ಶುಕ್ರವಾರ, ಜೂನ್ 18, 2021
27 °C

ಭಾನುವಾರ, 4-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 4-3-1962

ವಾತಾವರಣದಲ್ಲಿ ಅಮೆರಿಕದ ನ್ಯೂಕ್ಲಿಯರ್ ಸ್ಫೋಟ

ವಾಷಿಂಗ್ಟನ್, ಮಾ. 3- ರಷ್ಯವು ಹತೋಟಿಗೊಳಪಟ್ಟ ಅಣುಸ್ಫೋಟ ನಿಷೇಧದ ಬಗ್ಗೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ಪರಿಣಾಮಕಾರಿ ಕೌಲಿಗೆ ಸಹಿ ಹಾಕದಿದ್ದಲ್ಲಿ ಅಮೆರಿಕವು ವಾತಾವರಣದಲ್ಲಿ ಅಣುಸ್ಫೋಟವನ್ನು ಪುನರಾರಂಭಿಸುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿಯವರು ನಿನ್ನೆ ರಾತ್ರಿ ಇಲ್ಲಿ ಘೋಷಿಸಿದರು.ರಾಷ್ಟ್ರವ್ಯಾಪಿ ಟೆಲಿವಿಷನ್ ಪ್ರಸಾರ ಭಾಷಣ ಮಾಡುತ್ತ ಅವರು ಸದ್ಯದಲ್ಲೇ ನಡೆಯಲಿರುವ ನಿಶ್ಶಸ್ತ್ರೀಕರಣ ಮಾತುಕತೆಯಲ್ಲಿ ರಷ್ಯವು ಅಂಥ ಒಂದು ಕೌಲಿಗೆ ಸಮ್ಮತಿಸಿದಲ್ಲಿ ಆ ಒಂದು ಹೆಜ್ಜೆ ಶಾಂತಿ ಸ್ಥಾಪನೆಯತ್ತ ಚಿರಸ್ಮರಣೀಯ ಹೆಜ್ಜೆಯಾಗುವುದೆಂದೂ ಆಗ ಅಂತಿಮ ಕೌಲಿಗೆ ಸಹಿ ಹಾಕಲು “ನಾನು ಮತ್ತು ಮ್ಯಾಕ್ಮಿಲನ್ ಅವರು” ಜಿನೀವಾದಲ್ಲಿ ಖ್ರುಶ್ಚೋವ್ ಅವರನ್ನು ಭೇಟಿ ಮಾಡುವುದು ಸೂಕ್ತವೆನಿಸುವುದೆಂದು ತಿಳಿಸಿದರು.

ಆಂಧ್ರ ಮುಖ್ಯಮಂತ್ರಿಯಾಗಿ ಸಂಜೀವರೆಡ್ಡಿ ಆಯ್ಕೆ ಖಚಿತ

ಹೈದರಾಬಾದ್, ಮಾ. 3- ಆಂಧ್ರಪ್ರದೇಶ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸದಿರಲು ಪ್ರಸ್ತುತ ಮುಖ್ಯಮಂತ್ರಿ ಶ್ರಿ ಡಿ. ಸಂಜೀವರೆಡ್ಡಿ ಅವರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನ ಸೂಚನೆಯಂತೆ ಶ್ರಿ ಎನ್. ಸಂಜೀವರೆಡ್ಡಿ ಅವರನ್ನು ಆಂಧ್ರಪ್ರದೇಶ ವಿಧಾನಸಭೆ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುವುದು ಖಚಿತವೆಂದು ತಿಳಿದುಬಂದಿದೆ.“ಕಾಂಗ್ರೆಸ್ ಹೈಕಮಾಂಡಿನ ಅಭಿಲಾಷೆಗೆ ಅನುಗುಣವಾಗಿ ನಾಯಕತ್ವಕ್ಕೆ ಸ್ಪರ್ಧಿಸದಿರಲು ನಾನು ನಿರ್ಧರಿಸಿದ್ದೇನೆ” ಎಂದು ಇಂದು ದೆಹಲಿಯಿಂದ ಇಲ್ಲಿಗೆ ವಾಪಸಾದ ಅವರು ಪತ್ರಕರ್ತರಿಗೆ ತಿಳಿಸಿದರು.ನೆಹರೂ, ಶಾಸ್ತ್ರಿ, ನೀಲಂ ಜೊತೆ ನಿಜಲಿಂಗಪ್ಪ ಚರ್ಚೆ

ನವದೆಹಲಿ, ಮಾ. 3- ದೆಹಲಿಗೆ ಆಗಮಿಸಿದ ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರಿ ಎಸ್. ನಿಜಲಿಂಗಪ್ಪನವರು, ಪಂಡಿತ್ ನೆಹರೂ, ಶ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ, ಕಾಂಗ್ರೆಸ್ ಅಧ್ಯಕ್ಷ ಶ್ರಿ ಸಂಜೀವರೆಡ್ಡಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಚುನಾವಣಾ ಫಲಿತಾಂಶಗಳು ಹಾಗೂ ಶಾಸನಸಭಾ ಕಾಂಗ್ರೆಸ್ ಪಕ್ಷದ ನೂತನ ನಾಯಕರ ಆಯ್ಕೆ ವಿಚಾರ ಚರ್ಚಿಸಿದರು.ಚುನಾವಣೆಯಲ್ಲಿ ಸೋಲನನುಭವಿಸಿದ್ದರೂ, ನಾಯಕರ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಅವಕಾಶ ಕೊಟ್ಟರೆ, ನೂತನ ಶಾಸನಸಭೆ ಕಾಂಗ್ರೆಸ್ ಪಕ್ಷದಲ್ಲಿ ತಾವು ಬಹುಮತ ಪಡೆಯುವುದಾಗಿ ಶ್ರಿ ನಿಜಲಿಂಗಪ್ಪನವರು ಅವರುಗಳಿಗೆ ತಿಳಿಸಿದರೆಂದು ವರದಿಯಾಗಿದೆ.

ಚಾಲಕನಿಲ್ಲದೆ ಓಡಿದ ರೈಲ್ವೆ ಇಂಜಿನ್ ನಿಲ್ಲಿಸಿದ ಸಾಹಸಿ

ಬೆಂಗಳೂರು, ಮಾ. 3- ತನ್ನ ಹೆಸರನ್ನೇ ಉಚ್ಚರಿಸಲರಿಯದ ಕಿವುಡ-ಮೂಗ ಬಾಲಕನೊಬ್ಬ ನಗರದ ರೈಲ್ವೆ ನಿಲ್ದಾಣದಲ್ಲಿ ಚಲಿಸದೆ ನಿಂತಿದ್ದ ಇಂಜಿನೊಂದನ್ನು ಏರಿದ, ಹಿಡಿಯೊಂದನ್ನು ಎಳೆದ ಇಂಜಿನ್ನು ಚಲಿಸಲು ಪ್ರಾರಂಭಿಸುತ್ತಲೇ ದಿಗ್ಭ್ರಾಂತನಾಗಿ ನಿಂತ.ನಿನ್ನೆ ಮಧ್ಯಾಹ್ನದ ಸಮಯದಲ್ಲಿ ನಿಲ್ದಾಣದಲ್ಲಿದ್ದ ಯಂತ್ರಕ್ಕೆ ಕಲ್ಲಿದ್ದಲು ತುಂಬುವ ಅನುಭವ ಪಡೆದ ಕೂಲಿ ಮಧುರೆ ಪ್ರಸಂಗದ ಭೀಕರತೆಯನ್ನು ಗ್ರಹಿಸಿ, ತಕ್ಷಣ ಸೈಕಲ್ ಏರಿ ಹೊರಟು, ರಾಜಾಮಿಲ್ ತಿರುವಿನ ಬಳಿ ತೆರಳುತ್ತಿದ್ದ ಇಂಜನ್ನಿನೊಳಕ್ಕೆ ಹಾರಿ, ಇಂಜಿನ್ನನ್ನು ನಿಲ್ಲಿಸಿ, ಊಹಿಸಲು ಸಹಾ ಭೀಕರವೆನಿಸುವ ಅನಾಹುತಗಳನ್ನು ತಪ್ಪಿಸಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.