ಬುಧವಾರ, ಜುಲೈ 28, 2021
23 °C

ಭವಿಷ್ಯ ಇರುವ ಉದ್ಯಮಗಳಲ್ಲಿ ಹೂಡಿಕೆ

ವಿಶ್ವನಾಥ ಬಸವನಾಳಮಠ Updated:

ಅಕ್ಷರ ಗಾತ್ರ : | |

(ಹಿಂದಿನ ಸಂಚಿಕೆಯಿಂದ)

ಜಗತ್ತಿನ ಶ್ರೀಮಂತರಲ್ಲೇ ಮೂರನೇ ಸ್ಥಾನದಲ್ಲಿರುವ ಬಫೆಟ್‌ಗೆ ಸರಳತೆ ಎಂದರೆ ತುಂಬಾ ಇಷ್ಟ. ಅವರ ಯಶಸ್ವಿ ಹೂಡಿಕೆಯ ಗುಟ್ಟೂ ಸರಳತೆಯೇ ಎಂದರೆ ನೀವು ನಂಬಲೇಬೇಕು. ಸೆಮಿಕಂಡಕ್ಟರ್, ರಾಕೆಟ್ ತಂತ್ರಜ್ಞಾನ, ಮೈಕ್ರೊ  ಬಯಾಲಜಿಯಂಥ ಸಂಕೀರ್ಣ ಉದ್ಯಮ ನನಗೆ ಅರ್ಥವಾಗದು. ಅಂಡರ್‌ವೇರ್‌ನಂಥ ಸರಳ, ಸಡಿಲ ಹಾಗೂ ದೀರ್ಘಕಾಲೀನ ಉದ್ಯಮದಲ್ಲೇ ಆಸಕ್ತಿ ಎನ್ನುತ್ತಾರೆ ಅವರು!ಹೈಟೆಕ್ ಐಟಿ ಉದ್ಯಮ ಎಷ್ಟು ವರ್ಷ ಬಾಳುತ್ತದೆ ಎಂಬ ಬಗ್ಗೆ ಖಚಿತ ಉತ್ತರ ನೀಡುವಂತೆ ನೀವು ಯಾರನ್ನಾದರೂ ಕೇಳಿದರೆ ಅವರು ತಡವರಿಸುವುದೇ ಹೆಚ್ಚು.ಆದರೆ ಇದೇ ಪ್ರಶ್ನೆಯನ್ನು ಅಂಡರ್‌ವೇರ್ ಉದ್ಯಮದ ಬಗ್ಗೆ ಕೇಳಿದರೆ- ಜನ, ನಾಗರೀಕತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೂ ಒಳ ಉಡುಪಿನ ಈ ಉದ್ಯಮ ಇರಲ್ಲಿದೆ ಎಂಬ ಉತ್ತರ ಗ್ಯಾರಂಟಿ.ಬಫೆಟ್ ಕೂಡ ಇಂಥದೇ ದೀರ್ಘಕಾಲೀನ ಭವಿಷ್ಯವಿರುವ ಉದ್ಯಮಗಳಲ್ಲಿ ಹಣ ಹೂಡುತ್ತಾರೆ. ಈಗಾಗಲೇ ಅವರು ಇಟ್ಟಿಗೆ, ಪೇಂಟ್, ಕಾರ್ಪೆಟ್, ಅನೇಕ ಫರ್ನಿಚರ್ ಕಂಪೆನಿಗಳು ಹಾಗೂ ಒಂದು ಅಂಡರ್‌ವೇರ್ ಕಂಪೆನಿಯನ್ನು ಖರೀದಿಸಿದ್ದಾರೆ. ಈ ಉದ್ಯಮಗಳ ಹೆಸರು ಕೇಳಿದರೇನೇ ಇವು ಸುಲಭವಾಗಿ ಅರ್ಥವಾಗುವ, ದೀರ್ಘಕಾಲ ಬಾಳಿಕೆ ಬರುವ ಹಾಗೂ ಸಾಕಷ್ಟು, ಹಣದ ಹರಿವು ಇರುವ ವ್ಯಾಪಾರ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.ಇವು ಯಾವುದೇ ರೀತಿಯ ಪ್ರತಿಷ್ಠೆ ಅಥವಾ ಗ್ಲಾಮರಸ್ ಉದ್ಯಮಗಳಲ್ಲ. ಬಲಿಷ್ಠ ಮತ್ತು ದೀರ್ಘಕಾಲ ಚಾಲ್ತಿಯಲ್ಲಿ ಇರಬಹುದಾದ ಉದ್ಯಮಗಳು ಇವು. ಅಷ್ಟೇ ಅಲ್ಲ.ಇವು ವರ್ಷದಿಂದ ವರ್ಷಕ್ಕೆ ನಿರಂತರ ಲಾಭ ತರುವ ಉದ್ಯಮಗಳೂ ಹೌದು.ಹೊಸ ಆರ್ಥಿಕತೆಯತ್ತ ದಾಪುಗಾಲು ಹಾಕಲಿದೆ ಎನ್ನಲಾದ ಅಥವಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಉದ್ಯಮಗಳ ಕಡೆ ಬಫೆಟ್ ಕಣ್ಣೆತ್ತಿಯೂ ನೋಡುವುದಿಲ್ಲ. ಇಂಥವೇ ತಂತ್ರಜ್ಞಾನ ಹೊಂದಿರುವ ಸೆಮಿ ಕಂಡಕ್ಟರ್, ಕಂಪ್ಯೂಟರ್ ಸಾಫ್ಟ್‌ವೇರ್, ಫೈಬರ್ ಆಪ್ಟಿಕ್ ಉದ್ಯಮಗಳಲ್ಲಿನ ಹೂಡಿಕೆ ಎಂದರೆ ಬಫೆಟ್‌ಗೆ ಅಲರ್ಜಿ.ಈ ಉದ್ಯಮಗಳಲ್ಲಿ ಅನಿಶ್ಚಿತತೆ ಇರುವುದಲ್ಲದೇ ಈ ಕಂಪೆನಿಗಳ ಲಾಭಾಂಶ ಮೂಲ ಹೂಡಿಕೆದಾರರಿಗೆ ತಲುಪುವುದಿಲ್ಲ.  ರೇಡಿಯೊ-ಟಿವಿ ನಮ್ಮ ಜೀವನ ಕ್ರಮ ಬದಲಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಉದ್ಯಮ ತಮ್ಮ ಮೂಲ ಹೂಡಿಕೆದಾರರಿಗೆ ಲಾಭ ತಂದು ಕೊಟ್ಟಿಲ್ಲ. ಆದ್ದರಿಂದ ಇಂತಹ ಉದ್ಯಮಗಳಲ್ಲೂ ಬಫೆಟ್ ಹಣ ತೊಡಗಿಸುವುದಿಲ್ಲ.ನಿಮ್ಮ ಊರಲ್ಲಿ ಮನರಂಜನಾ ಕಾರ್ಯಕ್ರಮ ಏರ್ಪಡಿಸುತ್ತೀರಿ ಎಂದಿಟ್ಟುಕೊಳ್ಳಿ. ಈ ಕಾರ್ಯಕ್ರಮಕ್ಕೆ ಊರಲ್ಲಿ ಹಲವಾರು ಜನರಿಗೆ ಪರಿಚಿತರಿರುವ ಕಲಾವಿದರನ್ನು ಕರೆಸುತ್ತೀರಾ ಅಥವಾ ಎಂದೂ ಹೆಸರೇ ಕೇಳಿರದ ಹಾಲಿವುಡ್ ಕಲಾವಿದರನ್ನು ಕರೆಸುತ್ತೀರಾ? ಜನರಿಗೆ ಪರಿಚಿತ ಕಲಾವಿದರನ್ನೇ ಆಮಂತ್ರಿಸಿರಿ ಎನ್ನುತ್ತಾರೆ ಬಫೆಟ್. ಇದೇ ರೀತಿ ಹೆಸರು, ವಹಿವಾಟು ಗೊತ್ತಿರದ ಉದ್ಯಮಕ್ಕಿಂತ ನಿಮಗೆ ಪರಿಚಿತರಿರುವ ಉದ್ಯಮದಲ್ಲೇ ನಿಮ್ಮ ಹಣ ತೊಡಗಿಸಿ ಎನ್ನುವುದು ಬಫೆಟ್ ಸಲಹೆ.ಇಟ್ಟಿಗೆ, ಪೇಂಟ್, ಕಾರ್ಪೆಟ್, ಫರ್ನೀಚರ್ ಸಂಸ್ಥೆಗಳಲ್ಲಿನ ಹೂಡಿಕೆಗಳು - ಪರಿಚಿತ, ಜನಪ್ರಿಯ ಕಲಾವಿದರಿದ್ದಂತೆ. ಈ ಉದ್ಯಮಗಳು ಮುಂದಿನ 100 ವರ್ಷಗಳವರೆಗೂ ಇರುವಂಥವು. ಏಕೆಂದರೆ ಈ ಕಂಪೆನಿಗಳ ಉತ್ಪನ್ನಗಳು ಜನರ ದೈನಂದಿನ ಅಗತ್ಯಗಳಲ್ಲಿ ಮುಖ್ಯವಾದವು.ಕೆಲವರಿಗೆ ಹೈಟೆಕ್ ಕಂಪೆನಿಗಳ ಷೇರುಗಳು ಇಷ್ಟವಾಗಬಹುದು. ಆದರೆ, ಈ ಉದ್ಯಮದಲ್ಲಿ ಯಾರು, ಯಾವಾಗ, ಎಷ್ಟು ಹಣ ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ. ತೀರ್ಥ ತೆಗೆದುಕೊಂಡರೆ ನೆಗಡಿ, ಆರತಿ ತೆಗೆದುಕೊಂಡರೆ ಉಷ್ಣ ಎನ್ನುವಷ್ಟು ನಾಜೂಕು ಕಂಪೆನಿಗಳಿವು. ಕೆಲ ಬಾರಿ ಇವು ಲಾಭ ಮಾಡುತ್ತವೆ. ಆದರೆ, ಎಲ್ಲಿಯೋ ಸ್ವಲ್ಪ ಏರುಪೇರಾದರೂ ಇವುಗಳ ಲಾಭಾಂಶ ಪಾತಾಳಕ್ಕೆ ಕುಸಿಯುತ್ತದೆ. ಆದ್ದರಿಂದ ಇಂಥ ಕಂಪೆನಿಗಳೆಂದರೆ ನನಗೆ ವರ್ಜ್ಯ’ ಎನ್ನುತ್ತಾರೆ ಬಫೆಟ್.ಉದ್ಯಮವೊಂದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಈ ಉದ್ಯಮ ತುಂಬಾ ಸಂಕೀರ್ಣವಾಗಿದ್ದರೆ ಅಥವಾ ಅದರ ಬೆಳವಣಿಗೆಯನ್ನು ಊಹಿಸಲಾಗದಿದ್ದರೆ ಹಣವನ್ನು ಸುಮ್ಮನೆ ಜೇಬಿನಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತಾರೆ ಬಫೆಟ್. ಬಫೆಟ್ ಅವರ ಮೌಲ್ಯಾಧಾರಿತ ಹೂಡಿಕೆ ತತ್ವ ಅನುಸರಿಸಲು ಇಂಥ ಶಿಸ್ತು ಅಗತ್ಯ.ಎಂಥ ಕಂಪೆನಿಗಳಲ್ಲಿ ಹೂಡಿಕೆ

-ರಾತ್ರಿ ಕಳೆದು ಬೆಳಗಾಗುವುದರೊಳಗೆ ಷೇರುಗಳ ಬೆಲೆ ಆಕಾಶಕ್ಕೆ ಚಿಮ್ಮಿ ಅಷ್ಟೇ ಬೇಗ ಭೂಮಿಗೆ ಕುಸಿಯುವ ಷೇರುಗಳ ಹೂಡಿಕೆಯಿಂದ ಅಂತರ ಕಾಯ್ದುಕೊಳ್ಳಿ.-ಕಂಪೆನಿಯೊಂದರ ಆಡಳಿತ ಮಂಡಳಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದರೆ ಅಂಥ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಬೇಡ. ಏಕೆಂದರೆ ಬದಲಾದ ವಾತಾವರಣದಲ್ಲಿ ಯಾವಾಗ ಮತ್ತು ಹೇಗೆ ಈ ಸಂಸ್ಥೆ ಲಾಭ ಗಳಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಲಾಭ ಮಾಡಿದರೂ ನಿಮ್ಮ ನಿರೀಕ್ಷೆಗೆ ತಕ್ಕ ಲಾಭ ಬರುತ್ತದೆ ಎಂದು ಹೇಳಲಾಗದು.ಫಾರ್ಚೂನ್ ಪತ್ರಿಕೆ 1998ರಲ್ಲಿ ಒಂದು ಸಾವಿರ ದೊಡ್ಡ ಕಂಪೆನಿಗಳ ಸಾಧನೆ ವಿಶ್ಲೇಷಿಸಿತ್ತು. ಇವುಗಳ ಪೈಕಿ ಹೆಚ್ಚಿನ ಸಾಧನೆ ಮಾಡಿದ ಬಹುತೇಕ ಕಂಪೆನಿಗಳು ಸಾಬೂನು, ತಂಪು ಪಾನೀಯ ದಂಥ ಅತ್ಯಂತ ಸರಳವಾಗಿ ಅರ್ಥವಾಗುವಂಥ ಉದ್ಯಮ ನಡೆಸುತ್ತಿದ್ದವು ಎನ್ನುವುದು ಗಮನಾರ್ಹ. ಇವು ಲಾಭ ಮಾಡುವುದು ನಿಧಾನವಾದರೂ ಸ್ಥಿರ ಹಾಗೂ ದೀರ್ಘಕಾಲೀನ ಉದ್ಯಮಗಳಿವು.ಉದಾಹರಣೆಗೆ ನಮ್ಮ ಮೈಸೂರ್ ಸ್ಯಾಂಡಲ್ ಸೋಪ್ ಇದ್ದಂತೆ. ಇವುಗಳ ಯಶಸ್ಸು ಆಮೆ ಮತ್ತು ಮೊಲದ ಸ್ಪರ್ಧೆಯ ನೀತಿಕತೆಯಲ್ಲಿ ಇದ್ದಂತೆ. ಆಮೆ ನಿಧಾನಗತಿಯಲ್ಲಿ ಚಲಿಸಿದರೂ ಗೆಲುವು ಅದರದೇ. ಅದೇ ರೀತಿ ಇಂಥ ನಿಧಾನಗತಿಯ ಕಂಪೆನಿಗಳೇ ಹೈಟೆಕ್ ಕಂಪೆನಿಗಳಿಗಿಂತ ಹೆಚ್ಚು ಲಾಭಾಂಶ ತರುವಂಥವು ಎನ್ನುತ್ತಾರೆ ಬಫೆಟ್.

ಆಲಸಿಯಾಗಿ - ಕಾಸು ಮಾಡಿ!ಷೇರುಪೇಟೆಯಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ಷೇರುಗಳು ಕೈ ಬದಲಾಯಿಸುತ್ತವೆ. ಕೆಲವರು ಪ್ರತಿದಿನ ಬೆಳಿಗ್ಗೆ ಷೇರು ಕೊಂಡು ಸಂಜೆವರೆಗೆ ಪ್ರತಿಕ್ಷಣದ ಏರಿಳಿತಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ತಮಗೆ ಜಾಸ್ತಿ ಎಂದು ಎನಿಸಿದ ಕ್ಷಣದಲ್ಲಿಯೇ  ಷೇರುಗಳನ್ನು ಬಿಕರಿ ಮಾಡಿಬಿಡುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದವರದೂ ಇದೇ ಪಾಡು. ತಮ್ಮ ಹೂಡಿಕೆಗಳನ್ನು ಪ್ರತಿದಿನ, ಪ್ರತಿಕ್ಷಣ ನೋಡುವುದೇ ಅವರ ಕಾಯಕ.ಇಂಥ ನಡೆಯನ್ನೇ ವಾರೆನ್ ಬಫೆಟ್ ಹೈಪರ್ ಆಕ್ಟಿವಿಟಿ (ಅತಿ ಚಟುವಟಿಕೆ) ಎನ್ನುತ್ತಾರೆ. ಅತಿಯಾದರೆ ಅಮೃತವೂ ವಿಷ. ಅದೇ ರೀತಿ ಅತಿಯಾದ ಚಟುವಟಿಕೆಯೂ ಕೆಟ್ಟದ್ದೇ. ಬಫೆಟ್ ಪ್ರಕಾರ ಆಲಸಿ ಹೂಡಿಕೆದಾರನೇ ಬುದ್ಧಿವಂತ.ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಏರಿಳಿತಗಳ ಕಡೆ ಗಮನ ಕೊಡದೇ ಗೊರಕೆ ಹೊಡೆಯುವವನೇ ಲಾಭ ಮಾಡುವಾತ ಎನ್ನುವುದು ಬಫೆಟ್ ಅನುಭವಾಮೃತ.ನೀರು-ಗೊಬ್ಬರ ಸಿಗುವೆಡೆ ನೀವು ಉತ್ತಮ ತಳಿಯ ಸಾಗುವಾನಿ ಬೀಜ ನೆಟ್ಟಿದ್ದೀರಿ ಎಂದುಕೊಳ್ಳಿ. ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಹೆಮ್ಮರವಾಗುವ ತನಕ ಕಾಯಬೇಕು. ಅದನ್ನು ನೆಟ್ಟ ಬೀಜ ಮೊಳಕೆಯೊಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆ ಜಾಗವನ್ನು ಪದೇ ಪದೇ ಅಗೆಯುತ್ತ ಕುಳಿತರೆ ನಿಮಗೆ ಬೆಲೆ ಬಾಳುವ ಸಾಗುವಾನಿ ಮರ ಸಿಗುವುದಿಲ್ಲ. ಅದೇ ರೀತಿ ನೀವು ಹೂಡಿಕೆ ಮಾಡಿದ ಷೇರನ್ನು ಪದೇ ಪದೇ ಮಾರುತ್ತ ಹೋದರೆ ಲಾಭವಾಗುವುದು ಬ್ರೋಕರ್‌ಗೆ ವಿನಾ ನಿಮಗಲ್ಲ.ಷೇರು ಕೊಳ್ಳುವಾಗ ತೋರುವ ಆಸಕ್ತಿಯನ್ನು ಮಾರುವಾಗ ತೋರಿಸುವುದಿಲ್ಲ ಬಫೆಟ್. ಆಗಾಗ ತಮ್ಮ ಷೇರುಗಳನ್ನು ಮಾರುವವರನ್ನು ಹೂವಿನಿಂದ ಹೂವಿಗೆ ಹಾರುವ ದುಂಬಿಗಳಿಗೆ ಹೋಲಿಸುತ್ತಾರೆ ಅವರು. ಆದ್ದರಿಂದ ನೀವೀಗಾಗಲೇ ಮಕರಂದಭರಿತ ಹೂವಿನ ಮೇಲೆ ಇದ್ದರೆ  ಲೆಹ್ಲಚ್ಕೊಂಡಿರಿ -ಕಚ್ಕೊಂಡಿರಿ ಎನ್ನುತ್ತಾರೆ ಬಫೆಟ್!ತಾಳ್ಮೆ ಹಾಗೂ ಆಲಸ್ಯವೇ ಬಫೆಟ್ ಯಶಸ್ಸಿನ ಗುಟ್ಟು. ಅನೇಕ ಹೂಡಿಕೆದಾರರು ಅವಸರ ಹಾಗೂ ಅತಿಯಾದ ಚಟುವಟಿಕೆಯಿಂದ ತಮ್ಮ ಹಣ ಕಳೆದುಕೊಳ್ಳುತ್ತಾರೆ. ಅವಸರವೇ ಸಂಪತ್ತಿನ ನಾಶಕ್ಕೆ ಕಾರಣ ಎಂಬುದು ಬಫೆಟ್ ಎಚ್ಚರಿಕೆ ಗಂಟೆ.ಹೂಡಿಕೆ ಮಾಡಿದ ಕೆಲವೇ ದಿನಗಳಲ್ಲಿ ನೀವು ಆಗಾಗ ಷೇರುಗಳನ್ನು ಮಾರಿದರೆ ವಹಿವಾಟು ವೆಚ್ಚಗಳಾದ ಕಮಿಷನ್, ಗಳಿಕೆ ತೆರಿಗೆ (ಕ್ಯಾಪಿಟಲ್ ಗೇನ್ಸ್  ಟ್ಯಾಕ್ಸ್) ತೆರಬೇಕಾಗುತ್ತದೆ. ಆದರೆ, ದೀರ್ಘಕಾಲದ ಹೂಡಿಕೆಗಳಿಂದ ಇಂಥ ವೆಚ್ಚಗಳಿಂದ ನೀವು ಪಾರಾಗುತ್ತೀರಿ. ಆದ್ದರಿಂದ ಷೇರು ಮಾರುಕಟ್ಟೆ ಹೂಡಿಕೆ ಮಟ್ಟಿಗೆ ಅವಸರ ಬೇಡ ಆಲಸಿಗಳಾಗಿ!

 (ಮುಂದುವರೆಯುವುದು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.