ಶನಿವಾರ, ಅಕ್ಟೋಬರ್ 19, 2019
28 °C

ಭಾನುವಾರ, 8-1-1962

Published:
Updated:

ಭಾನುವಾರ, 8-1-1962

`ಗೋವಾ ಕ್ರಮದಿಂದ ವಿಶ್ವಸಂಸ್ಥೆಗೆ ತೊಂದರೆಯಿಲ್ಲ~

ಕಲ್ಕತ್ತ, ಜ. 7 - ಗೋವಾದಲ್ಲಿ ಭಾರತ ಕೈಗೊಂಡ ಕಾರ್ಯಾಚರಣೆಯಿಂದ ವಿಶ್ವರಾಷ್ಟ್ರ ಸಂಸ್ಥೆಯ ಅಡಿಪಾಯ ಅಲ್ಲಾಡಬಹುದೆಂಬ ಪಾಶ್ಚಿಮಾತ್ಯ ರಾಜಕಾರಣಿಗಳ ಅಭಿಪ್ರಾಯವನ್ನು ಬರ್ಮಾದ ಪ್ರಧಾನ ಮಂತ್ರಿ ಉ ನುರವರು ಇಂದು ಇಲ್ಲಿ ನಿರಾಕರಿಸಿದರು.ಕಟ್ಮುಂಡುವಿಗೆ ತೆರಳುವ ಮಾರ್ಗದಲ್ಲಿ ಕಲ್ಲತ್ತಾ ಮೂಲಕ ಹಾದುಹೋದ ಬರ್ಮಾ ಪ್ರಧಾನ ಮಂತ್ರಿ ಉ ನುರವರು ಡಂಡಂ ವಿಮಾನ ನಿಲ್ದಾಣದಲ್ಲಿ ಪತ್ರಿಕಾ ಪ್ರತಿನಿಧಿಗಳೊಡನೆ ಮಾತನಾಡುತ್ತಾ, ಭಾರತದ ಗೋವಾ ಕ್ರಮದಿಂದ ವಿಶ್ವರಾಷ್ಟ್ರ ಸಂಸ್ಥೆಯ ಅವಸಾನದ ಆರಂಭ ಎಂಬ ಪಶ್ಚಿಮದ ರಾಜಕಾರಣಿಗಳ ಅಭಿಪ್ರಾಯಕ್ಕೆ ತಮ್ಮ ಒಪ್ಪಿಗೆ ಇದೆಯೆ? ಎಂಬ ಪ್ರಶ್ನೆಗೆ ಉತ್ತರ ಕೊಟ್ಟು ಉ ನು ಹೌದೆನ್ನಲಿಲ್ಲ.

ಉತ್ತರ ಪ್ರದೇಶದಲ್ಲಿ ಚಳಿಯಿಂದ 446 ಸಾವು

ಲಕ್ನೋ, ಜ. 7 - ಚಳಿಯನ್ನು ತಡೆಯಲಾರದೆ ಡಿಸೆಂಬರ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಸತ್ತವರ ಸಂಖ್ಯೆ 446ಕ್ಕೇರಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಕೇಂದ್ರ ಕಚೇರಿಗೆ ಬಂದ ಇತ್ತೀಚಿನ ವರದಿಗಳು ತಿಳಿಸಿವೆ.ರಾಜ್ಯದಲ್ಲಿ ಡಿಸೆಂಬರ್ 17 ರಿಂದ ಒಂದು ವಾರ ಕಾಲ ಶೈತ್ಯಾಂಶ ವಿಪರೀತ ಹೆಚ್ಚಿದ್ದು, ಡಿಸೆಂಬರ್ ಕೊನೆಯವರೆಗೂ ಅದರ ಪರಿಣಾಮವನ್ನು ಜನ ಅನುಭವಿಸಿದರು.

`ಪಶ್ಚಿಮ ರಾಷ್ಟ್ರಗಳ ನಿಜ ಸ್ವರೂಪ ಬಯಲು~

ಬೆಂಗಳೂರು, ಜ. 7 - ಗೋವಾ ವಿಮೋಚನೆಗಾಗಿ ಭಾರತ ನಡೆಸಿದ ಕಾರ್ಯಾಚರಣೆಯ ಬಗ್ಗೆ ಪಶ್ಚಿಮ ರಾಷ್ಟ್ರಗಳ ಟೀಕೆ `ಅವರನ್ನು ಅವರ ನಿಜ ಬಣ್ಣಗಳಲ್ಲಿ ತೋರಿಸುತ್ತವೆ~ ಎಂದು ಕೇಂದ್ರ ಸರ್ಕಾರದ ಸಂಪರ್ಕ ಶಾಖೆ ಸಚಿವ ಡಾ. ಪಿ. ಸುಬ್ಬರಾಯನ್ ಅವರು ಇಂದು ಇಲ್ಲಿ ತಿಳಿಸಿದರು.ಸಂಜೆ ಐ.ಟಿ.ಐ. ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾರತದ ಮೇಲೆ ಪಶ್ಚಿಮ ರಾಷ್ಟ್ರಗಳು ಮಾಡಿರುವ ಟೀಕೆ, ಅದರಲ್ಲೂ ಇಂಗ್ಲೆಂಡಿನ `ಡೈಲಿ ಟೆಲಿಗ್ರಾಫ್~ ಪತ್ರಿಕೆ ಪ್ರಧಾನಿ ನೆಹರೂ ಅವರನ್ನು `ಕಪಟಿ~ ಎಂದು ಕರೆದುದನ್ನು ಸಚಿವರು ಪ್ರಸ್ತಾಪಿಸಿ `ನನ್ನ ನಾಯಕರನ್ನು ಕಪಟಿ ಎಂದು ಕರೆಯಲು ಅವರಿಗೆ ಎಷ್ಟು ಧೈರ್ಯವಿರಬೇಕು? ಆ ರೀತಿ ಹೇಳಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ~ ಎಂದು ಭಾವೋದ್ರೇಕದಿಂದ ನುಡಿದರು.

ಕೃಷಿಕ ಸಂಘದ ಚಳವಳಿ ಮುಕ್ತಾಯ

ತಿರುಚೂರು, ಜ. 7 - ಕಮ್ಯುನಿಸ್ಟ್‌ರ ಹತೋಟಿಯಲ್ಲಿರುವ ಕೇರಳ ಕೃಷಿಕ ಸಂಘದವರು ರಾಜ್ಯದಾದ್ಯಂತ ಕಳೆದ 41 ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ನಿಲ್ಲಿಸಿದ್ದಾರೆ.

ಇಂದು ಇಲ್ಲಿ ಸಮಾವೇಶಗೊಂಡಿದ್ದ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಕೊಟ್ಟಿಯುರ್ ರೈತರ ಕ್ರಿಯಾ ಸಮಿತಿಯು ಮಾತ್ರ, ಸರ್ಕಾರವು ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಯಾವ ಪ್ರಯೋಜನವೂ ಆಗಿಲ್ಲವೆಂಬ ದೃಷ್ಟಿಯಿಂದ ಕೊಟ್ಟಿಯುರ್‌ನಲ್ಲಿ ಚಳವಳಿ ಮುಂದುವರಿಸಬೇಕೆಂದು ತೀರ್ಮಾನಿಸಿತು.

 

Post Comments (+)