ಭಾರತಕ್ಕೆ ಎರಡನೇ ಪಂದ್ಯದಲ್ಲೂ ಆಘಾತ

ಭಾನುವಾರ, ಮೇ 26, 2019
28 °C

ಭಾರತಕ್ಕೆ ಎರಡನೇ ಪಂದ್ಯದಲ್ಲೂ ಆಘಾತ

Published:
Updated:

ಲಂಡನ್ (ಪಿಟಿಐ): ಆರಂಭದಲ್ಲಿ ಸಂಭ್ರಮದಿಂದ ಅರಳಿದ್ದ ಭಾರತ ತಂಡದವರ ಮುಖ ಕೊನೆಯಲ್ಲಿ ಬಾಡಿ ಹೋಯಿತು! ಹೌದು; ಎರಡನೇ ನಿಮಿಷದಲ್ಲಿಯೇ ಗೋಲು ಗಳಿಸಿದಾಗ ನ್ಯೂಜಿಲೆಂಡ್ ಎದುರು ಗೆಲುವು ಸಾಧ್ಯವೆನ್ನುವ ಆಸೆ ಮೂಡಿತ್ತು. ಆದರೆ ಕೊನೆಯಲ್ಲಿ ಆಗಿದ್ದೇ ಬೇರೆ. ಭಾರತಕ್ಕೆ 1-3 ಗೋಲುಗಳ ಅಂತರದ ಸೋಲು.ಮೊದಲ ಪಂದ್ಯದಲ್ಲಿ 2-3 ಗೋಲುಗಳ ಅಂತರದಿಂದ ಹಾಲೆಂಡ್ ವಿರುದ್ಧ ಪರಾಭವಗೊಂಡಿದ್ದ ಭಾರತಕ್ಕೆ `ಕಿವೀಸ್~ ಎದುರೂ ಆಘಾತ. ಇದಕ್ಕೆ ಕಾರಣ ಮತ್ತೊಮ್ಮೆ ರಕ್ಷಣೆಯಲ್ಲಿ ಮಾಡಿದ ಭಾರಿ ಪ್ರಮಾದಗಳು. ದಾಳಿಯಲ್ಲಿ ಆತಂಕ ಪಡುವಂಥ ಕೊರತೆಗಳೇನು ಇರಲಿಲ್ಲ.  ಎದುರಾಳಿ ಪಡೆಗೆ ನಿರಾತಂಕವಾಗಿ ಮುನ್ನುಗ್ಗಲು ರಕ್ಷಣಾ ಆಟಗಾರರು ಸಾಕಷ್ಟು ಅವಕಾಶ ಮಾಡಿಕೊಟ್ಟಿದ್ದರಿಂದ ಸಂಕಷ್ಟ ಹೆಚ್ಚಿತು.ಪಂದ್ಯದ ಶುರುವಿನಲ್ಲಿ ತೋರಿದ್ದ ಉತ್ಸಾಹವನ್ನು ಕೊನೆಯವರೆಗೆ ಕಾಯ್ದುಕೊಂಡಿದ್ದರೆ ನ್ಯೂಜಿಲೆಂಡ್ ಮೇಲೆ ಒತ್ತಡ ಹೆಚ್ಚಿಸಲು ಅವಕಾಶವಿತ್ತು. ಭಾರತದವರು ಎರಡನೇ ನಿಮಿಷದಲ್ಲಿಯೇ ಮೊದಲ ಪೆನಾಲ್ಟಿ ಕಾರ್ನರ್ ಪಡೆದರು. ಡ್ರ್ಯಾಗ್‌ಫ್ಲಿಕ್ ಪರಿಣತ ಸಂದೀಪ್ ಸಿಂಗ್ ನಿಖರವಾಗಿ ಚೆಂಡನ್ನು ಗುರಿ ಮುಟ್ಟಿಸಿದರು. ಅದೇ ಈ ಪಂದ್ಯದಲ್ಲಿ ಭಾರತದ ಪಾಲಿನ ಮೊದಲ ಹಾಗೂ ಕೊನೆಯ ಸಂತಸದ ಕ್ಷಣ.ಆನಂತರ `ಬ್ಲ್ಯಾಕ್ ಸ್ಟಿಕ್ಸ್~ ಖ್ಯಾತಿಯ ನ್ಯೂಜಿಲೆಂಡ್ ತಂಡದವರು ಭರತ್ ಚೆಟ್ರಿ ನಾಯಕತ್ವದ ಪಡೆಯ ಮೇಲೆ ಕಾರ್ಮೋಡ ಆವರಿಸುವಂತೆ ಮಾಡಿದರು. 12ನೇ ನಿಮಿಷದಲ್ಲಿ ಆ್ಯಂಡ್ರ್ಯೂ ಹೈವಾರ್ಡ್ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸಿದರು. ಆಗ 1-1ರಲ್ಲಿ ಗೋಲು ಸಮ.ಡೀನ್ ಕೌಜಿನ್ಸ್ ನಾಯಕತ್ವದ ಕಿವೀಸ್ ಪಡೆಯು 24ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಪ್ರಯೋಜನ ಪಡೆಯಿತು. ಫಿಲಿಪ್ ಬುರ‌್ರೊವ್ಸ್ ಭಾರತ ಗೋಲ್ ಕೀಪರ್ ಚೆಟ್ರಿ  ದಂಗಾಗಿ ನಿಲ್ಲುವಷ್ಟು ಚುರುಕಾಗಿ ಡ್ರ್ಯಾಗ್ ಫ್ಲಿಕ್ ಮಾಡಿದರು. ಇನ್ನೊಂದು ಗೋಲು ಕೂಡ ನ್ಯೂಜಿಲೆಂಡ್‌ಗೆ ಪ್ರಥಮಾರ್ಧದಲ್ಲಿಯೇ ದಕ್ಕಿತು. 29ನೇ ನಿಮಿಷದಲ್ಲಿ ನಿಕೊಲಸ್ ವಿಲ್ಸನ್ ಅವರು ಗೋಲ್ ಆವರಣದಲ್ಲಿ ತೋರಿದ ಚಾಕಚಕ್ಯತೆ ಫಲ ನೀಡಿತು.ಉತ್ತರಾರ್ಧದಲ್ಲಿಯಾದರೂ ಭಾರತ ಪುಟಿದೇಳುತ್ತದೆ ಎನ್ನುವ ಆಸೆ ಆಸೆಯಾಗಿಯೇ ಉಳಿಯಿತು. ಈ ಪಂದ್ಯದಲ್ಲಿ ಉಭಯ ತಂಡದವರು ತಲಾ ಆರು ಬಾರಿ ಫೀಲ್ಡ್ ಗೋಲ್ ಪ್ರಯತ್ನ ಮಾಡಿದರು. ಆದರೆ ಒಮ್ಮೆ ಯಶಸ್ವಿಯಾಗಿದ್ದು ನ್ಯೂಜಿಲೆಂಡ್.ಭಾರತದವರು ನಾಲ್ಕು ಹಾಗೂ ನ್ಯೂಜಿಲೆಂಡ್‌ನವರು ಆರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರು. ಇದೇ ವಿಜಯಿ ತಂಡದವರು ಗೋಲ್ ಆವರಣದಲ್ಲಿ ಭಾರತದ ರಕ್ಷಣಾ ಆಟಗಾರರು ತಡಬಡಾಯಿಸುವಂತೆ ಮಾಡಿದ್ದಕ್ಕೆ ಸಾಕ್ಷಿ. ಉತ್ತರಾರ್ಧದ ಆಟದಲ್ಲಿ  ಭರತ್ ಚೆಟ್ರಿ ಸ್ಥಾನದಲ್ಲಿ ಗೋಲ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದು ಶ್ರೀಜೇಶ್.ಅವರು ನ್ಯೂಜಿಲೆಂಡ್ ತಂಡದ ಎರಡು ಉತ್ತಮ ಪ್ರಯತ್ನಗಳನ್ನು ವಿಫಲಗೊಳಿಸಿದ ರೀತಿ ಮೆಚ್ಚುವಂಥದ್ದು.

ಸತತ ಎರಡು ಪಂದ್ಯಗಳಲ್ಲಿ ಎದುರಾಳಿಗಳು ಸುಲಭವಾಗಿ ಚೆಂಡನ್ನು ಗುರಿ ಮುಟ್ಟಿಸಲು ಅವಕಾಶ ನೀಡಿರುವ ಭರತ್ ಬದಲು ಶ್ರೀಜೇಶ್ ಅವರನ್ನೇ ಬಾಕಿ ಲೀಗ್ ಪಂದ್ಯಗಳಲ್ಲಿ ಅಂಗಳಕ್ಕೆ ಇಳಿಸುವುದು ಹೆಚ್ಚು ಸೂಕ್ತವೆಂದು ಅನಿಸಿದ್ದು ಸಹಜ.ಆಸ್ಟ್ರೇಲಿಯಾಕ್ಕೆ ಸುಲಭ ಗೆಲುವು: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದವರು `ಎ~ ಗುಂಪಿನ ಲೀಗ್ ಪಂದ್ಯದಲ್ಲಿ ಬುಧವಾರ 5-0 ಗೋಲುಗಳ ಅಂತರದಿಂದ ಸ್ಪೇನ್ ವಿರುದ್ಧ ಸುಲಭವಾಗಿ ವಿಜಯ ಸಾಧಿಸಿತು. `ಎ~ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದಿದ್ದು, ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. `ಬಿ~ ಗುಂಪಿನಲ್ಲಿ ಆರು ಪಾಯಿಂಟುಗಳನ್ನು ಸಂಗ್ರಹಿಸಿರುವ ಹಾಲೆಂಡ್ ಕೂಡ ಎತ್ತರದಲ್ಲಿದೆ. ಅದು ತನ್ನ ಎರಡನೇ ಪಂದ್ಯದಲ್ಲಿ 3-1ರಲ್ಲಿ ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಿದೆ.

ಗೋಲುಗಳ ವಿವರ

ಭಾರತ 1

ಸಂದೀಪ್ ಸಿಂಗ್ (2ನೇ ನಿ.)

ನ್ಯೂಜಿಲೆಂಡ್ 3

ಆ್ಯಂಡ್ರ್ಯೂ ಹೈವಾರ್ಡ್ (12ನೇ ನಿ.)ಫಿಲಿಪ್ ಬುರ‌್ರೊವ್ಸ್ (24ನೇ ನಿ.)ನಿಕೊಲಸ್ ವಿಲ್ಸನ್ (29ನೇ ನಿ.)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry