ಶನಿವಾರ, ಜೂನ್ 19, 2021
28 °C

ಭಾನುವಾರ, 11-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ಸಂಪುಟದ ಸ್ವರೂಪ ಸಂಖ್ಯೆ ಬಗ್ಗೆ ದೆಹಲಿಯಲ್ಲಿ ಚರ್ಚೆ

ಬೆಂಗಳೂರು, ಮಾ. 10 - ರಾಜ್ಯದ ನೂತನ ಮಂತ್ರಿಮಂಡಲದ ಸ್ವರೂಪ ಹಾಗೂ ಸದಸ್ಯರ ಸಂಖ್ಯೆ ಕುರಿತು ಹೈಕಮಾಂಡಿನೊಡನೆ ಚರ್ಚೆ ನಡೆಸಲು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡಿದರು.



ಇಂದು ನಗರ ಬಿಡುವ ಹೊತ್ತಿಗೆ ಸ್ನೇಹಿತರೊಡನೆ ಮಾತುಕತೆಯನ್ನು ಮುಗಿಸಲು ಸಾಧ್ಯವಾಗದಿದ್ದ ಮುಖ್ಯಮಂತ್ರಿಗಳು ಸೋಮವಾರ ನಗರಕ್ಕೆ ಆಗಮಿಸಿ ಅಂದು ಸಮಾಲೋಚನೆಯನ್ನು ಮುಂದುವರಿಸುವ ಕಾರಣ ಹಿಂದೆ ನಿರೀಕ್ಷಿಸಿದ್ದಂತೆ ಅಂದು ಮಂತ್ರಿಮಂಡಲದ ಪ್ರಕಟಣೆಯಾಗುವುದಿಲ್ಲ. ಮಾರ್ಚ್ 13 ರಂದು ಮುಖ್ಯಮಂತ್ರಿಗಳು ಮಂತ್ರಿಮಂಡಲವನ್ನು ಪ್ರಕಟಿಸುವ ನಿರೀಕ್ಷೆಯಿದೆ.



ಮದರಾಸ್ ಸಂಪುಟದ ಸಂಖ್ಯಾಬಲ ಕೇವಲ 8

ನವದೆಹಲಿ, ಮಾ. 10 - ಮಾರ್ಚ್ 15 ಇಲ್ಲವೆ 16 ರಂದು ತಮ್ಮ ಸಚಿವ ಸಂಪುಟವನ್ನು ಪ್ರಕಟಿಸುವುದಾಗಿ ಮದರಾಸ್ ಶಾಸನ ಸಭಾ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಕಾಮರಾಜ್ ನಾಡಾರ್‌ರವರು ನಿನ್ನೆ ಇಲ್ಲಿ ತಿಳಿಸಿದರು.



ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಸಭೆ ಸಂಬಂಧದಲ್ಲಿ ಈಗ ಇಲ್ಲಿರುವ ಅವರು, ಮದರಾಸ್ ಸಂಪುಟವು ರಾಜ್ಯಗಳ ಸಚಿವ ಸಂಪುಟಗಳಲ್ಲೇ ಅತ್ಯಂತ ಕಡಿಮೆ ಸಂಖ್ಯೆ ಸದಸ್ಯರಿರುವ ಸಂಪುಟವಾಗಬಹುದೆಂದೂ, ತಾವೂ ಸೇರಿ 8 ಮಂದಿ ಸಚಿವರಿರುವರೆಂದೂ ಉಪಮಂತ್ರಿಗಳಿರುವುದಿಲ್ಲವೆಂದೂ ವರದಿಗಾರರಿಗೆ ತಿಳಿಸಿದರು.



`ವಿದ್ಯುಚ್ಛಕ್ತಿ ಅಭಾವ ಕೈಗಾರಿಕೆ ಬೆಳವಣಿಗೆಗೆ ಅಡ್ಡಿ~


 ಬೆಂಗಳೂರು, ಮಾ. 10 - ಮೈಸೂರು ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಕೈಗಾರಿಕೆಗಳು ಸಾಕಷ್ಟು ಬೆಳೆದಿಲ್ಲವೆಂಬ ಆಕ್ಷೇಪಣೆಯನ್ನು ಇಂದು ಇಲ್ಲಿ ನಿರಾಕರಿಸಿದ ಕೇಂದ್ರದ ಕೈಗಾರಿಕಾ ಸಚಿವ ಶ್ರೀ ಕೆ. ಸಿ. ರೆಡ್ಡಿಯವರು ಈಗಾಗಲೇ ರಾಜ್ಯದಲ್ಲಿ ಆರಂಭಿಸಲಾಗಿರುವ ಮತ್ತು ಬದಲಾಯಿಸಲಾಗಿರುವ ಕೈಗಾರಿಕೆಗಳ ಜೊತೆಗೂ ಇನ್ನಷ್ಟು ಕೈಗಾರಿಕೆಯನ್ನು ಸ್ಥಾಪಿಸಲು ಸಾಧ್ಯವಾಗದಿರುವುದಕ್ಕೆ ವಿದ್ಯುಚ್ಛಕ್ತಿ ಅಭಾವ ಕಾರಣವೆಂದರು.



1952ರಿಂದೀಚೆಗೆ ಮೈಸೂರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಲೈಸನ್ಸ್ ನೀಡಿರುವುದನ್ನು ಪ್ರಸ್ತಾಪಿಸಿದ ಶ್ರೀ ರೆಡ್ಡಿಯವರು ಅನೇಕ ಕೈಗಾರಿಕೆಗಳಿಗೆ ಲೈಸನ್ಸ್ ನೀಡಿದ್ದರೂ ಆ  ಬಗ್ಗೆ ಯಾವ ಪ್ರಗತಿಯೂ ಆಗಿಲ್ಲವೆಂದು ವಿಷಾದಿಸಿದರು.



ಟಿಬೆಟ್ ಕುರಿತ ಭಾರತ - ಚೀಣ ಒಪ್ಪಂದ

ನವದೆಹಲಿ, ಮಾ. 10 - ಟಿಬೆಟ್ ಬಗ್ಗೆ ಈ ವರ್ಷದ ಜೂನ್ ತಿಂಗಳಿಗೆ ಅಂತ್ಯವಾಗಲಿರುವ ಭಾರತ - ಚೀಣ ಒಪ್ಪಂದವನ್ನು ನವೀಕರಿಸಿಕೊಳ್ಳುವ ಬಗ್ಗೆ ಚೀಣಿ ಸರ್ಕಾರದಿಂದ ಭಾರತ ಸರ್ಕಾರಕ್ಕೆ ಪತ್ರವೊಂದು ಬಂದಿದೆಯೆಂದು ತಿಳಿದು ಬಂದಿದೆ.



ಭಾರತದಲ್ಲಿ ಚುನಾವಣೆಗಳು ಮುಕ್ತಾಯಗೊಂಡಿರುವ ಕಾರಣ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಲು ಉಭಯ ರಾಷ್ಟ್ರಗಳು ಸಂಧಾನ ನಡೆಸಬಹುದೆಂದು ಚೀಣವು ತನ್ನ ಇತ್ತೀಚಿನ ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.