ಶುಕ್ರವಾರ, ಮೇ 7, 2021
20 °C

ಭವಿಷ್ಯದ ಭಾರತ ನಿರ್ಮಾತೃಗಳಿಗೆ ಕೌಶಲ್ಯ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭವಿಷ್ಯದ ಭಾರತವನ್ನು ಮುನ್ನಡೆಸಲು ಯುವಜನರ ದೊಡ್ಡ ಪಡೆಯೇ ಸಿದ್ಧಗೊಳ್ಳುತ್ತಿದ್ದು, ಅವರಿಗಾಗಿ ಅಗತ್ಯವಿರುವ ಕೌಶಲ್ಯ ಬೆಳೆಸಲು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮವೊಂದರ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಹೇಳಿದರು.ನಗರದಲ್ಲಿ ಮಂಗಳವಾರ ಕೇಂದ್ರ ಹಾಗೂ ರಾಜ್ಯದ ಕಾರ್ಮಿಕ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆದ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.`ಭಾರತವು ದಿನದಿಂದ ದಿನಕ್ಕೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಮುಂದಿನ ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಯುವಜನರ ಮೇಲಿದೆ. ನಮ್ಮಲ್ಲಿ ಯುವಜನ ಶಕ್ತಿ ಇದ್ದರೂ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. ಯುವಜನರ ತಾಂತ್ರಿಕ ಹಾಗೂ ವೃತ್ತಿ ನೈಪುಣ್ಯವನ್ನು ಇನ್ನಷ್ಟು ಬೆಳೆಸುವ ಸಲುವಾಗಿ ದೇಶಾದ್ಯಂತ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರ ಜೊತೆಗೆ ಕೌಶಲ್ಯ ವೃದ್ಧಿಯ ಎಲ್ಲ ಆಯಾಮಗಳ ಅಧ್ಯಯನ ನಡೆಸಲು ಕೌಶಲ್ಯ ಅಭಿವೃದ್ಧಿ ನಿಗಮದ ಅಗತ್ಯವಿದೆ~ ಎಂದು ಅವರು ನುಡಿದರು.`ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ಜಗತ್ತೇ ಬೆರಗಿನಿಂದ ನೋಡುವ ಬಲಿಷ್ಠ ದೇಶವಾಗಿ ಬೆಳೆಯಲಿದೆ. ಕೇವಲ ಸರ್ಕಾರಿ ಸಂಸ್ಥೆಗಳಿಂದ ಯುವಜನರ ಕೌಶಲ್ಯ ವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಕೌಶಲ್ಯ ವೃದ್ಧಿ ಕೇಂದ್ರಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಲು ಯೋಜನಾ ಆಯೋಗ ಸಿದ್ಧವಿದೆ~ ಎಂದು ಅವರು ತಿಳಿಸಿದರು.ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, `ಯುವ ಶಕ್ತಿಯ ತಾಂತ್ರಿಕ ಜ್ಞಾನವನ್ನು ಬೆಳೆಸಲು ದೇಶದಲ್ಲಿಯೇ ಮೊದಲ ಬಾರಿಗೆ ಜರ್ಮನ್ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದ ಆರಂಭಕ್ಕೆ ಚಾಲನೆ ನೀಡಲಾಗಿದೆ. ದೇಶಾದ್ಯಂತ ಐದು ಸಾವಿರ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ಯೋಜನಾ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ. ದೇಶದಲ್ಲಿ ವಾರ್ಷಿಕ ಸುಮಾರು ಏಳು ಲಕ್ಷ ಯುವಜನರು ಈ ಕೇಂದ್ರಗಳಿಂದ ತರಬೇತಿ ಪಡೆಯಲಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ವಿಶ್ವ ದರ್ಜೆಯ ಕೌಶಲ್ಯ ನಮ್ಮ ವಿದ್ಯಾರ್ಥಿಗಳಲ್ಲಿ ಕಾಣುವಂತಾಗಬೇಕು~ ಎಂದು ಅವರು ಆಶಿಸಿದರು.`ರಾಜ್ಯದಲ್ಲಿ ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ತಲಾ 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಹಾಗೂ ಬೆಳಗಾವಿಯಲ್ಲಿ ಕೇಂದ್ರಗಳ ಸ್ಥಾಪನೆಗೆ ನೀಲನಕ್ಷೆ ತಯಾರಿಸಲಾಗಿದೆ. ದೇಶದ ಒಟ್ಟು ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಉದ್ದಿಮೆಗಳ ಕೊಡುಗೆ ಶೇಕಡ 10.5 ರಷ್ಟಿದೆ. ಇನ್ನು ನಮ್ಮಲ್ಲಿನ ತಾಂತ್ರಿಕ ಕೌಶಲ್ಯ ವೃದ್ಧಿಯಾದರೆ ಈ ಆರ್ಥಿಕ ಬೆಳವಣಿಗೆ ಇನ್ನಷ್ಟು ಹೆಚ್ಚಾಗಲಿದೆ. ಪ್ರತಿ ಕೇಂದ್ರಗಳಲ್ಲಿ 1500 ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಿರಲಿದೆ~ ಎಂದರು.`ನಗರದ ಬಾಗಲಗುಂಟೆ ಬಳಿ ನಿರ್ಮಾಣಗೊಳ್ಳಲಿರುವ ಕರ್ನಾಟಕ ಜರ್ಮನ್ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ವಿವಿಧ ಕೋರ್ಸ್‌ಗಳನ್ನು ನಡೆಸಲಾಗುವುದು. ಇದರಿಂದ ನಮ್ಮ ದೇಶದ ತಾಂತ್ರಿಕ ಜ್ಞಾನದ ಜೊತೆಗೆ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಜರ್ಮನ್‌ಕೌಶಲ್ಯಗಳನ್ನೂ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ. ಹೊಸ ಹೊಸ ತಂತ್ರಜ್ಞಾನಗಳ ತಿಳುವಳಿಕೆ ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ದೊರೆಯಲಿದೆ~ ಎಂದು ಅವರು ತಿಳಿಸಿದರು.ಸಮಾರಂಭದಲ್ಲಿ ರಾಜ್ಯ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಜರ್ಮನ್‌ನ ಕಾನ್ಸುಲೇಟ್ ಜನರಲ್ ಇಂಗೋ ಕಾರ್‌ಸ್ಟೆನ್, ಶಾಸಕ ಸಿ.ಎಸ್.ಮುನಿರಾಜು, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಮೃತ್ಯುಂಜಯ ಸಾರಂಗಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜಿ.ಎಸ್.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಆರ್ಥಿಕ ಕುಸಿತದ ಭಯ ಬೇಡ: ಅಹ್ಲುವಾಲಿಯಾ ಕಿವಿಮಾತು
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ, `ರಿಸರ್ವ್ ಬ್ಯಾಂಕ್‌ನ ಪ್ರಕಾರ ದೇಶದ ಆರ್ಥಿಕ ಸಂಚಲನ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ. ಹೆಚ್ಚಿನ ಬಂಡವಾಳ ಹೂಡಿಕೆಯ ಕಾರಣದಿಂದ ಆರ್‌ಬಿಐ ಬಡ್ಡಿದರವನ್ನು ಶೇಕಡ 0.5 ಇಳಿಸಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಈ ಆರ್ಥಿಕ ವರ್ಷದಲ್ಲಿ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಶೇಕಡ 9 ರಷ್ಟು ಬೆಳವಣಿಗೆಯ ಗುರಿ ಹೊಂದಲಾಗಿದ್ದು, ಕಳೆದ ವರ್ಷ ಈ ಬೆಳವಣಿಗೆ ಶೇಕಡ 8 ರಷ್ಟಿತ್ತು. ಹೀಗಾಗಿ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಸಂಕಷ್ಟಗಳಿಲ್ಲ. ಆರ್ಥಿಕ ಬೆಳವಣಿಗೆಯ ಸಣ್ಣಪುಟ್ಟ ಏರುಪೇರುಗಳ ಕಾರಣಕ್ಕಾಗಿ ಆರ್ಥಿಕ ಕುಸಿತದ ಭಯಬೇಡ~ ಎಂದರು.`ಬರುವ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮುಖ್ಯವಾಗಿ ದೇಶದ ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕೌಶಲ್ಯ ವೃದ್ಧಿಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು~ ಎಂದು ಅವರು ತಿಳಿಸಿದರು.`ಬರ ಪರಿಸ್ಥಿತಿ ನಿಭಾಯಿಸಿ~

ರಾಜ್ಯ ಬರ ಪರಿಸ್ಥಿತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, `ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸೋತಿರುವ ರಾಜ್ಯ ಸರ್ಕಾರ ವಿನಾ ಕಾರಣ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಹಣವನ್ನು ಬರ ಪರಿಸ್ಥಿತಿ ನಿಭಾಯಿಸಲು ಬಳಸಬಹುದು. ಅಲ್ಲದೇ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಉಳಿದಿರುವ ಹಣವೂ ಇನ್ನೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಕೇವಲ ಕೇಂದ್ರದ ಮೇಲೆ ಆರೋಪಗಳಲ್ಲಿ ತೊಡಗುವ ಬದಲು ರಾಜ್ಯ ಸರ್ಕಾರ ಸಾಧ್ಯವಿರುವ ಕೆಲಸಗಳನ್ನು ಮಾಡಲು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.