ಭಾರತಕ್ಕೆ ನೆಗಡಿ-ದ.ಏಷ್ಯಾ ನಡುಕ

7

ಭಾರತಕ್ಕೆ ನೆಗಡಿ-ದ.ಏಷ್ಯಾ ನಡುಕ

Published:
Updated:
ಭಾರತಕ್ಕೆ ನೆಗಡಿ-ದ.ಏಷ್ಯಾ ನಡುಕ

ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ಭಾರತದ ಮೇಲೆ ದೊಡ್ಡದಾಗಿಯೇ ಬೀಳುತ್ತಿದೆ. ಪರಿಣಾಮ ಭಾರತದ `ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ'(ಜಿಡಿಪಿ) ಕುಸಿಯುತ್ತಿದೆ. ಇದರ ಪ್ರಭಾವ ಭಾರತದ ಮೇಲಷ್ಟೇ ಅಲ್ಲ ಇಡೀ ದಕ್ಷಿಣ ಏಷ್ಯಾದ ಮೇಲೆಯೂ ಆಗುತ್ತಿದೆ.ಇದು ಇತ್ತೀಚೆಗಷ್ಟೆ ಬಿಡುಗಡೆಯಾದ ವಿಶ್ವ  ಬ್ಯಾಂಕ್‌ನ ವರದಿಯ ಸಾರಾಂಶ. ದಕ್ಷಿಣ ಏಷ್ಯಾದಲ್ಲಿ ಬೃಹತ್ ಅರ್ಥ ವ್ಯವಸ್ಥೆ ಇರುವ ದೇಶ ಭಾರತ. ಈಗ ಅದರ ಪ್ರಗತಿಯ ದರ ಕುಸಿಯುತ್ತಿರುವುದರಿಂದ ದಕ್ಷಿಣ ಏಷ್ಯಾದ `ಜಿಡಿಪಿ' ಸಹ ಕೆಳಮುಖವಾಗಿದೆ. 2011-12ರ ಅವಧಿಯಲ್ಲಿ ಶೇ 7.4ರಷ್ಟಿದ್ದ ದಕ್ಷಿಣ ಏಷ್ಯಾದ `ಜಿಡಿಪಿ', 2012-13ರ ಅಂತ್ಯಕ್ಕೆ ಶೇ. 5.4ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ `ಜಾಗತಿಕ ಆರ್ಥಿಕ ಮುನ್ನೋಟ-2013' ವರದಿ ಮೂಲಕ ಕಳವಳ ವ್ಯಕ್ತಪಡಿಸಿದೆ.2011-12ರ ಹಣಕಾಸು ವರ್ಷದಲ್ಲಿ ಶೇ. 6.9ರಷ್ಟು ಇದ್ದ ಭಾರತದ `ಜಿಡಿಪಿ' ಪ್ರಸ್ತುತ ತೀವ್ರ ಕುಸಿತ ಕಂಡಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ  ಇದು ಶೇ 5.4ಕ್ಕೆ ಇಳಿಯಲಿದೆ ಎಂಬುದು ವರದಿಯ ಅಂದಾಜು. ಇನ್ನೊಂದೆಡೆ `ಕೇಂದ್ರ ಅಂಕಿ-ಅಂಶ ಸಂಸ್ಥೆ' (ಸಿಎಸ್‌ಒ) ಪ್ರಕಾರ ಭಾರತದ ಜಿಡಿಪಿ ಶೇ. 5 ಅಷ್ಟೆ!ವಿಶ್ವಬ್ಯಾಂಕ್ ಪ್ರಕಾರ ಭಾರತದ `ಜಿಡಿಪಿ' ಕುಸಿತಕ್ಕೆ ಪ್ರಮುಖ ಕಾರಣಗಳೆಂದರೆ, ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತ, ನೀರಸ ಹೂಡಿಕೆ, ವಿದ್ಯುತ್ ಕೊರತೆ, ಅನಿಶ್ಚಿತ ಆರ್ಥಿಕ ನೀತಿ, ಎಲ್ಲಕ್ಕಿಂತ ಮುಖ್ಯವಾಗಿ ಮುಂಗಾರು ವೈಫಲ್ಯ.ಇತ್ತೀಚೆಗೆ ಭಾರತ ಸರ್ಕಾರವೇನೋ, ಬ್ಯಾಂಕಿಂಗ್ ಸುಧಾರಣೆ ಮಸೂದೆ,  ಚಿಲ್ಲರೆ ವಹಿವಾಟು ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ, ಸಬ್ಸಿಡಿ ಕಡಿತದಂತಹ ಸುಧಾರಣಾ ಕ್ರಮ ಕೈಗೊಂಡಿದೆ. ಹೂಡಿಕೆ ಮತ್ತು ಕೃಷಿ ಉತ್ಪಾದನೆ ಹೆಚ್ಚಳ ನಿರೀಕ್ಷೆಯೂ ಇರುವುದರಿಂದ `ಜಿಡಿಪಿ' 2013-14ರಲ್ಲಿ ಶೇ. 6.4ರ ಮಟ್ಟಕ್ಕೆ, 2014-15ರಲ್ಲಿ ಶೇ 7.3ಕ್ಕೆ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಇದರಿಂದಾಗಿ ದಕ್ಷಿಣ ಏಷ್ಯಾ ವಲಯದ `ಜಿಡಿಪಿ' ಸಹ 2013ರಲ್ಲಿ ಶೇ 5.7 ನಂತರ 2014ರಲ್ಲಿ ಶೇ 6.4 ಹಾಗೂ 2015ರಲ್ಲಿ ಶೇ 6.7ರ ಮಟ್ಟಕ್ಕೇರಲಿದೆ ಎಂಬ ಆಶಾಭಾವ ವಿಶ್ವಬ್ಯಾಂಕ್ ವರದಿಯಲ್ಲಿದೆ.ಪುಟ್ಟ ದೇಶಗಳ ಪ್ರಗತಿ

ಹಾಗೆ ನೋಡಿದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭಾರತವನ್ನು ಬಿಟ್ಟರೆ ಉಳಿದ ರಾಷ್ಟ್ರಗಳಲ್ಲಿ `ಜಿಡಿಪಿ'ಗೆ ಸಂಬಂಧಿಸಿದಂತೆ ಅಂತಹ ನಿರಾಶದಾಯಕ ವಾತಾವರಣವೇನೂ ಇಲ್ಲ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಅತ್ಯಂತ ಹೆಚ್ಚು `ಜಿಡಿಪಿ'ಯನ್ನು ಶ್ರೀಲಂಕಾ ಈ ಹಣಕಾಸು ವರ್ಷದ ಅಂತ್ಯಕ್ಕೆ ಹೊಂದಲಿದೆ.2009ರಲ್ಲಿ ಅದರ ಜಿಡಿಪಿ ಶೇ 3.5ರಷ್ಟು ಅಲ್ಪ ಪ್ರಮಾಣದ್ದಾಗಿತ್ತು. ಈ ವರ್ಷ ಶೇ 6.5ಕ್ಕೇರಲಿದೆ ಎಂದು ವಿಶ್ವಬ್ಯಾಂಕ್ ದ್ವೀಪ ರಾಷ್ಟ್ರಕ್ಕೆ `ಶಹಬ್ಬಾಸ್' ಎಂದಿದೆ.2ನೇ ಸ್ಥಾನದಲ್ಲಿರುವ ಬಾಂಗ್ಲಾ `ಜಿಡಿಪಿ' ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ 6.2ರಷ್ಟಿರಲಿದೆ. ನೇಪಾಳ ಶೇ 3.9ರಿಂದ ಶೇ 4ಕ್ಕೆ ಹೆಚ್ಚಳ ಸಾಧಿಸಿದರೆ, ಪಾಕಿಸ್ತಾನ ಶೇ 3ರಿಂದ ಶೇ 3.8ಕ್ಕೆ ಹೆಚ್ಚಳ ಕಾಣಲಿದೆ. ಇದರರ್ಥ ಪುಟ್ಟ ದೇಶಗಳ ಆರ್ಥಿಕ ಪ್ರಗತಿ ಉತ್ತಮವಾಗಿಯೇ ಇದೆ!ಆದರೆ ದಕ್ಷಿಣ ಏಷ್ಯಾ ವಲಯದ ಮುಕ್ಕಾಲು ಭಾಗವನ್ನು ಪ್ರತಿನಿಧಿಸುವ ಭಾರತದಲ್ಲಿ `ಜಿಡಿಪಿ' ಕುಸಿಯುತ್ತಿರುವುದರಿಂದಾಗಿ ಇಡೀ ದಕ್ಷಿಣ ಏಷ್ಯಾ ವಲಯದ `ಜಿಡಿಪಿ' ಸಹ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇಲ್ಲಿ ಪುಟ್ಟ ದೇಶಗಳು ದೊಡ್ಡ ಪ್ರಗತಿಯನ್ನೇ ಸಾಧಗಿಸಿದ್ದರೂ, ಅದು ಇಡೀ ದಕ್ಷಿಣ ಏಷ್ಯಾ ವಲಯದ ಪಾಲಿಗೆ ಬಹಳ ಸಣ್ಣ ಕೊಡುಗೆ ಎನಿಸಿಬಿಡುತ್ತದೆ.ಭಾರತದ ಏಳು-ಬೀಳು ಅದರ ಮೇಲಷ್ಟೇ ಅಲ್ಲ, ದಕ್ಷಿಣ ಏಷ್ಯಾ ವಲಯದಲ್ಲಿ ದೊಡ್ಡದಾಗಿಯೇ ಪರಿಣಾಮ ಬೀರುತ್ತದೆ.ವಿಶ್ವದ ಆರ್ಥಿಕಾಭಿವೃದ್ಧಿಯ ಅವಲಂಬನೆ ಈಗ ಮಹಾನ್ ಸಿರಿವಂತ ರಾಷ್ಟ್ರಗಳಿಂದ ಅಭಿವೃದ್ಧಿಯ ಹಾದಿಯಲ್ಲಿರುವ ರಾಷ್ಟ್ರಗಳತ್ತ ವಾಲುತ್ತಿದೆ.ಹಾಗಾಗಿಯೇ ಮುಖ್ಯವಾಗಿ ಭಾರತ ಹಾಗೂ ಬ್ರೆಜಿಲ್‌ನಂತಹ ದೇಶಗಳು ಸದೃಢ ಆರ್ಥಿಕಾಭಿವೃದ್ಧಿಯತ್ತ ಗಮನ ನೀಡಬೇಕಿದೆ ಎಂಬುದು ವಿಶ್ವಬ್ಯಾಂಕ್ ಕಿವಿಮಾತು.ಮುಖ್ಯವಾಗಿ ಯೂರೋ ಕರೆನ್ಸಿ ಬಿಕ್ಕಟ್ಟು, ಅಮೆರಿಕದ ಅನಿಶ್ಚಿತ ಆರ್ಥಿಕ ನೀತಿಗಳ ಪರಿಣಾಮಗಳ ಕುರಿತು ಭಾರತದಂತಹ ರಾಷ್ಟ್ರಗಳು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಗಮನ ಸೆಳೆದಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್, ಅಭಿವೃದ್ಧಿ ಹಾದಿಯಲ್ಲಿರುವ ದೇಶಗಳಲ್ಲಿನ ಮೂಲಸೌಕರ‌್ಯ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ನೆರವು ಒದಗಿಸಲಾಗುವುದು. ಅವುಗಳ ಆರ್ಥಿಕಾಭಿವೃದ್ಧಿಗಾಗಿ ಹೆಚ್ಚಿ ಶ್ರಮಿಸಲಾಗುವುದು ಎಂಬ ಭರವಸೆಯ ಮಾತು ಹೇಳಿದ್ದಾರೆ.ಭವಿಷ್ಯದಲ್ಲಿ ವಿಶ್ವದ ಆರ್ಥಿಕ ಪ್ರಗತಿಗೆ ಭಾರತ, ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ದೇಶಗಳ ಕೊಡುಗೆ ಬಹಳ ಮುಖ್ಯ ಎಂದೂ ಜಿಮ್ ಉತ್ತೇಜನ ಮಾತು ಹೇಳಿದ್ದಾರೆ.ಜನಸಂಖ್ಯೆ, ಭೂವಿಸ್ತಾರದಲ್ಲಿ ದಕ್ಷಿಣ ಏಷ್ಯಾದ ಅತಿ ದೊಡ್ಡ ರಾಷ್ಟ್ರ ಭಾರತ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಅರ್ಥ ವ್ಯವಸ್ಥೆಯ ದೇಶ ಭಾರತ. ಆದರೆ ಖರೀದಿಸುವ ಶಕ್ತಿ ವಿಚಾರದಲ್ಲಿ ಮಾತ್ರ ಭಾರತದ್ದು 4ನೇ ಸ್ಥಾನ ಎಂಬ `ಅಂಕಪಟ್ಟಿ' ನೀಡಿದೆ ವಿಶ್ವಬ್ಯಾಂಕ್.`ಜಿಡಿಪಿ' ಲೆಕ್ಕಾಚಾರ

ಒಂದು ದೇಶದ ಒಟ್ಟಾರೆ ವಾರ್ಷಿಕ ಉತ್ಪಾದನೆ ಪ್ರಮಾಣವನ್ನು(ಜಿಡಿಪಿ) ಹಲವು ವಿಧಾನಗಳ ಮೂಲಕ ಲೆಕ್ಕಹಾಕಲಾಗುತ್ತದೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನ ಹೀಗಿದೆ;

ಅನುಭೋಗ(consumption) + ಹೂಡಿಕೆ(Investment) + ಸರ್ಕಾರಿ ಖರ್ಚು (government spending)+ (ರಫ್ತು-ಆಮದು)(exports-imports)

GDP = C+I+G+(X-M)ಚೀನಾ ಸಮಕ್ಕೆ ಭಾರತ?

ಭಾರತದ `ಜಿಡಿಪಿ' ಭವಿಷ್ಯದಲ್ಲಿ ಚೀನಾ ಸನಿಹಕ್ಕೆ ಬಂದು ನಿಲ್ಲಲಿದೆ ಎಂಬುದು ವಿಶ್ವಬ್ಯಾಂಕ್‌ನ ಹಿರಿಯ ಆರ್ಥಿಕ ತಜ್ಞರ ಅಂದಾಜು.

ಏಷ್ಯಾದ ಈ ಎರಡು ಬೃಹತ್ ದೇಶಗಳಲ್ಲಿನ ಪ್ರಗತಿಯ ಪ್ರಮಾಣದಲ್ಲಿನ ಅಂತರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. 2015ರ ವೇಳೆಗೆ ಚೀನಾದ `ಜಿಡಿಪಿ' ಶೇ 7.9ರಷ್ಟು ಇದ್ದರೆ ಭಾರತದ ಜಿಡಿಪಿ ಶೇ 7ರಷ್ಟಿರಲಿದೆ ಎನ್ನುತ್ತಾರೆ ವಿಶ್ವಬ್ಯಾಂಕ್ ಮುಖ್ಯ ಆರ್ಥಿಕ ತಜ್ಞ(ಭಾರತೀಯ) ಕೌಶಿಕ್ ಬಸು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry