ಭಾನುವಾರ, 20-5-1962

7

ಭಾನುವಾರ, 20-5-1962

Published:
Updated:

ಕಾಶ್ಮೀರ ಚರ‌್ಚೆ ಜೂನ್ ಅಂತ್ಯದಲ್ಲಿ ನಡೆಯಲೆಂದು ಭಾರತದ ಸಲಹೆ

ವಿಶ್ವರಾಷ್ಟ್ರಸಂಸ್ಥೆ, (ನ್ಯೂಯಾರ್ಕ್‌) ಮೇ 19 - ಕಾಶ್ಮೀರದ ಪ್ರಶ್ನೆ ಕುರಿತ ಭದ್ರತಾ ಸಮಿತಿ ಚರ್ಚೆಯನ್ನು ಜೂನ್ ಅಂತ್ಯದವರೆಗೆ ಮುಂದಕ್ಕೆ ಹಾಕಬೇಕೆಂದು  ಭಾರತವು ಅಧಿಕೃತವಾಗಿ ಕೋರಿದೆಯೆಂದು ಭಾರತ ನಿಯೋಗದ ವಲಯಗಳು ತಿಳಿಸಿವೆ.ಕಾಶ್ಮೀರ ಪ್ರಶ್ನೆಯನ್ನು ಮೇ 28 ರಂದು ಚರ್ಚೆಗೆ ತೆಗೆದು ಕೊಳ್ಳಬೇಕೆಂದು ಭದ್ರತಾ ಸಮಿತಿ ನಿರ್ಧರಿಸಿತ್ತು. ಭಾರತದ ನಿಯೋಗಕ್ಕೆ ಅನಾನುಕೂಲವೆಂದು ಮೇ 17 ರಂದು ನಡೆಯಬೇಕಿದ್ದ ಚರ್ಚೆ ಮುಂದೂಡಲಾಗಿತ್ತು.ಭಾರತದ ಖಾಯಂ ಪ್ರತಿನಿಧಿ ಶ್ರೀ ಸಿ. ಎಸ್. ಝಾರವರು ಭದ್ರತಾ ಸಮಿತಿಯ ಅಧ್ಯಕ್ಷರಾದ ರಾಷ್ಟ್ರೀಯ ಚೀಣದ ಡಾ. ಟಿಂಗ್ಫುರವರಿಗೆ ಒಂದು ಕಾಗದ ಪತ್ರವೊಂದನ್ನು ಬರೆದು ಕಾಶ್ಮೀರ ಪ್ರಶ್ನೆ ಚರ್ಚೆ ಮುಂದಕ್ಕೆ ಹೋಗಬೇಕೆಂಬ ಕೋರಿಕೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.ಕೇಂದ್ರ ಸಂಪುಟಕ್ಕೆ ಸದ್ಯದಲ್ಲೇ ಟಿ. ಟಿ. ಕೆ.


ನವದೆಹಲಿ, ಮೇ 19 - ಹಿಂದೆ ಕೇಂದ್ರ ಸರ್ಕಾರದ ಅರ್ಥಸಚಿವರಾಗಿದ್ದ ಶ್ರೀ ಟಿ. ಟಿ. ಕೃಷ್ಣಮಾಚಾರಿಯವರು ಸದ್ಯದಲ್ಲೇ ಕೇಂದ್ರ ಸಂಪುಟ ಸೇರುವ ಸಂಭವವಿದೆ ಎಂದು ತಿಳಿದುಬಂದಿದೆ.ಕೇಂದ್ರ ಸಂಪುಟ ಸೇರಲು ಶ್ರೀ ಕೃಷ್ಣಮಾಚಾರಿಯವರಿಗೆ ಪ್ರಧಾನಿ ನೆಹರೂ ಕಳೆದ ತಿಂಗಳೇ ಆಹ್ವಾನಿಸಿದ್ದರು. ಆದರೆ ಇದುವರೆಗೆ ತಿಳಿಸದ ಕಾರಣಗಳಿಗಾಗಿ ಅವರು ಈ ಆಹ್ವಾನ ಅಂಗೀಕರಿಸಲಿಲ್ಲ.ಅನಿರೀಕ್ಷಿತ ಪ್ರತಿಬಂಧಕಗಳೇನೂ ತಲೆದೋರದಿದ್ದಲ್ಲಿ ನಾಲ್ಕು ವರುಷಗಳ ಹಿಂದೆ ರಾಜಿನಾಮೆ ನೀಡಿದ್ದ ಶ್ರೀ ಕೃಷ್ಣಮಾಚಾರಿಯವರು ಇನ್ನೆರಡು ವಾರಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವರು.

ಇದು ಬೆಂಗಳೂರು !

ಬೆಂಗಳೂರು, ಮೇ 19 - ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಪಾದಯಾತ್ರೆ ನಡೆಸಿದ ಆಚಾರ್ಯ ವಿನೋಬಾ ಭಾವೆಯವರು ಬೆಂಗಳೂರಿನಿಂದ ಹೊರಗೆ ತಂಗಿದ್ದಾಗಲೇ ಬೆಂಗಳೂರಿಗೆ ಸಮೀಪ ತಾವು ಬಂದಿದ್ದರೆಂಬುದನ್ನು ತಮಗಿತ್ತ ಹಾಲನ್ನು ನೋಡಿಯೇ `ಕಂಡುಕೊಂಡ~ ಸಂಗತಿಯನ್ನು ವಿಧಾನ ಪರಿಷತ್ತಿನ ಸದಸ್ಯ ಶ್ರೀ ವಿ. ವೆಂಕಟಪ್ಪನವರು ಇಂದು ಹೊರಗೆಡಹಿದರು.ಚನ್ನಪಟ್ಟಣದ ಬಳಿ ಬೈರಾಪಟ್ಟಣದಲ್ಲಿ ಕ್ಷೀರ ಶೈತ್ಯೀಕರಣ ಕೇಂದ್ರದ ಶಂಕುಸ್ಥಾಪನೆ ಮಾಡಿದಾಗ ಶ್ರೀ ವೆಂಕಟಪ್ಪನವರು ಈ ಸಂಗತಿಯನ್ನು ನೆನಪು ಮಾಡಿಕೊಂಡರು.ಹಾಲನ್ನು ತಂದು ತಮ್ಮ ಮುಂದಿಟ್ಟಾಗ ಭಾವೆಯವರು `ನಾವು ಬೆಂಗಳೂರಿಗೆ ಸಮೀಪದಲ್ಲಿದ್ದೇವೆಯೆ?~ ಎಂದು ಕೇಳಿದರಂತೆ. `ಹೌದು ಆದರೆ ಇದು ನಿಮಗೆ ಹೇಗೆ ಗೊತ್ತಾಯಿತು?~ ಎಂದು ಪ್ರಶ್ನಿಸಿದಾಗ ವಿನೋಬಾರವರು `ಹಾಲನ್ನು ನೋಡಿ, ಇದರಲ್ಲಿ ಹಾಲಿನ ಅಂಶ ಕಡಿಮೆ ಇದೆ. ನೀರಿನ ಅಂಶ ಹೆಚ್ಚಿದೆ~ ಎಂದು ಉತ್ತರಿಸಿದರಂತೆ.

ಜೂನ್ 8ರ ನಂತರ ಕಾಂಗ್ರೆಸ್ ಪಕ್ಷದ ಸಭೆ?

ಬೆಂಗಳೂರು, ಮೇ 19 - ಸದ್ಯದಲ್ಲಿರುವ ಸೂಚನೆಗಳ ರೀತ್ಯ ನೂತನ ನಾಯಕನನ್ನು ಆರಿಸಲಿರುವ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ಸಭೆ ಜೂನ್ 8ರ ನಂತರ ಮಾತ್ರ ಸೇರುವ ಸಾಧ್ಯತೆಯಿದೆ.ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಕೊಡಲು ಹೈಕಮಾಂಡಿನ ಅನುಮತಿ ಕೇಳಿ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಬರೆದಿರುವ ಪತ್ರಕ್ಕೆ ಪಾರ್ಲಿಮೆಂಟರಿ ಬೋರ್ಡಿನಿಂದ ಯಾವ ಅಧಿಕೃತ ಸೂಚನೆಯೂ ಬಂದಿಲ್ಲ. `ದೆಹಲಿಯಿಂದ ನನಗೆ ಯಾವ ಪತ್ರವೂ ಬಂದಿಲ್ಲ~ ಎಂದು ಮುಖ್ಯಮಂತ್ರಿಗಳು ಇಂದು ಸಂಜೆ ವರದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry