ಮಂಗಳವಾರ, ಮೇ 24, 2022
28 °C

ಭಾರತಕ್ಕೆ ಅಮೆರಿಕದ ಶಿಕ್ಷಣ ಸಂಸ್ಥೆಗಳ ಪ್ರವೇಶ: ಅಡ್ಡಿ ಆತಂಕ ನಿವಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ತನ್ನ ರಾಷ್ಟ್ರದ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆಯುವುದಕ್ಕೆ ತೊಡಕಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಸಕಲ ಪ್ರಯತ್ನ ಮಾಡುವುದಾಗಿ ಅಮೆರಿಕ ಭರವಸೆ ನೀಡಿದೆ.

ನಮ್ಮ ಸಂಸ್ಥೆಗಳು ಭಾರತದ ಸಂಸ್ಥೆಗಳೊಂದಿಗಿನ ಸಹಭಾಗಿತ್ವದಲ್ಲಿ ಅಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆಯುವುದು ಒಂದು ಸವಾಲಿನ ಪ್ರಕ್ರಿಯೆ. ಎರಡೂ ರಾಷ್ಟ್ರಗಳ ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವಕ್ಕೆ ಪೂರಕವಾಗಿ ಅಡೆತಡೆಗಳನ್ನು ನಿವಾರಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ವಿದೇಶಾಂಗ ಇಲಾಖೆ ಉಪ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಸ್ಪಷ್ಟಪಡಿಸಿದರು.

ಎರಡೂ ರಾಷ್ಟ್ರಗಳ ನಡುವೆ ಶೈಕ್ಷಣಿಕ ಶೃಂಗಸಭೆಆರಂಭವಾಗುವ ಕೆಲವೇ ಗಂಟೆಗಳ ಮುನ್ನ, ಅಮೆರಿಕ- ಭಾರತ ವ್ಯಾಪಾರ ಮಂಡಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು ಹಾಗೂ ಉದ್ಯಮ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎರಡೂ ರಾಷ್ಟ್ರಗಳ ಮಧ್ಯೆ ಆರ್ಥಿಕ ಹಾಗೂ ರಾಜತಾಂತ್ರಿಕ ಬಾಂಧವ್ಯ ಗಟ್ಟಿಯಾಗುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಬಾಂಧವ್ಯ ಇನ್ನೂ ಸಾಕಷ್ಟು ಹಿಂದುಳಿದಿದೆ ಎಂದು ಬರ್ನ್ಸ್ ಅಭಿಪ್ರಾಯಪಟ್ಟರು.

ಆರ್ಥಿಕತೆ, ರಾಜತಾಂತ್ರಿಕತೆ ಇನ್ನಿತರ ಅಂಶಗಳ ದೃಷ್ಟಿಕೋನದಿಂದ ನೋಡಿದಾಗ ಭಾರತದಿಂದ ಅಮೆರಿಕಕ್ಕೆ ವ್ಯಾಸಂಗಕ್ಕೆ ಬರುವುದು ತ್ರಾಸದ ಸಂಗತಿಯೇ ಆಗಿದೆ ಎನ್ನುವ ಮೂಲಕ, ಅವೆುರಿಕದ ಸಂಸ್ಥೆಗಳೇ ಭಾರತದತ್ತ ತೆರಳಬೇಕು ಎಂದು ಪರೋಕ್ಷವಾಗಿ ಸೂಚಿಸಿದರು.

ನಮ್ಮಲ್ಲಿ ಸಾವಿರಾರು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ವಿಕೇಂದ್ರೀಕರಣ ವ್ಯವಸ್ಥೆ ಇಲ್ಲಿದೆ. ಆದರೆ ಹೊರಗಿನಿಂದ ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.

ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೆರಿಕದ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಬರ್ನ್ಸ್ ಇದೇ ವೇಳೆ ಕಳವಳ ವ್ಯಕ್ತಪಡಿಸಿದರು.

ತನ್ನ ಆರ್ಥಿಕತೆಗೆ ಆಧುನಿಕ ರೂಪ ನೀಡಲು ಭಾರತ ಯತ್ನಿಸುತ್ತಿರುವ ಸಂದರ್ಭ ಇದಾಗಿದೆ. ಇದೇ ವೇಳೆ, ಅಮೆರಿಕವು ತನ್ನ ಆರ್ಥಿಕ ಪುನಶ್ಚೇತನಕ್ಕೆ ರಫ್ತು ವಹಿವಾಟು ಹೆಚ್ಚಿಸಿಕೊಳ್ಳುವ ಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಶೈಕ್ಷಣಿಕ ರಂಗದಲ್ಲಾಗುವ ವಿನಿಮಯ ಎರಡೂ ರಾಷ್ಟ್ರಗಳು ಮುನ್ನಡೆಯಲು ನೆರವಾಗುತ್ತದೆ ಎಂದರು.

ಸಮುದಾಯ ಕಾಲೇಜುಗಳು, ದೂರ ಶಿಕ್ಷಣ ಹಾಗೂ ಶಿಕ್ಷಣ ರಂಗದಲ್ಲಿನ ಇನ್ನಿತರ ತಂತ್ರಜ್ಞಾನ ಬಳಕೆ ಸಾಧ್ಯತೆ ಬಗ್ಗೆ ಎರಡೂ ರಾಷ್ಟ್ರಗಳು ಚಿಂತಿಸಬೇಕು. 21ನೇ ಶತಮಾನದಲ್ಲಿ ಅಮೆರಿಕ ಸಾಧಿಸಬಯಸುವ ಭದ್ರತೆ, ಸ್ಥಿರತೆ ಹಾಗೂ ಪ್ರಗತಿಯು ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದೊಂದಿಗಿನ ಸದೃಢ ಬಾಂಧವ್ಯವನ್ನು ಅವಲಂಬಿಸಿದೆ ಎಂದೂ ಬರ್ನ್ಸ್ ಹೇಳಿದರು.

ಭಾರತದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮಾತನಾಡಿ, ಅಮೆರಿಕದ ಸಂಸ್ಥೆಗಳು ಭಾರತದ್ಲ್ಲಲಿ ಸಂಸ್ಥೆಗಳನ್ನು ತೆರೆಯಲು ಇದು ಸೂಕ್ತೃ ಸಮಯ ಎಂದರು.

ಜಗತ್ತನ್ನು ಬಾಧಿಸುತ್ತಿರುವ ಆಹಾರ ಭದ್ರತೆ, ನೀರಿನ ಕೊರತೆ ಹಾಗೂ ಹವಾಮಾನ ಬದಲಾವಣೆ ಸಮಸ್ಯೆಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಹಾರ ಸಿದ್ಧವಾಗಲಿದೆ.  ಗುಣಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಭಾಗಿತ್ವ ಏರ್ಪಟ್ಟರೆ ಎರಡೂ ರಾಷ್ಟ್ರಗಳಿಗೆ ಲಾಭವಾಗುತ್ತದೆ.  ಭಾರತ ಅಪಾರ ಅವಕಾಶಗಳ ತಾಣವಾಗಿದೆ. ಭಾರತದಲ್ಲಿ ನೀವು (ಅಮೆರಿಕ) ಏನನ್ನೇ ಮಾಡಿದರೂ ಅದರೂ ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗುತ್ತದೆ ಎಂದು ಸಚಿವರು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.