ಭಾಗ್ಯ ತಂದ ಬಾಲ್ಯದ `ಗೆಳೆಯರು'

7

ಭಾಗ್ಯ ತಂದ ಬಾಲ್ಯದ `ಗೆಳೆಯರು'

Published:
Updated:
ಭಾಗ್ಯ ತಂದ ಬಾಲ್ಯದ `ಗೆಳೆಯರು'

ಹಲೋ, ನಾನು ಚೆನ್ನೈನಿಂದ ಮಾತನಾಡ್ತಾ ಇದ್ದೇನೆ...ಹೇಗಿದ್ದೀರಾ...? `ನನಗೆ ನಿಮ್ಮ ಬಳಿ ಇರುವ ರಾಟ್ ವ್ಹೇಲರ್ ಬೇಕಾಗಿತ್ತು. ಎಷ್ಟು ಬೆಲೆ ಬೇಕಾದರೂ ತೆರಲು ಸಿದ್ಧ. ಅದನ್ನು ಮಾತ್ರ ನಮಗೆ ಕೊಟ್ಟು ಬಿಡಿ, ಪ್ಲೀಸ್...'ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆಯನ್ನು ಇಟ್ಟ ಈ ಕರೆ ಬಂದದ್ದು ತಮಿಳುನಾಡಿನ ಖ್ಯಾತ ವ್ಯಕ್ತಿಯೊಬ್ಬರ ಪುತ್ರನಿಂದ. ಅವರು ಕರೆ ಮಾಡಿದ್ದು ಹುಬ್ಬಳ್ಳಿಯ ಬಾನುಚಂದ್ರ ಹೊಸಮನಿ ಅವರಿಗೆ.ಹೊಸಮನಿ ಹುಬ್ಬಳ್ಳಿಯ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ. ಬರೀ ವಿದ್ಯಾರ್ಥಿಯಲ್ಲ, ಸಾಕುನಾಯಿಗಳ ಚಾಂಪಿಯನ್. ಜೊತೆಗೆ ನಾಯಿಗಳ ಆಹಾರ ಮಾರಾಟ ಉದ್ಯಮದತ್ತ ಅಡಿಯಿಡುತ್ತಿರುವ ಉತ್ಸಾಹಿ ಯುವಕ.ಬಾಲ್ಯದಿಂದ ಬೆಳೆಸಿಕೊಂಡ ಹವ್ಯಾಸ ಬಾನುಚಂದ್ರ ಅವರ ಭಾಗ್ಯದ ಬಾಗಿಲು ತೆರೆದಿದೆ. ಪ್ರಾಣಿಪ್ರಿಯರಾಗಿದ್ದ ಅವರು ನಾಯಿಗಳನ್ನು ಸಾಕಲು ಆರಂಭಿಸಿದ ನಂತರ ಬದುಕಿನ ಚಿತ್ರಣ ಬದಲಾಗಿದೆ. ಚಾಂಪಿಯನ್‌ಷಿಪ್‌ಗೆ ತೆರಳುವುದು, ಪ್ರಶಸ್ತಿ ಗೆದ್ದುಕೊಂಡು ಬರುವುದು, ನಂತರ ಮತ್ತೊಂದು ಸ್ಪರ್ಧೆಗೆ ಸಿದ್ಧರಾಗುವುದು ಇತ್ಯಾದಿ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಅವರಿಗೆ ಈಚೆಗೆ ವಿದೇಶಿ ಕಂಪೆನಿಗಳಿಂದ ಕರೆಗಳು ಬರಲು ಆರಂಭವಾಗಿದೆ.ನಾಯಿಗಳ ಆಹಾರವನ್ನು ಮಾರಾಟ ಮಾಡುವ ಏಜೆನ್ಸಿ ತೆರೆಯುವುದಕ್ಕಾಗಿ ಕೋರಿಕೆ ಬರತೊಡಗಿದೆ. ಈಚೆಗೆ ಅಮೆರಿಕದ ನ್ಯೂಟ್ರಾ ನಗೆಟ್ಸ್ ಕಂಪೆನಿಯ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ವಿತರಕನಾಗಿ ಅವರು ನೇಮಕಗೊಂಡಿದ್ದಾರೆ. ದೇಶಪಾಂಡೆ ನಗರದಲ್ಲಿ ಶ್ವಾನ ಉತ್ಪನ್ನಗಳ ಮಳಿಗೆ (ಕ್ಯಾನೀಸ್ ಪೆಟ್ ಪ್ರಾಡಕ್ಟ್ಸ್) ಆರಂಭಿಸಿದ ನಂತರವಂತೂ ಟೈಂಪಾಸ್ ಎಂಬ ಶಬ್ದವನ್ನೇ ದಿನಚರಿಯಿಂದ ಕಿತ್ತು ಹಾಕಿದ್ದಾರೆ.ಬಾನುಚಂದ್ರ ಅವರ ತಂದೆ ಅಶೋಕ ಹೊಸಮನಿ ಅರಣ್ಯ ಇಲಾಖೆ ಅಧಿಕಾರಿ. ಬಾನುಚಂದ್ರ ಸಣ್ಣ ಹುಡುಗನಾಗಿದ್ದಾಗ ಮನೆಯಲ್ಲಿ ಹಕ್ಕಿಗಳು, ಅಲಂಕಾರಿಕ ಮೀನು ಇತ್ಯಾದಿಗಳ ಸಹವಾಸ. ಅವುಗಳನ್ನು ನೋಡುತ್ತ ಆಸಕ್ತನಾದ ಆ ಹುಡುಗನಿಗೆ ಅವುಗಳ ಜೀವನ ವಿಧಾನದ ಮೇಲೆ ಆಸಕ್ತಿ ಬೆಳೆಯಿತು. ಹಾಗೆ ಬೆಳೆದ ಆಸಕ್ತಿ ಬೀದಿನಾಯಿಗಳತ್ತ ಹೊರಳಿತು. ರಸ್ತೆಯಲ್ಲಿ ಯಾವುದಾದರೂ ನಾಯಿ ಅಸ್ವಸ್ಥವಾಗಿ ಬಿದ್ದಿದ್ದರೆ ಅದನ್ನು ತೆಗೆದುಕೊಂಡು ಬಂದು ಆರೈಕೆ ಮಾಡತೊಡಗಿದರು.ಪ್ರಾಣಿಗಳಿಗೆ ತೊಂದರೆಯಾಗುವುದು ಕಂಡರೆ ಉರಿದು ಬೀಳಲು ತೊಡಗಿದರು. ದೊಡ್ಡವನಾಗುತ್ತಿದ್ದಂತೆ ಸಾಕುನಾಯಿಗಳನ್ನು ಮನೆಗೆ ತೆಗೆದುಕೊಂಡು ಬರತೊಡಗಿದರು. ಕಾಲೇಜು ಮೆಟ್ಟಿಲೇರಿದ ನಂತರ ಇಂಟರ್‌ನೆಟ್‌ನಲ್ಲಿ ಹುಡುಕಾಟ ಆರಂಭವಾಯಿತು. ಬಗೆ ಬಗೆ ನಾಯಿಗಳ ಮಾಹಿತಿ ಲಭಿಸತೊಡಗಿತು. ಅಂತರ್ಜಾಲದ ವಿಶಾಲ ಲೋಕ ಅವರಲ್ಲಿ ಶ್ವಾನ ಮೇಳಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಬಿತ್ತಿತು.

ಪ್ರಶಸ್ತಿಗಳ ಮಳೆ

ಬಾನುಚಂದ್ರ ಅವರ ಚಾಂಪಿಯನ್‌ಷಿಪ್ ಅಭಿಯಾನ ಆರಂಭಗೊಂಡದ್ದು ಊಟಿಯಲ್ಲಿ. 2012ರ ಆರಂಭದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದೇಶಿ ನಿರ್ಣಾಯಕರು `ಕ್ಲಾಸ್' ವಿಭಾಗದಲ್ಲಿ ಬಾನುಚಂದ್ರ ಅವರ ನಾಯಿಯನ್ನು ಉತ್ತಮ ನಾಯಿ ಎಂದು ಆಯ್ಕೆ ಮಾಡಿದರು.ನಂತರ ತಮಿಳುನಾಡಿನ ಸೇಲಂನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ `ಕ್ಲಾಸ್' ವಿಭಾಗದ ಪ್ರಶಸ್ತಿಯನ್ನು ಗಳಿಸಿದರು. ಆದರೂ ಅವರಿಗೆ ಚಾಂಪಿಯನ್ ಆಗುವ ಭಾಗ್ಯ ದೊರಕಲಿಲ್ಲ. ಈ ಪಟ್ಟವನ್ನು ಗಳಿಸಬೇಕಾದರೆ ವರ್ಷದಲ್ಲಿ ಕನಿಷ್ಠ ಮೂರು ಚಾಲೆಂಜ್ ಸರ್ಟಿಫಿಕೇಟ್ (ಸಿಸಿ)ಗಳನ್ನಾದರೂ ಪಡೆಯಬೇಕು. ಸಿಸಿ ಲೋಕದ ಬಾಗಿಲು ತೆರೆದದ್ದು ಮೈಸೂರಿನಲ್ಲಿ ನಡೆದ ಮೈಸೂರು ಕೆನೆಲ್ ಕ್ಲಬ್ ಆಶ್ರಯದ ಪ್ರದರ್ಶನ. ಅಲ್ಲಿ ಬಿಒಬಿ (ಬೆಸ್ಟ್ ಆಫ್ ಬ್ರೀಡ್) ವಿಭಾಗದಲ್ಲಿ ಸಿಸಿ ಗಳಿಸಿದರು. ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯಾದ ನಿರ್ಣಾಯಕರು ಅಲ್ಲಿ ಆಯ್ಕೆ ಮಾಡಿದ್ದರು.ಗೋವಾದಲ್ಲೂ `ಕ್ಲಾಸ್' ವಿಜೇತ ಪ್ರಮಾಣ ಪತ್ರ ಗಳಿಸಿ ಬೆಂಗಳೂರು ಪ್ರದರ್ಶನಕ್ಕೆ ಹೋದರು. ಅಲ್ಲಿಗೆ ಅಮೆರಿಕದ ಎಡ್ ಬಿವಿನ್ ಬಂದಿದ್ದರು. ಅವರು ಪ್ರಪಂಚದ ಹತ್ತು ಪ್ರಮುಖ ನಿರ್ಣಾಯಕರಲ್ಲಿ ಒಬ್ಬರು. ರಾಜ್ಯ ರಾಜಧಾನಿಯಲ್ಲಿ ಸಿಸಿ, ಬಿಒಬಿ ಇತ್ಯಾದಿ ಪ್ರಶಸ್ತಿಗಳನ್ನು ಬಾಚಿಕೊಂಡು ನೇರವಾಗಿ ಹೋದದ್ದು ಕೊಲ್ಲಾಪುರದಲ್ಲಿ ನಡೆದ ಪ್ರದರ್ಶನಕ್ಕೆ. ಅಲ್ಲಿ ಸಿಸಿ ಸಿಗುವುದರೊಂದಿಗೆ ಚಾಂಪಿಯನ್ ಪಟ್ಟವೂ ಹೆಗಲಿಗೇರಿತು. ಮೂರು ಸಿಸಿಗಳನ್ನು ತಂದುಕೊಟ್ಟ ಅಮೆರಿಕದ ತಳಿ ಪಗ್ ಹಾಗೂ ಜರ್ಮನ್ ತಳಿ ಮಿನಿಯೇಚರ್ ಪಿಂಚರ್ ಮೇಲೆ ಮುತ್ತಿನ ಮಳೆ ಸುರಿಯಿತು.ಬಾನು ಬಳಿ ಈಗ ಒಂಬತ್ತು ತಳಿಯ ಶ್ವಾನಗಳಿವೆ. ಎಲ್ಲವನ್ನೂ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿರುವ `ಬಾನುದೀಪ'ದಲ್ಲಿ ಇರಿಸಲು ಸಾಧ್ಯವಾಗದ ಕಾರಣ ಕೆಲವನ್ನು `ಬೋಡಿಂಗ್'ಗೆ ಹಾಕಿದ್ದಾರೆ. ಕೊಲ್ಲಾಪುರ, ಬೆಂಗಳೂರು, ಶಿವಮೊಗ್ಗ, ಕಾರವಾರ ಮುಂತಾದ ಕಡೆಗಳಲ್ಲಿ ಅವುಗಳು ಬೆಳೆಯುತ್ತಿವೆ. ಆಗಾಗ ಅಲ್ಲಿಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿ, ಬೋರ್ಡಿಂಗ್‌ಗೆ ತಗಲುವ ವೆಚ್ಚವನ್ನು ಭರಿಸಿ ಬರುತ್ತಾರೆ.ಅಮೆರಿಕದ ಬೀಗಲ್ ತಳಿಯ ನಾಯಿ ಸದ್ಯದಲ್ಲೇ ಅವರ ಬಳಗವನ್ನು ಸೇರಲಿದ್ದು ಇದರೊಂದಿಗೆ ಸಾಕುನಾಯಿಗಳ ಕುರಿತು ಅವರು ಮನದಲ್ಲಿ ಸಿದ್ಧಪಡಿಸಿರುವ ಪಟ್ಟಿ ಪರಿಪೂರ್ಣವಾಗಲಿದೆ. ಈ ತಳಿ ಬಂದ ನಂತರ ಭಾರತೀಯ ಗ್ರ್ಯಾಂಡ್ ಚಾಂಪಿಯನ್‌ಷಿಪ್‌ಗಾಗಿ ಪ್ರಯತ್ನ ನಡೆಸುವ ಸಿದ್ಧತೆಯಲ್ಲಿದ್ದಾರೆ.

ಬಂಗಾರ ತಂದ ಚಿನ್ನದಂಥ ನಾಯಿ

ನಾಯಿಗಳನ್ನು ಖರೀದಿಸಲು ಬಾನು ಮೊದಮೊದಲು ಪಾಕೆಟ್ ಮನಿಯನ್ನು ಬಳಸುತ್ತಿದ್ದರು. ಒಮ್ಮೆ `ರಾಟ್ ವ್ಹೇಲರ್' ತಳಿಯ ನಾಯಿಯನ್ನು ತಂದು ಮರಿ ಮಾಡಿಸಿ ಅವುಗಳ ಮಾರಾಟದಿಂದ ಬಂದ ಹಣದಲ್ಲಿ ಚಿನ್ನ ಖರೀದಿಸಿದ್ದರು. ಚಿನ್ನದ ದರ ಹೆಚ್ಚಾದಾಗ ಮಾರಾಟ ಮಾಡಿ ಆ ಹಣವನ್ನು ನಾಯಿಗಳಿಗಾಗಿ ಬಳಕೆ ಮಾಡಿಕೊಂಡರು. ಆದರೆ ರಾಟ್ ವ್ಹೇಲರ್ ಮರಿಗಳ ನೆನಪಿಗಾಗಿ ಒಂದು ಉಂಗುರ ಖರೀದಿಸಿದರು. ಅದನ್ನು ಒಮ್ಮೆಯೂ ಕೈಯಿಂದ ತೆಗೆಯಲಿಲ್ಲ. ನಂತರ ಬದುಕಿನಲ್ಲಿ ಚಿನ್ನದ ದಿನಗಳ ಉದಯವಾಯಿತು. ಈಗ ಕಾಲೇಜು, ಶ್ವಾನೋದ್ಯಮ ಇತ್ಯಾದಿಗಳಲ್ಲಿ ಬ್ಯುಸಿ. ಹೀಗಾಗಿ ವೃಥಾ ಕಳೆಯಲು ಸಮಯವೇ ಇಲ್ಲ. ಓದಿನಲ್ಲಿ ಹಿಂದೆಯೂ ಬಿದ್ದಿಲ್ಲ. ಬಾನುಚಂದ್ರ ಸಂಪರ್ಕ ಸಂಖ್ಯೆ: 9986071717.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry