ಗುರುವಾರ , ಮೇ 19, 2022
23 °C

ಭವಿಷ್ಯದಲ್ಲಿ ಅಣುಶಕ್ತಿಯೇ ಪರಿಹಾರ: ಮೈಥಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಭಾರತದಲ್ಲಿ ಅಣುಶಕ್ತಿಯೇ ಭವಿಷ್ಯದ ಪರಿಹಾರ. ಈಗಿನಿಂದಲೇ ಅಣು ಶಕ್ತಿ ಬಳಕೆ ಮಾಡಿಕೊಳ್ಳುವುದಕ್ಕೆ ಆದ್ಯತೆ   ನೀಡಬೇಕು ಎಂದು ಅಣುಖನಿಜ ಸಂಶೋಧನಾಲಯದ ನಿರ್ದೇಶಕ ಪಿ.ಬಿ.ಮೈಥಾನಿ ಹೇಳಿದರು.ಮೈಸೂರು ವಿಶ್ವದ್ಯಾನಿಲಯದ ಭೂವಿಜ್ಞಾನ ವಿಭಾಗ ಗುರುವಾರ ರಾಣಿಬಹದ್ದೂರು ಸಭಾಂಗಣದಲ್ಲಿ ಆಯೋಜಿಸಿದ್ದ ‘ಖನಿಜ ವಿಜ್ಞಾನದಲ್ಲಿ ಇತ್ತೀಚಿಗೆ ಬೆಳವಣಿಗೆ ಮತ್ತು ಅದರ ಬಳಕೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಆಗಮಿಸಿದ್ದ ಅವರು  ಸುದ್ದಿಗಾರರೊಂದಿಗೆ ಮಾತನಾಡಿದರು.ಭವಿಷ್ಯದಲ್ಲಿನ ನಾನಾ ಬೇಡಿಕೆಗಳಿಗೆ ಭಾರತದ ವಾತಾವರಣಕ್ಕೆ ಅಣುಶಕ್ತಿಯೇ ಪರಿಹಾರ. ದೇಶದಲ್ಲಿರುವ ನೈಸರ್ಗಿಕ ಮೂಲಗಳು ನೂರು ವರ್ಷದಲ್ಲಿ ಮುಗಿದು ಹೋಗಬಹುದು. ಇದಕ್ಕಾಗಿ ಅಣುಶಕ್ತಿ ಬಳಸಿಕೊಳ್ಳುವುದು ಸೂಕ್ತ. ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಆತಂಕ ಹಾಗೂ ಹಸಿರುಮನೆ ಪರಿಣಾಮ ಇರುವುದಿಲ್ಲ ಎಂದರು.ಜಪಾನ್‌ನಲ್ಲಿ ಈ ರೀತಿಯ ವಿಪತ್ತು ಸಂಭವಿಸುತ್ತದೆ ಎಂದು ಯಾರು ಊಹಿಸಿರಲಿಲ್ಲ. ಜಪಾನಿನಲ್ಲಿನ ರಿಯಾಕ್ಟರ್‌ಗಳ ಸ್ಫೋಟದಿಂದ ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ. ಅಣುಸ್ಫೋಟದಿಂದ ಅಲ್ಲಿ  ಸಾಕಷ್ಟು ಹಾನಿಯಾಗಿದೆ. ವಿಕಿರಣ ಸೋರಿಕೆಯಾದ ನಂತರ ಅದರ ಕಣಗಳು ಭಾರತಕ್ಕೆ ಬರುವ ವೇಳೆಗೆ ಬಲ ಕುಂದಿರುತ್ತದೆ. ಆದ್ದರಿಂದ ಭಾರತೀಯರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಇದಕ್ಕೂ ಮುನ್ನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮೈಥಾನಿ, ಭೂ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಸಮಯ ಕಳೆಯುವ ಬದಲು ಕ್ಷೇತ್ರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಒಂದೇ ಸ್ಥಳದಲ್ಲಿ ಐದು ವರ್ಷಕ್ಕೂ ಹೆಚ್ಚು ಅವಧಿ ತಳವೂರದೆ ದೇಶದ ಇತರೆ ಸ್ಥಳಗಳಲ್ಲಿ ಕೆಲಸ ಮಾಡಬೇಕು. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ ಯುರೇನಿಯಂ ನಿಕ್ಷೇಪದ ಪತ್ತೆ ಕಾರ್ಯ ಅರವತ್ತು ವರ್ಷದ ಹಿಂದೆಯೇ ಆಗಿದೆ. ಬಿಹಾರದ ಜಡುಗುಡದಲ್ಲಿ 1951ರಲ್ಲೇ ಯುರೇನಿಯಂ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ. ರಾಜಸ್ತಾನದ ತುಮ್ಮನಪಲ್ಲೆ, ಲಂಬಾಪುರ, ಮೇಘಾ ಲಯದ ವಾಹ್‌ಕಿನ್, ಛತ್ತೀಸ್ ಗಡದ ಬೋಡಲ್ ಜಜವಾಲ್, ಕರ್ನಾಟಕದ ಗೋಗಿದಲ್ಲೂ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ. ಇವು ಕೆಳ ದರ್ಜೆ ನಿಕ್ಷೇಪಗಳು. ಉನ್ನತ ದರ್ಜೆಯ ಯುರೇನಿಯಂ ನಿಕ್ಷೇಪ ಪತ್ತೆ ದೇಶಕ್ಕೆ ದೊಡ್ಡ ಸವಾಲು ಎಂದು ಹೇಳಿದರು.

ಸಂಚಾಲಕ, ಪ್ರೊ. ಸಿ.ಶ್ರೀಕಂಠಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿನರಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಪ್ರೊ. ಸಿ.ನಾಗಣ್ಣ, ಕುಲಸಚಿವ ಪ್ರೊ.ಪಿ.ಎಸ್. ನಾಯಕ್, ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಬೈರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.