ಭಾಮಾಗೆ ಚನ್ನಮ್ಮ ಆಗುವಾಸೆ

7

ಭಾಮಾಗೆ ಚನ್ನಮ್ಮ ಆಗುವಾಸೆ

Published:
Updated:
ಭಾಮಾಗೆ ಚನ್ನಮ್ಮ ಆಗುವಾಸೆ

`ಕಿತ್ತೂರು ಚನ್ನಮ್ಮನ ಪಾತ್ರವನ್ನು ಮಾಡಬೇಕೆಂಬ ಆಸೆ ಹುಟ್ಟಿಕೊಂಡಿದೆ...' ಕಂಗಳರಳಿಸಿ ಮೆಲ್ಲನೆ ನಗು ಸೂಸುತ್ತ ನುಡಿದರು ನಟಿ ಭಾಮಾ. ಚಿತ್ರರಂಗಕ್ಕೆ ಕಾಲಿಟ್ಟ ಐದು ವರ್ಷಗಳಲ್ಲಿ ಅನೇಕ ಸವಾಲಿನ ಪಾತ್ರಗಳನ್ನು ನಿರ್ವಹಿಸಿರುವ ಮಲಯಾಳಿ ಬೆಡಗಿ ಭಾಮಾಗೆ ಕಿತ್ತೂರು ಚೆನ್ನಮ್ಮನ ಪಾತ್ರದೊಳಗೆ ಪ್ರವೇಶಿಸುವ ಬಯಕೆ ಮೂಡಿರುವುದು ಸಂಗೊಳ್ಳಿ ರಾಯಣ್ಣ ಚಿತ್ರವನ್ನು ವೀಕ್ಷಿಸಿದ ಬಳಿಕ. ಗಣೇಶ್ ಜೊತೆ ನಟಿಸುತ್ತಿರುವ `ಆಟೊ ರಾಜ' ಚಿತ್ರದ ಸನ್ನಿವೇಶವೊಂದಕ್ಕೆ ಚೆನ್ನಮ್ಮನ ವೇಷ ಧರಿಸಿದ್ದರಿಂದ ಈ ಆಸೆ ಇಮ್ಮಡಿಯಾಗಿದೆ.ವೈವಿಧ್ಯಮಯ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಿರುವ ಭಾಮಾ ಹಳ್ಳಿ ಹುಡುಗಿ ಪಾತ್ರಗಳಿಗಿಂತ ವಿಭಿನ್ನವಾದ ಬೋಲ್ಡ್ ಪಾತ್ರಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ದಿಗಂತ್ ಜೊತೆಗಿನ `ಬರ್ಫಿ'ಯಲ್ಲಿ ಗ್ಲಾಮರಸ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಪಾತ್ರದ ಸ್ವರೂಪ ಹೇಗೇ ಇರಲಿ, ಅಲ್ಲಿ ಅಭಿನಯಕ್ಕೆ ಹೆಚ್ಚಿನ ಅವಕಾಶವಿರಬೇಕು ಎನ್ನುವುದು ಭಾಮಾ ನಿಯಮ.ಕನ್ನಡ ಎರಡನೇ ತವರು ಮನೆ

ಎರಡು ವರ್ಷದ ಹಿಂದೆ `ಮೊದಲ ಸಲಾ' ಚಿತ್ರದ ಮೂಲಕ ಕನ್ನಡ ನೆಲಕ್ಕೆ ಕಾಲಿಟ್ಟ ಈ ಮಲಯಾಳಿ ಬೆಡಗಿಗೆ ಈಗ ಕನ್ನಡ ಭಾಷೆ ತನ್ನ ಮಾತೃಭಾಷೆಯಷ್ಟೇ ಸುಲಲಿತ. ಕನ್ನಡವೆಂದರೆ ಅಲರ್ಜಿ ಎನ್ನುವಂತೆ ಕನ್ನಡ ನಟಿಯರು ಇಂಗ್ಲಿಷ್‌ನಲ್ಲೇ ಮಾತಿಗಿಳಿಯುವಾಗ ಭಾಮಾ ಅರಳು ಹುರಿದಂತೆ ಕನ್ನಡದ ನುಡಿಮುತ್ತುದುರಿಸಬಲ್ಲರು. ಅಲ್ಲಲ್ಲಿ ಮಾತ್ರ ತುಸು ಮಾತೃಭಾಷೆಯ ಛಾಯೆ ಕಾಣಿಸುತ್ತದೆ. `ಇನ್ನು ಕೆಲವೇ ದಿನ, ಸಂಪೂರ್ಣವಾಗಿ ಕನ್ನಡ ಕಲಿಯುತ್ತೇನೆ' ಎನ್ನುತ್ತಾರೆ ಭಾಮಾ.ತಮಿಳು ಮತ್ತು ತೆಲುಗು ಭಾಷೆಗಳನ್ನು ಕಲಿಯುತ್ತಿದ್ದರೂ ಕನ್ನಡವೇ ಅವರಿಗೆ ಹೆಚ್ಚು ಆಪ್ತವೆನಿಸಿದೆ. ಹೀಗೆ ಕನ್ನಡ ಕಲಿತದ್ದು ಚಿತ್ರಗಳಲ್ಲಿ ತಮಗೆ ನೀಡಿದ ಸಂಭಾಷಣೆಯನ್ನು ಉರುಹೊಡೆದು. ಅವರಿಗೆ ಬೆಂಗಳೂರಿನಲ್ಲಿ ತಮ್ಮೂರಿನ ಸ್ನೇಹಿತರಿದ್ದಾರೆ. ಹೀಗಾಗಿ ಕನ್ನಡ ಪದದ ಬಗೆಗೆ ಏನಾದರೂ ಸಂದೇಹ ಬಂದರೆ ಫೋನ್ ಮೂಲಕವೇ ಅದನ್ನು ಬಗೆಹರಿಸಿಕೊಳ್ಳುತ್ತಾರಂತೆ. ಮಾತ್ರವಲ್ಲ, ಈ ವರ್ಷ ಅವರು ನಟಿಸಿರುವ ಆರು ಚಿತ್ರಗಳಲ್ಲಿ ನಾಲ್ಕು ಕನ್ನಡದವು. ಹೀಗಾಗಿ ಕೇರಳಕ್ಕಿಂತ ಕರ್ನಾಟಕದಲ್ಲಿಯೇ ಹೆಚ್ಚು ಕಾಲ ಕಳೆದಿದ್ದಾರೆ. `ಅಪ್ಪಯ್ಯ' ಮತ್ತು `ಅಂಬರ' ಬಿಡುಗಡೆಯಾಗಬೇಕಿರುವ ಅವರ ಮತ್ತೆರಡು ಕನ್ನಡ ಚಿತ್ರಗಳು. ಇದುವರೆಗೆ ನಟಿಸಿರುವ ಏಳು ಚಿತ್ರಗಳ ಪಾತ್ರಗಳೂ ಒಂದೊಂದು ಅನುಭವ ನೀಡಿವೆ.ತಮ್ಮ ಪಾತ್ರಕ್ಕೆ ತಾವೇ ದನಿ ನೀಡಬೇಕೆಂಬ ಇರಾದೆ ಅವರದು. `ಬರ್ಫಿ ಚಿತ್ರೀಕರಣ ಮುಗಿಯುವುದರೊಳಗೆ ಭಾಷೆ ಸಂಪೂರ್ಣ ಕಲಿತು ಡಬ್ಬಿಂಗ್ ಮಾಡಲು ಪ್ರಯತ್ನಿಸುತ್ತೇನೆ' ಎಂದು ಕನ್ನಡದ ಕುರಿತ ಒಲವು ವ್ಯಕ್ತಪಡಿಸುತ್ತಾರೆ ಭಾಮಾ.

ಓದುವಾಗಲೇ ಬಣ್ಣದ ಲೋಕ ಪ್ರವೇಶಿಸಿದ ಭಾಮಾ ದೂರ ಶಿಕ್ಷಣದಲ್ಲಿ ಸಮಾಜಶಾಸ್ತ್ರ ಪದವಿ ಪಡೆದವರು.ಮತ್ತೆ ಓದುವ ಆಸೆ ಇದ್ದರೂ ಕೆಲಸದ ಒತ್ತಡದಿಂದಾಗಿ ಅದರತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೂ ಅವರಲ್ಲಿದೆ. ಮದುವೆಯ ಮಾತೆತ್ತಿದಾಗ ತುಸು ನಾಚುವ ಭಾಮಾ, `ನಟಿಯರ ವೃತ್ತಿಬದುಕು ಮದುವೆಯಾದೊಡನೆ ಹೆಚ್ಚೂ ಕಡಿಮೆ ಮುಗಿದಂತೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದಿರುವುದರಿಂದ ಅದರ ಕುರಿತು ಗಮನ ಹರಿಸಲೇಬೇಕು. ಅಷ್ಟರೊಳಗೆ ಮತ್ತಷ್ಟು ಮನಸ್ಸಿನಲ್ಲಿ ಉಳಿಯುವ ಪಾತ್ರಗಳಲ್ಲಿ ನಟಿಸಬೇಕು' ಎಂಬ ಕನಸನ್ನು ಹಂಚಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry