ಭಾನುವಾರ, 26-2-1962

7

ಭಾನುವಾರ, 26-2-1962

Published:
Updated:

ಅಸ್ಸಾಂ ಗಿರಿಜನ ನಾಯಕರಿಗೆ 3 ಸ್ಥಾನ; ಕಾಂಗ್ರೆಸ್‌ಗೆ 1

ಷಿಲ್ಲಾಂಗ್,ಫೆ. 25 - ದೇಶದಲ್ಲಿ ನಡೆಯುತ್ತಿರುವ ಮೂರನೆಯ ಸಾರ್ವತ್ರಿಕ ಚುನಾವಣೆಗಳಲ್ಲಿ ಇಂದು ಫಲಿತಾಂಶ ಪ್ರಕಟವಾದ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳು ಅಸ್ಸಾಮಿನ ಗುಡ್ಡಗಾಡು ನಾಯಕರ ಸಮ್ಮೇಳನಕ್ಕೂ ಒಂದು ಸ್ಥಾನವು ಕಾಂಗ್ರೆಸ್ಸಿಗೂ ದೊರಕಿತು.ಈ ಫಲಿತಾಂಶಗಳು 105 ಸದಸ್ಯರ ಅಸ್ಸಾಂ ವಿಧಾನ ಸಭೆಗೆ ಸಂಬಂಧಿಸಿದೆ. ಚುನಾಯಿತರಾದವರು ಶ್ರೀಗಳಾದ ಎನೊಮ್ ಪೋಷ್ನಾ, ವಿಲ್ಸನ್ ರೀಡ್, ಬ್ರಿಂಗ್‌ಟಿನ್ ಬುಹಾರಿ ಲಿಂಗ್ಡೊ (ಈ ಮೂವರೂ ಗುಡ್ಡಗಾಡು ನಾಯಕರ ಸಮ್ಮೇಳನದವರು) ಮತ್ತು ಜೆ. ಬಿ. ಹಾಗ್ಜೊರ್ (ಕಾಂಗ್ರೆಸ್).

 

ಗೋವಾದಿಂದ ಮೈಸೂರು ಪೊಲೀಸು ವಾಪಸ್

ಪಂಜಿಂ, ಫೆ. 25 - ನೆರೆಯ ರಾಜ್ಯಗಳಾದ ಮೈಸೂರು ಮತ್ತು ಮಹಾರಾಷ್ಟ್ರಗಳಿಂದ ಗೋವಾ ಆಡಳಿತಕ್ಕೆ ಕರೆಸಿಕೊಂಡಿರುವ ಬಹು ಮಂದಿ ಪೊಲೀಸ್ ಸಿಬ್ಬಂದಿಯನ್ನು ಮಾರ್ಚಿಯ ಮಧ್ಯಭಾಗದ ಸುಮಾರಿನಲ್ಲಿ ವಾಪಸ್ ಕಳಿಸಲು, ನಿನ್ನೆ ಇಲ್ಲಿ ಸಮಾವೇಶಗೊಂಡಿದ್ದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.ಈಗ ಗೋವಾದಲ್ಲಿ ಮೈಸೂರು ಮತ್ತು ಮಹಾರಾಷ್ಟ್ರಗಳ ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದೆ.

 

ಐದು ರಾಜ್ಯಗಳಲ್ಲಿ ಮತದಾನ ಮುಕ್ತಾಯ

ಮುಂಬೈ, ಫೆ. 25 - ಭಾರತದ ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಮದ್ರಾಸು, ಪಂಜಾಬ್ (ಎರಡು ಕ್ಷೇತ್ರಗಳಲ್ಲಿ ವಿನಾ), ಕಾಶ್ಮೀರದ ಜಮ್ಮು ಪ್ರಾಂತವನ್ನು ಕೇಂದ್ರದ ಆಡಳಿತಕ್ಕೊಳಪಟ್ಟ ದೆಹಲಿ ರಾಜ್ಯಗಳಲ್ಲಿ ಇಂದು ಮತದಾನವು ಮುಕ್ತಾಯವಾಯಿತು.ಇಡೀ ದೇಶದಲ್ಲಿ ನಾಳೆ ಸಂಜೆಯ ಹೊತ್ತಿಗೆ ಮತದಾನವು ಕಾರ್ಯತಃ ಮುಕ್ತಾಯವಾಗಲಿದೆ. ಅಸ್ಸಾಂನ ಉತ್ತರ ಕಾಚಾರ್ ಮತ್ತು ಜೋವಾಯ್ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದು ಮತಗಳ ಎಣಿಕೆ ಆರಂಭವಾಗಬೇಕಾಗಿತ್ತು.ಕೇರಳದಲ್ಲಿ ಇಂದು 18 ಲೋಕ ಸಭಾ ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇ. 65 ರಷ್ಟು ಮತದಾರರು ಮತ ನೀಡಿದರೆಂದು ಅಂದಾಜಾಗಿದೆ. ಕೆಲವೆಡೆಗಳಲ್ಲಿ ನಡೆದ ಸಣ್ಣ ಪುಟ್ಟ ಪ್ರಕರಣಗಳನ್ನು ಬಿಟ್ಟರೆ ಎಲ್ಲ ಕ್ಷೇತ್ರಗಳಲ್ಲಿಯೂ ಮತದಾನ ಶಾಂತವಾಗಿ ನಡೆಯಿತು.

ಶೃಂಗ ಸಭೆ ಸಾಧ್ಯತೆ ಬಗ್ಗೆ ಗಡಸು ನೀತಿ ಬೇಡ

ವಾಷಿಂಗ್ಟನ್, ಫೆ. 25 - ಬರುವ ವಸಂತ ಕಾಲದಲ್ಲಿ ಶೃಂಗ ಸಮ್ಮೇಳನ ಸೇರುವ ಸಾಧ್ಯತೆಯ ಬಗ್ಗೆ ಗಡಸು ನೀತಿ ಹೊಂದಿರಬಾರದೆಂದು ಅಮೆರಿಕದ ಅಧ್ಯಕ್ಷ ಕೆನೆಡಿ ಅವರಿಗೆ ಬ್ರಿಟಿಷ್ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್ಮಿಲನ್ ಅವರು ಒತ್ತಾಯ ಪಡಿಸಿದ್ದಾರೆಂದು ರಾಜತಾಂತ್ರಿಕ ವಲಯಗಳು ಹೇಳಿವೆ.ಮುಂದಿನ ತಿಂಗಳು ಜಿನೀವದಲ್ಲಿ ನಿಶ್ಸಸ್ತ್ರೀಕರಣ ಸಮ್ಮೇಳನವು ಶೃಂಗಮಟ್ಟದಲ್ಲಿ ಸೇರಬೇಕೆಂಬ ಖ್ರುಶ್ಚೋವ್‌ರವರ ಸಲಹೆ ಬಗ್ಗೆ ಮ್ಯಾಕ್ಮಿಲನ್‌ರವರು ಕೆನಡಿ ಅವರ ಜತೆ ಫೋನಿನಲ್ಲಿ ಮಾತನಾಡಿದರೆಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry