತ ಬೆಂಗಳೂರಿನಲ್ಲೂ ಸೂಪರ್ ಬೈಕ್ ಒಡೆಯರಾಗಿರುವ ನಟರಿದ್ದಾರೆ. ನಟ ಯೋಗಿ ಕೊಂಡ ಸೂಪರ್‌ಬೈಕ್‌ಗೆ ಸಣ್ಣ ಅಪಘಾತವಾದಾಗ ಅದು ದೊಡ್ಡ ಸುದ್ದಿಯಾಗಿತ್ತು.

 

ಅವರು ನಟಿ ರಮ್ಯಾ ಕೂರಿಸಿಕೊಂಡು ಒಂದು ರೌಂಡ್ ಹೋಗಿ ಬಂದದ್ದು ಕೂಡ ಟೀವಿ ವಾಹಿನಿಗಳಲ್ಲಿ ಸುದ್ದಿಯಾಗಿತ್ತು. ನಟ ದಿಗಂತ್ ಒಂದು ಚಿತ್ರಕ್ಕೆ ಸಂಭಾವನೆ ಬದಲು ಸೂಪರ್ ಬೈಕ್ ಪಡೆದುಕೊಂಡರಂತೆ. ಅವರು ಎಷ್ಟೋ ಸುದ್ದಿಗೋಷ್ಠಿಗಳಿಗೆ ಆ ಸೂಪರ್‌ಬೈಕ್‌ನಲ್ಲೇ ಬರುತ್ತಾರೆ.ಅಂದಹಾಗೆ, ಮೊನ್ನೆ ಶಾರುಖ್ ಖಾನ್ ಕೂಡ ಒಂದು ಸೂಪರ್ ಬೈಕ್‌ನಲ್ಲಿ `ಟ್ರಯಲ್ ರೈಡ್~ ಹೋಗಿಬಂದರಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry