ಭಾಗ್ಯಲಕ್ಷ್ಮಿ ಬಾಂಡ್ ಹಂಚಿಕೆ ಕುಸಿತ:ಬಿಎಸ್‌ವೈ ಕನಸಿನ ಯೋಜನೆಗೆ ಜಿಲ್ಲೆಯಲ್ಲಿ ಹಿನ್ನಡೆ

7

ಭಾಗ್ಯಲಕ್ಷ್ಮಿ ಬಾಂಡ್ ಹಂಚಿಕೆ ಕುಸಿತ:ಬಿಎಸ್‌ವೈ ಕನಸಿನ ಯೋಜನೆಗೆ ಜಿಲ್ಲೆಯಲ್ಲಿ ಹಿನ್ನಡೆ

Published:
Updated:

ಧಾರವಾಡ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿಯ ವಿತರಣೆ ಮಾಡುವಲ್ಲಿ ತೋರಿದ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಯೋಜನೆಗೆ ಹಿನ್ನಡೆಯಾಗಿದೆ. ಜೊತೆಗೆ ಸರ್ಕಾರವು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಂದ ಮಾರ್ಪಾಟುಗಳೂ ಅರ್ಜಿ ಸಲ್ಲಿಕೆ ಸಂಖ್ಯೆ ಕಡಿಮೆಯಾಗಲು ಕಾರಣವಾಗಿರುವುದು ಬೆಳಕಿಗೆ ಬಂದಿದೆ.ಪಡಿತರ ಚೀಟಿ ಹಂಚಿಕೆ ಸಂದರ್ಭದಲ್ಲಿ ಸಾಕಷ್ಟು ಗೊಂದಲಗಳು, ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆಯನ್ನೇ ಸಚಿವೆ ಶೋಭಾ ಕರಂದ್ಲಾಜೆ ಅವರ ಸೂಚನೆಯ ಮೆರೆಗೆ ಸ್ಥಗಿತಗೊಳಿಸಲಾಗಿತ್ತು. ಈಗಷ್ಟೇ ತಾತ್ಕಾಲಿಕ ಪಡಿತರ ಚೀಟಿಗಳ ಬದಲು ಕಾಯಂ ಪಡಿತರ ಚೀಟಿ ಪಡೆಯಲು ಬಯೊಮೆಟ್ರಿಕ್ ಗುರುತು ಸಂಗ್ರಹಿಸುವ ಹಾಗೂ ಭಾವಚಿತ್ರ ತೆಗೆಸುವ ಪ್ರಕ್ರಿಯೆ ನಡೆದಿದೆ.ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹಾಗೂ ಆದಾಯ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಹಾಜರುಪಡಿಸಬೇಕಿದೆ. ಈ ನಿಯಮ ಫಲಾನುಭವಿಗಳಿಗೆ ಹೊಸ ಸಮಸ್ಯೆಯಾಗಿ ಕಾಡುತ್ತಿದೆ. ಯೋಜನೆ ಜಾರಿಗೆ ತಂದ ಹೊಸತರಲ್ಲಿ ಈ ಬಗೆಯ ಕಟ್ಟುನಿಟ್ಟಿನ ನಿಯಮಗಳು ಇಲ್ಲದೇ ಇರುವುದರಿಂದ ಬಾಂಡ್ ಪಡೆಯುವುದು ಸುಲಭವಾಗಿತ್ತು.

 

ಆದರೆ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ಜಿಲ್ಲೆಯ ಸಾವಿರಾರು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ನೀಡಲಾಗುತ್ತಿಲ್ಲ. ತಾತ್ಕಾಲಿಕ ಪಡಿತರ ಚೀಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿದರೆ ಅದು ಸ್ವೀಕೃತವಾಗುವುದಿಲ್ಲ. ಅದರ ನೇರ ಪರಿಣಾಮದಿಂದ ಬಾಂಡ್ ವಿತರಣೆ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗಿದೆ.ಉದಾಹರಣೆಗೆ 2006-07ರಲ್ಲಿ ಜಿಲ್ಲೆಯ ಒಟ್ಟು 10,141 ಬಾಂಡ್‌ಗಳಿಗೆ ಮಂಜೂರಾತಿ ನೀಡಲಾಗಿತ್ತು. ಸರ್ಕಾರ 10,086 ಬಾಂಡ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿತ್ತು. 2011-12ರಲ್ಲಿ ಕೇವಲ 4037 ಬಾಂಡ್‌ಗಳು ಮಂಜೂರಾಗಿದ್ದು, 3312 ಬಾಂಡ್‌ಗಳು ಫಲಾನುಭವಿಗಳಿಗೆ ತಲುಪಿವೆ.ಜಿಲ್ಲೆಯಲ್ಲಿ 2006-07ರಿಂದ 2012-13ನೇ ಸಾಲಿನವರೆಗೆ ಒಟ್ಟು 57,425 ಬಾಂಡ್‌ಗಳು ಮಂಜೂರಾಗಿದ್ದು, 45,053 ಬಾಂಡ್‌ಗಳಷ್ಟೇ ಫಲಾನುಭವಿಗಳಿಗೆ ತಲುಪಿವೆ. ರೂ 19.8 ಕೋಟಿ ಮೊತ್ತದ ಬಾಂಡ್‌ಗಳು ಇನ್ನೂ ಸರ್ಕಾರದಲ್ಲೇ ಬಾಕಿ ಉಳಿದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿದ ಅಂಕಿ ಸಂಖ್ಯೆಗಳೇ ಹೇಳುತ್ತಿವೆ.ಎಲ್ಲ ಬಗೆಯ ದಾಖಲೆಗಳು ಸರಿ ಇದ್ದರೂ ಬಾಂಡ್‌ಗಳು ಬರುತ್ತಿಲ್ಲ.  ಆದರೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿಗಳನ್ನು ಸಕಾಲಕ್ಕೆ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಇಂಥ ಸಾವಿರಾರು ಹೆಣ್ಣುಮಕ್ಕಳು ಯೋಜನೆಯಿಂದ ವಂಚಿತವಾಗುತ್ತಿದ್ದಾರೆ. ಅಲ್ಲದೇ ಮಗುವಿಗೆ ಒಂದು ವರ್ಷವಾದ ಬಳಿಕ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ.ಈ ಪರಿಸ್ಥಿತಿಯನ್ನು ಗಮನಿಸಿಯೇ ಇಲಾಖೆಯ ಕಾರ್ಯದರ್ಶಿಗಳು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಯೋಜನೆಗೆ ಅರ್ಹವಾದ ಕುಟುಂಬಕ್ಕೆ ವಿಳಂಬ ಮಾಡದೇ ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

 

ಅದರಂತೆ ಯೋಜನೆಯ ಮೇಲ್ವಿಚಾರಕರೇ ಖುದ್ದು ಆಸಕ್ತಿ ವಹಿಸಿ ಅರ್ಜಿಗಳನ್ನು ತುಂಬಿಸಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಹಾರ ಇಲಾಖೆಗೆ ನೀಡಲಾಗುತ್ತಿದೆ. ಇಲ್ಲದಿದ್ದರೆ ಬಾಂಡ್‌ಗಳೇ ದೊರೆಯುವುದಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.ಇದು ತಾತ್ಕಾಲಿಕ ಪಡಿತರ ಚೀಟಿ ಪಡೆದವರ ಸಮಸ್ಯೆಗೆ ಪರಿಹಾರವಾಯಿತು. ಆದರೆ ಹೊಸದಾಗಿ ಪಡಿತರ ಚೀಟಿ ಪಡೆಯುವವರ ಸಮಸ್ಯೆ? ಅದಕ್ಕೆ ಇನ್ನೂ ಯಾರ ಬಳಿಯೂ ಉತ್ತರ ಇಲ್ಲ! `ಫಲಾನುಭವಿಗಳ ಪಟ್ಟಿ ಸಿದ್ಧ~

ಭಾಗ್ಯಲಕ್ಷ್ಮಿ  ಬಾಂಡ್ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಕುಟುಂಬದವರಿಗೆ ಬಿಪಿಎಲ್ ಕಾರ್ಡುಗಳನ್ನು ಪಡೆಯುವುದಕ್ಕಾಗಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತ ಸಂಗ್ರಹಿಸಿದೆ. ಪಡಿತರ ಚೀಟಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಕೂಡಲೇ ಅರ್ಜಿ ಸಲ್ಲಿಸುತ್ತೇವೆ.ಶೀಘ್ರದಲ್ಲಿಯೇ ಪಡಿತರ ಚೀಟಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅರ್ಜಿಗಳನ್ನು ಸ್ವೀಕರಿಸಲಿದೆ.

-ಸಮೀರ್ ಶುಕ್ಲಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry