ಭವಿಷ್ಯದ ಅಮ್ಮ ಅನುಷ್ಕಾ

ಜೀವನಪರ್ಯಂತ ನಟಿಯಾಗಿಯೇ ಉಳಿಯಲಾರೆ ಎನ್ನುವ ಮೂಲಕ ಅನುಷ್ಕಾ ಶರ್ಮ ತಮ್ಮ ವಾಸ್ತವಪ್ರಜ್ಞೆಯನ್ನು ಅನಾವರಣಗೊಳಿಸಿದ್ದಾರೆ. ಈಗಷ್ಟೇ ಅವರ ಅಭಿನಯದ `ಜಬ್ ತಕ್ ಹೈ ಜಾನ್~ ಚಿತ್ರ ತೆರೆಕಂಡಿದೆ. ವಿಮರ್ಶಕರಿಂದ ಪ್ರಶಂಸೆಯೂ ವ್ಯಕ್ತವಾಗಿದೆ.
ಅವುಗಳಿಂದ ಹಿಗ್ಗದ ಅನುಷ್ಕಾ ಕೆಲವು ವರ್ಷಗಳ ನಂತರ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸುವ ಅಮ್ಮನಾಗುವ ಕಾಲ ತಮಗೆ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿ ಬೆರಗು ಮೂಡಿಸಿದ್ದಾರೆ.
ಅನುಷ್ಕಾ ಮೊದಲು ಅಭಿನಯಿಸಿದ ಹಿಂದಿ ಚಿತ್ರ `ರಬ್ ನೆ ಬನಾ ದೀ ಜೋಡಿ~. 2008ರಲ್ಲಿ ತೆರೆಕಂಡ ಈ ಚಿತ್ರವನ್ನು ಯಶ್ರಾಜ್ ಅವರ ಬ್ಯಾನರ್ ನಿರ್ಮಿಸಿತ್ತು. ಈಗ ಮತ್ತೆ ಅವರ ಬ್ಯಾನರ್ನ ಸಿನಿಮಾದ ನಟನೆಗೆ ಪ್ರಶಂಸೆ ಸಂದಿದೆ. ನಡುವೆ ಅವರು ಹೆಚ್ಚೇನೂ ಚಿತ್ರಗಳಲ್ಲಿ ನಟಿಸಲಿಲ್ಲ.
`ಬದ್ಮಾಶ್ ಕಂಪೆನಿ~, `ಬ್ಯಾಂಡ್ ಬಾಜಾ ಬಾರಾತ್~, `ಲೇಡೀಸ್ ವರ್ಸಸ್ ರಿಕಿ ಬೆಹ್ಲ್~, `ಪಟಿಯಾಲಾ ಹೌಸ್~ ಚಿತ್ರಗಳು ತೆರೆಕಂಡವು. ಅವುಗಳು ಬಾಕ್ಸಾಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡದೇ ಇದ್ದರೂ ನಟಿಯಾಗಿ ಅನುಷ್ಕಾ ಸುದ್ದಿಯಾದರು.
`ಈಗ ನನ್ನ ವಯಸ್ಸು ಇಪ್ಪತ್ತನಾಲ್ಕು. ಇನ್ನು ಹತ್ತು ಹದಿನೈದು ವರ್ಷಗಳಲ್ಲಂತೂ ನನ್ನ ಮದುವೆಯಾಗುತ್ತದೆ. ಮಕ್ಕಳೂ ಆಗುತ್ತವೆ. ಅವುಗಳ ಲಾಲನೆ ಪಾಲನೆಯಲ್ಲಿ ನಾನೂ ಕಾಲ ಕಳೆಯಬೇಕಾಗುತ್ತದೆ. ಸದಾ ನಟಿಯಾಗಿಯೇ ಇರುವುದು ಈ ಕಾಲದಲ್ಲಿ ಸಾಧ್ಯವಿಲ್ಲ.
ಅದನ್ನು ಅರಿತಿರುವ ನಾನು ಎಂದಿಗೂ ಯಶಸ್ಸಿನಿಂದ ಉಬ್ಬಿಹೋಗುವುದಿಲ್ಲ. ತಾರಾಪಟ್ಟದ ಹಂಗು ನನಗಿಲ್ಲ~ ಎಂದಿರುವ ಅನುಷ್ಕಾ ಸದ್ಯಕ್ಕೆ ಮದುವೆಯ ಯೋಚನೆ ತಮಗಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.