ಭಾಗೀರತಿಯ ಕಣ್ಣು...

ಭಾನುವಾರ, ಜೂಲೈ 21, 2019
21 °C

ಭಾಗೀರತಿಯ ಕಣ್ಣು...

Published:
Updated:

`ಭಾಗೀರತಿ~ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ಛಾಯಾಗ್ರಾಹಕ ಹರೀಶ್ ಎನ್. ಸೊಂಡೆಕೊಪ್ಪ ಕ್ಯಾಮೆರಾದಲ್ಲಿ ಮುಳುಗಿ ಹೋಗಿದ್ದಾರೆ. ಸುತ್ತ ಇದ್ದವರಿಗೆಲ್ಲಾ ದಿಗಿಲು. ಕಾರಣ ಅಲ್ಲಿ ದೃಶ್ಯಗಳ ಪೂರ್ವಭಾವಿ ಪರೀಕ್ಷೆ ನಡೆಸಬಹುದಾದ ಮಾನಿಟರ್ ಇಲ್ಲವೇ ಇಲ್ಲ. ಹೊಸ ಹುಡುಗ ಬೇರೆ.ಏನಾದರೂ ಹೆಚ್ಚು ಕಡಿಮೆ ಆದರೆ ಎಂಬ ಭೀತಿ ಅನೇಕರಿಗೆ. ಆದರೆ ಮಾನಿಟರ್ ಬಳಸುವ ಕುರಿತಂತೆ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರದು ಮೊದಲಿನಿಂದಲೂ `ಬಂಡಾಯ~. ಗುರುವಿನಂತೆಯೇ ಶಿಷ್ಯ! ದೃಶ್ಯದ ಚೌಕಟ್ಟು ಹೀಗಿರಬೇಕೆಂದು ಬರಗೂರರು ವಿವರಿಸುತ್ತಿದ್ದರು ಅಷ್ಟೇ. ಮುಂದಿನದ್ದೆಲ್ಲಾ ಹರೀಶ್‌ಮಯ.ಚನ್ನಪಟ್ಟಣ ಸಮೀಪದ ವಿರೂಪಾಕ್ಷಪುರ ಹಾಗೂ ಮೇಲುಕೋಟೆಯ ಬಳಿ ಒಟ್ಟು 28 ದಿನಗಳ ನಿರಂತರ ಚಿತ್ರೀಕರಣ ಸಾಗಿತ್ತು. ವಿರೂಪಾಕ್ಷಪುರದ ದೊಡ್ಡಮನೆಯಲ್ಲಿ ಚಿತ್ರೀಕರಣ ನಡೆಸುವಾಗ ಕತ್ತಲಿನ ಅಡಚಣೆ. ಆದರೆ ಕಡಿಮೆ ಬೆಳಕು ಬಳಸಿ ಚಿತ್ರೀಕರಿಸಬೇಕು ಎನ್ನುವುದು ಹರೀಶ್ ಹಠ.ಅವರು ಅಂದುಕೊಂಡಂತೆ ನೆರಳು ಬೆಳಕಿನ ಆಟ ಯಶ ಕಂಡಿತು. ಪ್ರತಿ ದೃಶ್ಯದಲ್ಲೂ ಕೌಶಲ್ಯ ಎದ್ದು ತೋರಿತು. ಚಿತ್ರದ ಒಂದು ವಿಶೇಷ ಎಂದರೆ ಅಲ್ಲಿ ಕ್ಯಾಮೆರಾದ ಯಾವ ಹೈಬ್ರೀಡ್ ತಂತ್ರಜ್ಞಾನವನ್ನೂ ಬಳಸಿಲ್ಲ. ಕೇವಲ ಸರಳ ಟ್ರಾಲಿ, ಪುಟ್ಟ ಕ್ರೇನ್ ಬಳಸಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಹರೀಶ್ ಮೂಲತಃ ಸಾಹಿತ್ಯದ ವಿದ್ಯಾರ್ಥಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು. ಅವರ ಪ್ರಕಾರ ಸಾಹಿತ್ಯದ ಜ್ಞಾನವೂ ಭಾಗೀರತಿಗೆ ಸೌಂದರ್ಯದ ಎರಕ ಎರೆಯಲು ಶ್ರಮಿಸಿತು. ಎಂ.ಎ ಓದುತ್ತಿದ್ದಾಗ ಪ್ರೋತ್ಸಾಹಿಸಿದ್ದು ಪ್ರಾಧ್ಯಾಪಕರಾದ ಕಿ.ರಂ.ನಾಗರಾಜ, ಕೆ.ಮರುಳಸಿದ್ದಪ್ಪ ಹಾಗೂ ಬರಗೂರರು.ಓದಿದ್ದು ಪೂರ್ಣಗೊಂಡಿತು. ಮೇಷ್ಟ್ರ ವೃತ್ತಿ ಸ್ವೀಕರಿಸಲು ಹರೀಶ್ ಮನಸ್ಸು ಒಪ್ಪುತ್ತಿಲ್ಲ. ಹೈಸ್ಕೂಲು ದಿನಗಳಿಂದಲೂ ಕ್ಯಾಮೆರಾ ಬಗ್ಗೆ ಒಲವು. ಮನೆಯಲ್ಲಿದ್ದ ಪುಟ್ಟ ಕ್ಯಾಮೆರಾ ಹರೀಶರ ಕನಸುಗಳಿಗೆ ಕಣ್ಣಾಯಿತು. `ಮುಂದೇನು ಮಾಡುವೆ?~ ಎಂದು ಗುರುಗಳು ಕೇಳಿದರೆ ತಕ್ಷಣ ಅವರಿಂದ ಬರುತ್ತಿದ್ದ ಉತ್ತರ ಚಿತ್ರರಂಗ ಪ್ರವೇಶ.`ಕೊಶ್ಚನ್ ಮಾರ್ಕ್~ ಚಿತ್ರದಲ್ಲಿ ದುಡಿದರಾದರೂ ಅದರಿಂದ ತೃಪ್ತಿ ಸಿಗಲಿಲ್ಲ. ಮೇಲಾಗಿ ಕ್ಯಾಮೆರಾವನ್ನು ಎಲ್ಲಾ ಆಯಾಮಗಳಿಂದ ಅಭ್ಯಾಸ ಮಾಡುವ ಅಗತ್ಯವಿತ್ತು. ಹಾಗಾಗಿ ಛಾಯಾಗ್ರಹಣದಲ್ಲಿ ತರಬೇತಿ ಪಡೆಯಲು ಮುಂದಾದರು. ಅದಕ್ಕಾಗಿ ಚೆನ್ನೈಗೆ ಪಯಣ. ಆದರೆ ಅಲ್ಲಿ ವ್ಯಾಸಂಗ ಮಾಡಲು ಹಣದ ಕೊರತೆ. ಮರಳಿ ಬಂದವರು ಆಯ್ದುಕೊಂಡಿದ್ದು ಬೆಂಗಳೂರಿನ ಎಸ್‌ಜೆಪಿ ಕಾಲೇಜಿನ ಛಾಯಾಗ್ರಹಣ ಡಿಪ್ಲೊಮಾ ಕೋರ್ಸ್.ಈ ಮಧ್ಯೆ `ವಿಸ್ತಾರ~ ಎಂಬ ರಂಗತಂಡ ಕಟ್ಟಿಕೊಂಡು ನಾಟಕ ಆಡತೊಡಗಿದರು. ಕಾಲೇಜು ದಿನಗಳಲ್ಲಿ `ಏಕಲವ್ಯ~, `ನಂ ಕ್ಲಬ್ಬು~ ನಾಟಕಗಳನ್ನಾಡಿದ ಅನುಭವ ಜತೆಗಿತ್ತು. `ವಿಸ್ತಾರ~ದ ಎರಡು ಮೂರು ನಾಟಕಗಳು ಯಶಸ್ವಿ ಪ್ರದರ್ಶನ ಕಂಡವು. ಗೆಳೆಯರಾದ ಕಿಶೋರ್, `ಆ ದಿನಗಳು~ ಖ್ಯಾತಿಯ ಚೇತನ್‌ರು ವಿಸ್ತಾರದ ಸದಸ್ಯರು.ಹೀಗಾಗಿ ರಂಗಭೂಮಿಯ ಜತೆಗೆ ಚಿತ್ರರಂಗದ ನಂಟು ಇನ್ನಷ್ಟು ಬೆಳೆಯಿತು. `ಕಬ್ಬಡಿ~ ಚಿತ್ರದಲ್ಲಿ ಸಿನಿಮಾ ಕೃಷಿ ಮುಂದುವರಿಯಿತು. ಆ ನಂತರ ಪರಿಚಯವಾದದ್ದು `ಮುಂಗಾರು ಮಳೆ~ ಖ್ಯಾತಿಯ ಛಾಯಾಗ್ರಾಹಕ ಕೃಷ್ಣ. ಎಸ್‌ಜೆಪಿಯಿಂದ ಡಿಪ್ಲೊಮಾ ಪದವಿ ಪಡೆದಿದ್ದ ಕೃಷ್ಣರಿಗೆ ಹರೀಶ್ ಮತ್ತಷ್ಟು ಹತ್ತಿರಾದರು. ಅವರೊಂದಿಗೆ `ಹಾಗೆ ಸುಮ್ಮನೆ~ ಹಾಗೂ `ರಾಜ್~ ಚಿತ್ರಗಳಿಗೆ ಸಹಾಯಕರಾಗಿ ದುಡಿಯುವ ಅವಕಾಶ. `ದಿಲ್ದಾರ್~, `ಪ್ರೇಮಿಸಂ~ ಚಿತ್ರಗಳಿಗೂ ಹರೀಶ್ ಪ್ರತಿಭೆ ಶ್ರಮಿಸಿತು.ಅಷ್ಟು ಹೊತ್ತಿಗೆ ಬರಗೂರರಿಂದ ಆಹ್ವಾನ. ಅವರ `ಭೂಮಿತಾಯಿ~ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕನಾಗಿ ಹೊರಹೊಮ್ಮಿದರು. ಬರಗೂರರು ಮೇಷ್ಟ್ರಾಗಿ ಪರಿಚಯ. ನಿರ್ದೇಶಕರಾಗಿ ಅಲ್ಲ. ಅವರಿಗೆ ನೋವಾಗದಂತೆ ಕೆಲಸ ಮಾಡಬೇಕು. ಕೊಂಚ ಹೆದರಿಕೆಯಲ್ಲಿಯೇ ಕೆಲಸ ಆರಂಭವಾಯಿತು. `ಆ ಚಿತ್ರದಲ್ಲಿ ನಾನು ಕೆಲಸ ಮಾಡಿದೆ ಎನ್ನುವುದಕ್ಕಿಂತಲೂ ಬರಗೂರರು ಮಾಡಿಸಿದರು ಎನ್ನಬಹುದು.ಏನಾಗುತ್ತದೋ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆದರೆ ಅದನ್ನು ಸರಿದೂಗಿಸಿದ್ದು ಮೇಷ್ಟ್ರು~ ಎಂಬುದು ಅವರ ವಿನಯ ಭರಿತ ಮಾತು.`ಭಾಗೀರತಿ~ ನಂತರ ತೊಡಗಿಕೊಂಡಿದ್ದು ರವಿಶಂಕರ್, ರೂಪಿಕಾ ಮುಂತಾದವರ ತಾರಾಗಣದ `ನಮ್ ಏರಿಯಾಲ್ ಇನ್ನೊಂದಿನ~ ಚಿತ್ರದಲ್ಲಿ.ಕೇವಲ ಒಂದೂ ಮುಕ್ಕಾಲು ಗಂಟೆಯಲ್ಲಿ, ಒಂದೇ ಟೇಕ್‌ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ಹೆಗ್ಗಳಿಕೆ ಅದರದ್ದು. ಅತಿ ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ದಾಖಲೆ ಅದರ ಹೆಸರಿನಲ್ಲಿದೆ. ಒಟ್ಟು ಒಂಬತ್ತು ಛಾಯಾಗ್ರಾಹಕರು ಚಿತ್ರದಲ್ಲಿ ದುಡಿದಿದ್ದಾರೆ.ಛಾಯಾಗ್ರಾಹಕ ಪ್ರಸಾದ್ ನೇತೃತ್ವದಲ್ಲಿ ಇದಕ್ಕಾಗಿ ಹರೀಶ್ ಹಲವು ಬಾರಿ ತಾಲೀಮು ನಡೆಸಿದ್ದರು. ಕೇವಲ ಸೂರ್ಯನ ಬೆಳಕನ್ನು ಬಳಸಿದ್ದು, ಮರು ಟೇಕ್‌ಗೆ ಅವಕಾಶ ಇಲ್ಲದಂತೆ ಚಿತ್ರೀಕರಣ ಪೂರ್ಣಗೊಳಿಸಿದ್ದು ಅವರ ಪಾಲಿಗೆ ಮರೆಯಲಾಗದ ಅನುಭವವಾಗಿ ಉಳಿದಿದೆ.ರಘು ಮುಖರ್ಜಿ ನಾಯಕ ನಟನಾಗಿರುವ `ಸವಾರಿ ಟು 1000 ಎ.ಡಿ~ ಚಿತ್ರದಲ್ಲಿ ನಾಯಕ ಯಾತ್ರೆ ಹೊರಡುತ್ತಾನೆ. ಅದೊಂದು ವಿಭಿನ್ನ ಯಾತ್ರೆ. ಅದನ್ನು ಕ್ಯಾಮೆರಾ ಕಣ್ಣಿನ ಮೂಲಕ ಚಿತ್ರೀಕರಿಸುತ್ತಿರುವುದು ಹರೀಶ್. ಅ ಮೂಲತಃ ಬೆಂಗಳೂರು ಸಮೀಪದ ಸೊಂಡೆಕೊಪ್ಪದ ಕೃಷಿ ಕುಟುಂಬದಿಂದ ಬಂದ ಅವರು ಚಿತ್ರೀಕರಣ ಇಲ್ಲದ ಸಂದರ್ಭದಲ್ಲಿ ಊರಿಗೆ ತೆರಳಿ ವ್ಯವಸಾಯ ಮಾಡುತ್ತಾರಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry