ಭಾನುವಾರ, 30-12-1962

7

ಭಾನುವಾರ, 30-12-1962

Published:
Updated:
ಭಾನುವಾರ, 30-12-1962

ಕಟಾಂಗದ ಕೋಲ್ವೇಜಿ ವಿಮಾನ ನೆಲೆ ಮೇಲೆ ವಿಶ್ವಸಂಸ್ಥೆ ದಾಳಿ

ಎಲಿಜಬೆತ್‌ವಿಲ್, ಡಿ. 29 - ವಿಶ್ವರಾಷ್ಟ್ರ ಸಂಸ್ಥೆಯ ಜೆಟ್ ಫೈಟರ್ ವಿಮಾನಗಳು ಕೋಲ್ವೇಜಿಯಲ್ಲಿರುವ ಕಟಾಂಗದ ಅಧ್ಯಕ್ಷ ಮೊಯ್ಸೆ ಷೋಂಬೆಯವರ ಪ್ರಮುಖ ವಿಮಾನ ನೆಲೆಯ ಮೇಲೆ ಇಂದು ಬೆಳಗಿನ ಜಾವ ದಾಳಿ ಮಾಡಿ ಅಲ್ಲಿ ನಿಂತಿದ್ದ ಮೂರು ವಿಮಾನಗಳನ್ನು ನಾಶ ಪಡಿಸಿದವು. ದಾಳಿಯ ಪರಿಣಾಮವಾಗಿ ಆ ನೆಲೆಯಲ್ಲಿದ್ದ ಸಾಮಗ್ರಿಗಳೂ, ಯಂತ್ರೋಪಕರಣಗಳೂ ಉರಿದು ಹೋದುವು.ಈ ಸುದ್ದಿಯನ್ನು ಇಲ್ಲಿ ಪ್ರಕಟಿಸಿದ ವಿಶ್ವರಾಷ್ಟ್ರಸಂಸ್ಥೆಯ ವಕ್ತಾರರೊಬ್ಬರು ವಿಶ್ವರಾಷ್ಟ್ರ ಸಂಸ್ಥೆಯ ವಿಮಾನಗಳು ಹಾರಾಡುತ್ತಿದ್ದ ಕಟಾಂಗದ ವಿಮಾನವೊಂದರ ಮೇಲೆ ದಾಳಿ ಮಾಡಿದುವೆಂದೂ ಅದು ನಾಶವಾಯಿತೇ ಎಂಬುದು ತಿಳಿದಿಲ್ಲವೆಂದೂ ತಿಳಿಸಿದರು.ಸ್ನೇಹಪರ ವಾತಾವರಣ ಕಲ್ಪಿಸಲು ನೆರವಾಗಲು ಪತ್ರಿಕೆಗಳು, ನಾಯಕರಿಗೆ ಜಂಟೀ ಮನವಿ

ರಾವಲ್ಪಿಂಡಿ, ಡಿ. 29 - `ಕಾಶ್ಮೀರ ಮತ್ತು ಇತರೆ ಸಂಬಂಧಿಸಿದ ವಿಷಯಗಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಕ್ಕಾಗಿ ಸ್ನೇಹಪರ ವಾತಾವರಣ ಕಲ್ಪಿಸಲು ನೆರವಾಗುವಂತೆ' ಭಾರತ ಮತ್ತು ಪಾಕಿಸ್ತಾನದ ನಾಯಕರು, ಅಧಿಕಾರಿಗಳು, ಪತ್ರಿಕೆ, ರೇಡಿಯೊ ಮತ್ತು ಇತರ ಪ್ರಚಾರ ಮಾಧ್ಯಮಗಳಿಗೆ ರಾವಲ್ಪಿಂಡಿ ಸಮ್ಮೇಳನವು ಮನವಿ ಮಾಡಿಕೊಂಡಿದೆ.ಭಾರತ ನಿಯೋಗದ ನಾಯಕ ಸ್ವರಣ್ ಸಿಂಗ್ ಮತ್ತು ಪಾಕ್ ನಿಯೋಗದ ನಾಯಕ ಭುಟ್ಟೋರವರು, ಸಚಿವ ಮಟ್ಟದ ಸಭೆ ಇಂದು ಅಂತ್ಯಗೊಂಡ ಬಳಿಕ ಜಂಟೀ ಮನವಿಯೊಂದನ್ನು ಹೊರಡಿಸಿದರು.

`ಕೊಂಕಣಿ ಸ್ವತಂತ್ರ ಭಾಷೆಯೇ ಅಲ್ಲ; ಗೋವಾ ಮಹಾರಾಷ್ಟ್ರದ ಅವಿಭಾಜ್ಯ ಭಾಗವಂತೆ!'

ಪಾಂಜಿಂ, ಡಿ. 29 - ಗೋವಾ ರಾಜ್ಯವು `ಮಹಾರಾಷ್ಟ್ರದ ಅವಿಭಾಜ್ಯ ಭಾಗವೆಂದು' ಖ್ಯಾತ ಮರಾಠಿ ಲೇಖಕ ತರ್ಕತೀರ್ಥ ಲಕ್ಷ್ಮಣ್ ಶಾಸ್ತ್ರಿ ಜೋಷಿರವರು ಇಲ್ಲಿ ಇಂದು ಘೋಷಿಸಿ ಅದು ಮಹಾರಾಷ್ಟ್ರದಲ್ಲಿ ಸೇರುವುದಕ್ಕಾಗಿ ಕಾರ್ಯೋನ್ಮುಖವಾಗುವಂತೆ ಗೋವನ್ನರಿಗೆ ಕರೆ ನೀಡಿದರು.ಇಲ್ಲಿ ಇಂದು ಆರಂಭವಾದ 10ನೆಯ ಗೋಮಾಂತಕ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತ ಕೊಂಕಣಿ ಮಾತನಾಡುವವರೂ ಶೇ. 20ಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಲ್ಲಿದ್ದಾರೆಂದೂ, ಕೊಂಕಣದ ಭಾಷೆಯ ಸಂಸ್ಕೃತಿ ಮಹಾರಾಷ್ಟ್ರದ ಭಾಗವೆಂದು ನುಡಿದರು.

ಕಾವೇರಿ ಕಣಿವೆ ಪ್ರದೇಶ ಅಭಿವೃದ್ಧಿ: ಕೇಂದ್ರದಿಂದ `ನದಿ ಮಂಡಳಿ' ರಚನೆ

ನವದೆಹಲಿ, ಡಿ. 29 - ಕಾವೇರಿ ನದಿ, ಉಪನದಿ ಹಾಗೂ ಕೂಡು ಹೊಳೆಗಳಿಗೆ ಸಂಬಂಧಿಸಿದಂತೆ ಯಾವ ಹೊಸ ಯೋಜನೆಯನ್ನೂ ರಚಿಸಕೂಡದೆಂದು ಕೇಂದ್ರ ಸರ್ಕಾರ ಮೈಸೂರು, ಮದ್ರಾಸ್ ಸರ್ಕಾರಗಳಿಗೆ ತಿಳಿಸಿದೆ. ಈಗ ಕೈಗೊಂಡಿರುವ ಯೋಜನೆ ಕಾರ್ಯಗಳನ್ನು ನಿಲ್ಲಿಸಬೇಕೆಂದೂ ಕೇಂದ್ರ ಸರ್ಕಾರ ತಿಳಿಸಿದೆ.ಕಾವೇರಿ ಜಲಾನಯನ ಭೂಮಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ನದಿ ಮಂಡಳಿಯೊಂದನ್ನು ರಚಿಸಬೇಕೆಂದು ನಿರ್ಧರಿಸಿದೆ.

ಬೇಸಿಗೆಯಲ್ಲಿ ನಗರದ ನೀರಿನ ಅಭಾವ ನಿವಾರಣೆಗೆ ಕ್ರಮ

ಬೆಂಗಳೂರು, ಡಿ. 29 - ಬೇಸಿಗೆ ಕಾಲದಲ್ಲಿ ನಗರದಲ್ಲಿ ತಲೆದೋರಿರುವ ನೀರಿನ ಅಭಾವವನ್ನು ನಿವಾರಿಸಲು, ನಗರದ ಪ್ರತಿ ಡಿವಿಜನ್ನಿನಲ್ಲಿಯೂ, ಒಂದು ಕೊಳವೆ ಬಾವಿ ನಿರ್ಮಾಣ ಮಾಡಬೇಕೆಂದು ನಗರ ಕಾರ್ಪೊರೇಷನ್ ಸಭೆ ಇಂದು ನಿರ್ಧರಿಸಿದೆ.

ಕಟಾಂಗ್ ಬ್ಯಾಂಕ್ ವಿಶ್ವ ಸೇನೆ ವಶ

ವಿಶ್ವರಾಷ್ಟ್ರಸಂಸ್ಥೆ, ಡಿ. 29 - ಎಲಿಜಬೆತ್ ವಿಲ್‌ನಲ್ಲಿರುವ ನ್ಯಾಷನಲ್ ಬ್ಯಾಂಕ್ ಆಫ್ ಕಟಾಂಗ ಆವರಣವನ್ನು ವಿಶ್ವ ಸೇನೆಗಳು ವಶಪಡಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry