ಮಂಗಳವಾರ, ಮೇ 24, 2022
31 °C

ಭಾನುವಾರ, 17-6-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 17-6-1962

ಭಾನುವಾರ, 17-6-1962

ವಿಶೇಷ ರೀತಿಯ ಉಕ್ಕಿನ ತಯಾರಿಕೆಗೆ ಕೇಂದ್ರದ ನೆರವು

ಭದ್ರಾವತಿ, ಜೂನ್ 16 -
ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ಸಾಮಾನ್ಯ ಉಕ್ಕನ್ನು ತಯಾರಿಸುವುದರ ಬದಲು ಕೈಗಾರಿಕೆಗಳಿಗೆ ಅಗತ್ಯವಾದ ವಿಶೇಷ ರೀತಿಯ ಉಕ್ಕನ್ನು ತಯಾರಿಸಬೇಕೆಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ಇಂದು ಇಲ್ಲಿ ಸಲಹೆ ಮಾಡಿದಾಗ ಮೈಸೂರು ಸಕ್ಕರೆ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ವರ್ಗಕ್ಕೆ ಆಹ್ಲಾದಕರ ಆಶ್ಚರ್ಯ ಉಂಟಾಯಿತು.ಅದಕ್ಕೆ ಅಗತ್ಯವಾದ ಆರ್ಥಿಕ ನೆರವಿನ ಭರವಸೆಯನ್ನು ಅವರು ನೀಡಿದಾಗ ಸಭೆ ಭಾರಿ ಕರತಾಡನಗಳ ಮೂಲಕ ಸ್ವಾಗತಿಸಿತು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಅಂಗವಾಗಿ ಹೊಸದಾಗಿ 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಫೆರೋ ಸಿಲಿಕಾನ್ ಯಂತ್ರವನ್ನು ಶ್ರೀ ಸಿ. ಸುಬ್ರಹ್ಮಣ್ಯಂ ಅವರು ಇಂದು ಉದ್ಘಾಟಿಸಿದರು.ಎ.ಐ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ಆಗಿ ಶ್ರೀ ಚಂದ್ರಿಕಿ

ನವದೆಹಲಿ, ಜೂನ್ 16
- ಶ್ರೀಗಳಾದ ಕೆ. ಕೆ. ಷಾ ಮತ್ತು ಜಗನ್ನಾಥ್‌ರಾವ್ ಚಂದ್ರಿಕಿಯವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿಯೂ, ಶ್ರೀ ಎಸ್. ಕೆ. ಪಾಟೀಲರು ಖಜಾಂಚಿಯಾಗಿಯೂ ಇರುವರೆಂದು ಎ.ಐ.ಸಿ.ಸಿ. ಇಂದು ಪ್ರಕಟಿಸಿದೆ.ಮೆಡಿಕಲ್ ಶಾಲೆಗಳ ಪುನರಾರಂಭಕ್ಕೆ ವಿರೋಧ

ಬೆಂಗಳೂರು, ಜೂನ್ 16 -
ಮೆಡಿಕಲ್ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಮೈಸೂರು ಮೆಡಿಕಲ್ ಅಸೋಸಿಯೇಷನ್ ಇಂದು ತೀವ್ರವಾದ ಪ್ರತಿಭಟನೆ ವ್ಯಕ್ತಪಡಿಸಿತು.

ಸಂಜೆ ಅಸೋಸಿಯೇಷನ್ ಭವನದಲ್ಲಿ ಏರ್ಪಟ್ಟಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವೈದ್ಯರುಗಳು ಮೆಡಿಕಲ್ ಶಾಲೆಗಳು ಪ್ರಾರಂಭವಾಗಬೇಕೆಂಬ ಒಂದು ವರ್ಗದವರ ವಾದಗಳು ಆಧಾರರಹಿತವೆಂದು ಅಭಿಪ್ರಾಯಪಟ್ಟರು.ಶರಾವತಿ ಉಕ್ಕು ಪೂರೈಕೆಗೆ ಪ್ರಥಮ ಪ್ರಾಶಸ್ತ್ಯ

ಬೆಂಗಳೂರು, ಜೂನ್ 16 -
ಶರಾವತಿ ಯೋಜನೆಗೆ ಅಗತ್ಯವಾದ ಉಕ್ಕನ್ನು ಪೂರೈಸಲು ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುವ ಭರವಸೆ ಕೊಟ್ಟಿದೆಯೆಂದು ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು. ಪೆನ್‌ಸ್ಟಾಕ್ ಪೈಪುಗಳು, ವಿದ್ಯುತ್ ಸಾಗಾಣಿಕೆಗೆ ಬೇಕಾದ ಉಕ್ಕಿನ ಕಂಬಗಳು ಮೊದಲಾದವನ್ನು ತಯಾರಿಸಲು ವಿಶೇಷ ಮಾದರಿಯ 3234.308 ಟನ್ ಉಕ್ಕು ಬೇಕಾಗುವುದೆಂದೂ, ಅದನ್ನೊದಗಿಸಲು ಕೇಂದ್ರ ಸರ್ಕಾರ ಪೂರ್ಣ ಸಹಕಾರ ಮತ್ತು ಸಹಾಯ ನೀಡುವ ಆಶ್ವಾಸನೆ ಇತ್ತಿದೆಯೆಂದೂ ತಿಳಿಸಿದರು.ಬಾಣಸಂದ್ರ - ಮಂಗಳೂರು ರಸ್ತೆ ಅಭಿವೃದ್ಧಿ

ಬೆಂಗಳೂರು
, ಜೂನ್ 16 - ಆಮದು ಸಾಗಾಣಿಕಾ ಹೆದ್ದಾರಿಗಳ ರಚನೆಯಲ್ಲಿ ರಾಜ್ಯ ಸರ್ಕಾರದ ನೀತಿಯನ್ನು ಕೇಂದ್ರ ಸರ್ಕಾರ ತತ್ವಶಃ ಒಪ್ಪಿ ಬಾಣಸಂದ್ರ - ಹಾಸನ ಮಂಗಳೂರು ರಸ್ತೆ 22 ಅಡಿ ಅಗಲದ ರಸ್ತೆಯಾಗಿ ನಿರ್ಮಾಣ ಮಾಡಲು ಅನುಮತಿ ನೀಡಿದೆಯೆಂದು ಲೋಕೋಪಯೋಗಿ ಮಂತ್ರಿ ಶ್ರೀ ವೀರೇಂದ್ರಪಾಟೀಲರು ಇಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.ಪಾಕಿಸ್ತಾನ್ ಸರ್ಕಾರಕ್ಕೆ ಭಾರತದ ಪ್ರತಿಭಟನೆ

ನವದೆಹಲಿ,
ಜೂನ್ 16 - ಪೂರ್ವ ಪಾಕಿಸ್ತಾನದ ರಾಜ್‌ಷಾಹಿ ಜಿಲ್ಲೆಯಲ್ಲಿ ಸಂತಾಲ ಬುಡಕಟ್ಟಿನ ಜನರ ಮೇಲೆ ಗುಂಡು ಹಾರಿಸಿದುದರ ವಿರುದ್ಧ ಪಾಕಿಸ್ತಾನಕ್ಕೆ ಭಾರತವು ಉಗ್ರ ಪ್ರತಿಭಟನೆಯನ್ನು ಸಲ್ಲಿಸಿದೆ. ಇಲ್ಲಿಗೆ ತಲುಪಿರುವ ವರದಿಗಳ ಪ್ರಕಾರ ಪಾಕಿಸ್ತಾನಿ ಸೈನಿಕರು ಹಾರಿಸಿದ ಗುಂಡಿಗೆ ನಾಲ್ಕು ಮಂದಿ ಸಂತಾಲರು ಬಲಿಯಾದರು. ಇತರ ಆರು ಮಂದಿಗೆ ತೀವ್ರ ಗಾಯಗಳಾದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.