ಗುರುವಾರ , ಏಪ್ರಿಲ್ 15, 2021
28 °C

ಭಾನುವಾರ, 11-11-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 11-11-1962

ಧಾರಣೆ ಏರಿಕೆ ತಡೆಗೆ ಕೇಂದ್ರದ ಯೋಜನೆ

ನವದೆಹಲಿ, ನ. 10 - ಅತ್ಯಗತ್ಯವಾದ ಪದಾರ್ಥಗಳ ಧಾರಣೆ ವಾಸಿಗಳನ್ನು ನ್ಯಾಯವಾದ ಮಟ್ಟದಲ್ಲಿ ಉಳಿಸಿಕೊಂಡು ಬರಲೋಸುಗ ಕೆಲವು ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.ಅತ್ಯುನ್ನತ ನೀತಿನಿರ್ಧಾರಕ ಸಮಿತಿಯಾದ ರಾಷ್ಟ್ರೀಯ ಅಭಿವೃದ್ಧಿ ಸಮಿತಿಯು ಈಗಾಗಲೇ ಅನುಮೋದಿಸಿರುವ ಈ ನಿರ್ಧಾರಗಳನ್ನು ಯೋಜನಾ ಶಾಖೆಯ ಸಚಿವರಾದ ಶ್ರೀ ಗುಲ್ಜಾರಿಲಾಲ್ ನಂದಾರವರು ಇಂದು ಲೋಕ ಸಭೆಯಲ್ಲಿ ಪ್ರಕಟಿಸಿದರು.ಸಹಕಾರಿ ಮತ್ತು ಇತರ ರೀತಿಯ ಬಳಕೆಯ ವಸ್ತುಗಳ ಅಂಗಡಿಗಳ ವ್ಯವಸ್ಥೆಯ ರಚನೆ, ಧಾರಣೆಗಳ ಸ್ಥಿಮಿತತೆಯ ವಿಷಯದಲ್ಲಿ ಉನ್ನತಮಟ್ಟದ ಸಮಿತಿಯೊಂದರ ರಚನೆ, ಸರ್ಕಾರದ ಬಳಿಯಿರುವ ದಾಸ್ತಾನಿನಿಂದ ಹೆಚ್ಚು ಪ್ರಮಾಣದಲ್ಲಿ ಗೋಧಿಯನ್ನು ಮಾರಾಟಕ್ಕೆ ಬಿಡುಗಡೆ ಮಾಡುವುದೂ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು, ಪ್ರತಿ ವರ್ಷವೂ ಒರಟು ಮತ್ತು ಮಧ್ಯಮ ದರ್ಜೆಯ ಬಟ್ಟೆಯ ಉತ್ಪಾದನೆಯನ್ನು 25.30 ಕೋಟಿ ಗಜಗಳಿಗೆ ಹೆಚ್ಚಿಸುವುದು ಇವು ಸರ್ಕಾರವು ಕೈಗೊಂಡಿರುವ ಕೆಲವು ಪ್ರಮುಖ ನಿರ್ಧಾರಗಳು.

ಗುರುವಾರದಿಂದ ಬಸ್ ದರದಲ್ಲಿ ಶೇ. 10 ರಷ್ಟು ಏರಿಕೆ

ಬೆಂಗಳೂರು, ನ. 10 - ರಾಜ್ಯದಲ್ಲಿ ನವೆಂಬರ್ 15ನೇ ಗುರುವಾರದಿಂದ ಬಸ್ ಪ್ರಯಾಣ ದರವನ್ನು ಶೇಕಡ 10 ರಷ್ಟು ಹೆಚ್ಚಿಸಲಾಗುವುದೆಂದು ರಸ್ತೆ ಸಾರಿಗೆ ಕಾರ್ಪೊರೇಷನ್ನಿನ ಅಧ್ಯಕ್ಷರೂ, ಸಾರಿಗೆ ಸಚಿವರೂ ಆದ ಶ್ರೀ ಡಿ. ದೇವರಾಜೇ ಅರಸ್ ಅವರು ಇಂದು ವರದಿಗಾರರಿಗೆ ತಿಳಿಸಿದರು.ಕಾರ್ಪೊರೇಷನ್ ಕೊಡಬೇಕಾಗಿರುವ ಶೇಕಡ 10 ರಷ್ಟು ಪ್ರಯಾಣಿಕರ ತೆರಿಗೆಯ ಪ್ರಮಾಣವನ್ನು ಮಾತ್ರ ಈ ಏರಿಕೆಯಿಂದ ಸಂದಾಯವಾಗುವುದೆಂದರು.

ಬಂಗಾರದ ಬೆಲೆ ಮತ್ತೆ ಇಳಿಮುಖ

ಮುಂಬೈ, ನ. 10 - ನಿನ್ನೆ ಕಂಡು ಬಂದ ಚೇತರಿಕೆ ಲಕ್ಷಣಗಳು ಕ್ಷಣಿಕವಾಗಿ ಪರಿಣಮಿಸಿ, ಮುಂಬೈ ಚಿನಿವಾರ ಪೇಟೆಯು ಇಂದು ಮತ್ತೆ ಸಾಕಷ್ಟು ಇಳಿಯಿತು.

ರಷ್ಯದಿಂದ ಒಪ್ಪಂದ ಪಾಲನೆ;ಡಿಸೆಂಬರ್‌ನಲ್ಲಿ ಭಾರತಕ್ಕೆ ಎಂ.ಐ.ಜಿ. ವಿಮಾನಗಳು

ನವದೆಹಲಿ, ನ. 10 - ಡಿಸೆಂಬರ್ ಮಧ್ಯಭಾಗದೊಳಗಾಗಿ ಭಾರತಕ್ಕೆ ಎಂ. ಐ. ಜಿ. ವಿಮಾನಗಳನ್ನು ಸರಬರಾಜು ಮಾಡುವುದಾಗಿ ಒಪ್ಪಿಕೊಂಡಿರುವ ರಷ್ಯವು ಒಪ್ಪಿಕೊಂಡಿರುವ ಅವಧಿಯಲ್ಲೇ ತನ್ನ ಒಪ್ಪಂದವನ್ನು ನಿರ್ವಹಿಸುವುದೆಂದು ಭಾರತಕ್ಕೆ ತಿಳಿಸಿದೆ.ಪಾರ‌್ಲಿಮೆಂಟಿನ ವಿದೇಶಾಂಗ ವ್ಯವಹಾರ ಖಾತೆಯ ಅನೌಪಚಾರಿಕ ಸಲಹಾ ಸಮಿತಿಯ ಸಭೆಯಲ್ಲಿ ಇಂದು ಸಂಜೆ ಕೆಲವು ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ನೆಹರು ಇದನ್ನು ತಿಳಿಸಿದರೆಂದು ಗೊತ್ತಾಗಿದೆ.ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ನೇಪಾಳದೊಡನೆ ಭಾರತದ ಸಂಪರ್ಕ, ಭಾರತದ ಧೋರಣೆ ಬಗ್ಗೆ ವಿದೇಶಗಳಲ್ಲಿ ಪ್ರಚಾರ ಮತ್ತು ಸದ್ಯದ ಗಡಿ ಪರಿಸ್ಥಿತಿ ಪ್ರಶ್ನೆಗಳನ್ನು ಚರ್ಚಿಸಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.