ಶುಕ್ರವಾರ, ಮೇ 20, 2022
23 °C

ಭವಿಷ್ಯ ನಿಧಿ ಹೂಡಿಕೆ: 15ರಂದು ಟ್ರಸ್ಟಿಗಳ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನೌಕರರ ಭವಿಷ್ಯ ನಿಧಿಯ ಸ್ವಲ್ಪ ಭಾಗವನ್ನು ‘ಎಲ್‌ಐಸಿ’ ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳಲ್ಲಿ ಹೂಡುವ ಪ್ರಸ್ತಾವಕ್ಕೆ ‘ಇಪಿಎಫ್‌ಒ’ ಕೇಂದ್ರ ಮಂಡಳಿ ಟ್ರಸ್ಟಿಗಳು (ಸಿಬಿಟಿ) ಮತ್ತು ಭವಿಷ್ಯ ನಿಧಿ ವ್ಯವಸ್ಥಾಪಕರು ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಇದೇ 15ರಂದು ಸಭೆ ನಡೆಯಲಿದೆ. ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿರುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ‘ಇಪಿಎಫ್‌ಒ’ ಶೃಂಗ ಸಭೆ ಇದಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ‘ಎಲ್‌ಐಸಿ’ ಗೃಹ ಸಾಲ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿರುವುದರಿಂದ, ಈ ವರದಿಯನ್ನೂ ಸಮಿತಿ ಎದುರುನೋಡುತ್ತಿದೆ.ಹೂಡಿಕೆ ನಿರೀಕ್ಷೆ:
‘ಎಲ್‌ಐಸಿ’ ಗೃಹನಿರ್ಮಾಣ ಹಣಕಾಸು ಸಂಸ್ಥೆಯ ಬಾಂಡ್‌ಗಳಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ)  ರೂ454 ಕೋಟಿ  ಹೂಡುವ ನಿರೀಕ್ಷೆ ಇದೆ. ಈಗಿರುವ ‘ಎಲ್‌ಐಸಿ’ ಗೃಹ ನಿರ್ಮಾಣ ಹೂಡಿಕೆ ನಿಯಮದಂತೆ ರೂ846 ಕೋಟಿಯವರೆಗೆ  ಹೂಡಿಕೆ ಮಾಡಬಹುದಾಗಿದೆ. ಭವಿಷ್ಯ ನಿಧಿ ಸಂಘಟನೆಯ ಸಲಹಾ ಸಮಿತಿ ಮತ್ತು ಹಣಕಾಸು ಹಾಗೂ ಹೂಡಿಕೆ ಸಮಿತಿ (ಎಫ್‌ಐಸಿ) ಕಳೆದ ಜನವರಿ 28ರಂದು ಇದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ಎಲ್‌ಐಸಿ ಗೃಹ ನಿರ್ಮಾಣ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಪ್ರಸ್ತಾವನ್ನು ಅನುಮೋದಿಸಿದೆ. ‘ಎಫ್‌ಐಸಿ’ ಅನುಮೋದನೆಯನ್ನು ‘ಸಿಬಿಟಿ’ ಅಂತಿಮಗೊಳಿಸಬೇಕಾಗಿದೆ. ಹಣಕಾಸು ಸಚಿವಾಲಯ ಮತ್ತು ಹೂಡಿಕೆ ಮೌಲ್ಯಮಾಪನ ಸಂಸ್ಥೆಗಳು ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ,  ಈ ನಿರ್ಧಾರಕ್ಕೆ ಟ್ರಸ್ಟಿಗಳು ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ಹಿಂದ್ ಮಜ್ದೂರ್ ಸಭಾದ ಕಾರ್ಯದರ್ಶಿ ಎ.ಡಿ ನಾಗಪಾಲ್ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.