ಭಾಗೀರತಿ ಹಾಡಿನ ದೋಣಿ

7

ಭಾಗೀರತಿ ಹಾಡಿನ ದೋಣಿ

Published:
Updated:
ಭಾಗೀರತಿ ಹಾಡಿನ ದೋಣಿ

ಆ ಸಮಾರಂಭಕ್ಕೆ ಅದ್ದೂರಿತನದ ಕಳೆಯಿತ್ತು. ಚಿತ್ರತಂಡದ ಪ್ರಮುಖರೆಲ್ಲರೂ ವೇದಿಕೆಯ ಒಂದುಬದಿಯಲ್ಲಿ ವಿರಾಜಮಾನರಾಗಿದ್ದರೆ, ಮುಖ್ಯವೇದಿಕೆಯನ್ನು ಖ್ಯಾತನಾಮರ ಬಳಗ ಹಂಚಿಕೊಂಡಿತ್ತು. ಅದು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಭಾಗೀರತಿ~ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. `ಭಾಗೀರತಿ~ ಜಾನಪದ ಕಥೆ ಆಧಾರಿತ ಚಿತ್ರವಾದರೂ ತಮ್ಮ ಕಮರ್ಷಿಯಲ್ ಚಿತ್ರಗಳ ಕಾರ್ಯಕ್ರಮಗಳಂತೆಯೇ ಸಿ.ಡಿ ಬಿಡುಗಡೆ ಸಮಾರಂಭ ಆಯೋಜಿಸಿದ್ದರು ನಿರ್ಮಾಪಕ ಬಿ.ಕೆ.ಶ್ರೀನಿವಾಸ್.ನಟಿಯರಾದ ತಾರಾ, ಭಾವನಾ, ರಾಧಾ ರಾಮಚಂದ್ರ, ಹೇಮಾ ಚೌಧುರಿ, ವತ್ಸಲಾ ಮೋಹನ್‌ರ ತಾರಾ ಮೆರುಗಿನ ಜೊತೆ ನಟ ಪುನೀತ್ ರಾಜ್‌ಕುಮಾರ್, ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಅಶ್ವಿನಿ ಆಡಿಯೊ ಸಂಸ್ಥೆ ಮಾಲೀಕ ಕೃಷ್ಣಪ್ರಸಾದ್ ಚಿತ್ರತಂಡದ ಜೊತೆ ಪ್ರಕಾಶಿಸುತ್ತಿದ್ದರು. ಧ್ವನಿಸುರುಳಿ ಬಿಡುಗಡೆ ಮಾಡಿದ ಪುನೀತ್- `ಕಲಾತ್ಮಕ ಅಥವಾ ಕಮರ್ಷಿಯಲ್ ಎಂಬ ಭಾವದಿಂದ ಚಿತ್ರ ನೋಡುವುದಿಲ್ಲ. ನನಗೆ ಎರಡೂ ಪ್ರಕಾರದ ಚಿತ್ರಗಳು ಒಂದೇ. ಒಳ್ಳೆಯ ಸಿನಿಮಾ ಎಂದು ಚಿತ್ರ ನೋಡುತ್ತೇನೆ~ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.ಬರಗೂರರ ಪ್ರತಿ ನಡೆ ನುಡಿಯಲ್ಲೂ ಗಂಭೀರ ಚಿಂತನೆ ಇರುತ್ತದೆ. ಅದು ಸಾಹಿತ್ಯ ಮತ್ತು ಚಲನಚಿತ್ರಗಳಲ್ಲೂ ವ್ಯಕ್ತವಾಗುತ್ತಿದೆ ಎಂದು ಪ್ರಶಂಸಿಸಿದರು ಚಂದ್ರಶೇಖರ ಕಂಬಾರ.`ಭಾಗೀರತಿ~ ಚಿತ್ರದ ಮೂಲ ಕಥೆಯಾದ `ಕೆರೆಗೆ ಹಾರ~ವನ್ನು ಹೆಚ್ಚಿನವರು ಮೂಢನಂಬಿಕೆಯನ್ನು ಬಿಂಬಿಸುವ ಚಿತ್ರ ಎಂದು ತಪ್ಪು ತಿಳಿದಿದ್ದಾರೆ. ವಾಸ್ತವವಾಗಿ ಇದು ಕೆರೆಗೆ ಹಾರವಾಗುವ ಹೆಣ್ಣಿನ ಒಳದನಿಯ ಸಂಕಟವನ್ನು ಅಂತರ್ಗತವಾಗಿಸುವ ಪ್ರತಿರೂಪ ಎಂಬ ಸ್ಪಷ್ಟೀಕರಣ ನೀಡಿದರು ಬರಗೂರು ರಾಮಚಂದ್ರಪ್ಪ.ಸಮಕಾಲೀನ ಸಂದರ್ಭಕ್ಕೆ ಅನುಗುಣವಾಗಿ ಮಕ್ಕಳ ಮೂಲಕ ಈ ಕಥೆಯನ್ನು ಹೊಸಪೀಳಿಗೆಗೆ ಮುಟ್ಟಿಸುವ ಪ್ರಯತ್ನ ತಮ್ಮದು ಎಂದು ವಿವರಿಸಿದರು. ನಿರ್ದೇಶಕನಿಗೆ ಸೃಜನಶೀಲತೆಯನ್ನು ಚಿತ್ರದಲ್ಲಿ ಮೂಡಿಸುವ ಸ್ವಾತಂತ್ರ್ಯ ಮುಖ್ಯ. ನನಗೆ ಸಂಭಾವನೆ ಕೊಡದಿದ್ದರೂ ಪರವಾಗಿಲ್ಲ, ಸಂವೇದನೆ ಉಳಿಸಿ ಎಂದೇ ಸಿನಿಮಾ ನಿರ್ದೇಶನ ಮಾಡಿದ್ದೇನೆ ಎಂದರು.ತಮ್ಮ ಕಮರ್ಷಿಯಲ್ ಚಿತ್ರಗಳ ನಡುವೆಯೇ ಕಲಾತ್ಮಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಮಾತಿನ ನಡುವೆ ತಮ್ಮ ಹಿಂದಿನ ಬದುಕನ್ನು ನೆನೆಸಿಕೊಂಡರು. ಆರ್ಟ್ ಮತ್ತು ಕಮರ್ಷಿಯಲ್ ಎಂಬ ಭೇದ ತರವಲ್ಲ ಎಂದ ಅವರು ಸ್ಯಾಟಲೈಟ್ ಹಕ್ಕುಗಳಿಗಾಗಿ ಸಿನಿಮಾ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಚಿತ್ರದಲ್ಲಿ ಆರು ಹಾಡುಗಳಿದ್ದು ವಿ.ಮನೋಹರ್ ಅವುಗಳಿಗೆ ಸ್ವರಗಳನ್ನು ಹೆಣೆದಿದ್ದಾರೆ. ಎಲ್ಲ ಹಾಡುಗಳನ್ನೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ರಚಿಸಿದ್ದು ಅಪ್ಪಟ ಕನ್ನಡದ ಪ್ರತಿಭೆಗಳೇ ಜಾನಪದ ಶೈಲಿಯ ಗೀತೆಗಳಿಗೆ ದನಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry