ಶುಕ್ರವಾರ, ನವೆಂಬರ್ 22, 2019
26 °C

ಭಾನುವಾರ, 14-4-1963

Published:
Updated:

ಲೋಕಸಭೆಯಿಂದ ಮೂವರು ಸದಸ್ಯರ `ಸಸ್ಪೆನ್ಷನ್'

ನವದೆಹಲಿ, ಏ. 13 - ಸೋಷಲಿಸ್ಟ್ ಸದಸ್ಯ ಶ್ರೀ ಮಣಿರಾಮ್ ಬಾಗ್ರಿ, ಪಕ್ಷೇತರ ಸದಸ್ಯ ಸ್ವಾಮಿ ರಾಮೇಶ್ವರಾನಂದ ಮತ್ತು ಜನಸಂಘದ ಸದಸ್ಯ ಹುಕುಂ ಚಂದ್ ಕಚವೈಯ ಅವರನ್ನು ಇಂದು ಬಲವಂತವಾಗಿ ಲೋಕ ಸಭೆಯಿಂದ ಹೊರಕಳುಹಿಸಲಾಯಿತು.1965ರ ನಂತರವೂ ಇಂಗ್ಲೀಷನ್ನು ಅಧಿಕೃತ ಉದ್ದೇಶಗಳಿಗಾಗಿ ಮುಂದುವರಿಸುವ ಬಗ್ಗೆ ಮಸೂದೆಯೊಂದನ್ನು ಕೇಂದ್ರ ಗೃಹ ಮಂತ್ರಿ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಸಭೆಯಲ್ಲಿ ಮಂಡಿಸಲಿದ್ದಾಗ ಸಭೆಯ ಕಾರ್ಯ ಕಲಾಪಗಳಿಗೆ ಪದೇ ಪದೇ ಅಡ್ಡಿ ಮಾಡಿದರೆಂಬ ಹಾಗೂ ಗೊಂದಲ ಉಂಟು ಮಾಡಿದರೆಂಬ ಕಾರಣಕ್ಕಾಗಿ ಸಭೆಯು ಈ ಕ್ರಮ ಕೈಗೊಂಡಿತು.ಶ್ರೀ ಬಾಗಿ ಅವರನ್ನು ಒಂದು ವಾರಕಾಲ ಹಾಗೂ ಸ್ವಾಮಿ ರಾಮೇಶ್ವರನಂದ ಮತ್ತು ಶ್ರೀ ಹುಕುಂಚಂದ್ ಕಚವೈಯ ಅವರನ್ನು ಅಧಿವೇಶನದ ಉಳಿದ ಅವಧಿಗೆ ಸಸ್ಪೆಂಡ್ ಮಾಡಲಾಯಿತು.ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮೇ 6 ರಿಂದ ಪ್ರಾರಂಭ?

ಬೆಂಗಳೂರು, ಏ. 13 - ಎಸ್.ಎಸ್.ಎಲ್.ಸಿ. ಫೈನಲ್ ಪರೀಕ್ಷೆಗಳು ಮೇ ಆರನೇ ತಾರೀಕಿನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.ಪರೀಕ್ಷೆಯ ದಿನಗಳ ಬಗ್ಗೆ ಏಪ್ರಿಲ್ 23ರ ನಂತರ ಆಖೈರು ತೀರ್ಮಾನಕ್ಕೆ ಬರಲಾಗುವುದೆಂದು ತಿಳಿದು ಬಂದಿದೆ.ಕಾಲೇಜು ಶಿಕ್ಷಣಾರ್ಥಿಗಳಾದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಫಲಿತಾಂಶವನ್ನು ಆದಷ್ಟು ಬೇಗನೆ ಹೊರಗೆಡಹಲು ಪರೀಕ್ಷಾಧಿಕಾರಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದೆಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)