ಮಂಗಳವಾರ, ಮಾರ್ಚ್ 2, 2021
23 °C
ಕ್ರಿಕೆಟ್: ವಿಂಡೀಸ್ ಗೆಲುವಿಗೆ ಕಠಿಣ ಗುರಿ, ಧವನ್ ಅರ್ಧಶತಕ

ಭಾರತಕ್ಕೆ ಬಲ ತುಂಬಿದ ಕೊಹ್ಲಿ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಬಲ ತುಂಬಿದ ಕೊಹ್ಲಿ ಆಟ

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಹಿಂದಿನ ಎರಡು ಪಂದ್ಯಗಳಲ್ಲಿ ಎಸಗಿದ್ದ ತಪ್ಪಿನಿಂದ ಭಾರತದ  ಬ್ಯಾಟ್ಸ್‌ಮನ್‌ಗಳು ಪಾಠ ಕಲಿತಂತಿದೆ. ಮೊದಲ ವಿಕೆಟ್‌ನ ಗಟ್ಟಿ ಬುನಾದಿಯ ಮೇಲೆ ವಿರಾಟ್ ಕೊಹ್ಲಿ (102) ನಿರ್ಮಿಸಿದ ಅಮೋಘ ಶತಕದ ಬಲದಿಂದ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯರು ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಹಿಂದೆ ಆರಂಭಿಕ ಜೋಡಿ ಗಟ್ಟಿ ಬುನಾದಿ ನಿರ್ಮಿಸಲು ಎಡವಿತ್ತು. ಆದರೆ, ಈ ಪಂದ್ಯದಲ್ಲಿ ಹಿಂದಿನ ತಪ್ಪನ್ನು ಮಾಡಲಿಲ್ಲ. ಇದರ ಪರಿಣಾಮ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ.ಬುನಾದಿ ಮೇಲೆ ಸೌಧ: ಆರಂಭಿಕ ಜೋಡಿ ರೋಹಿತ್ ಶರ್ಮ (46, 78ಎಸೆತ, 5ಬೌಂಡರಿ) ಹಾಗೂ ಧವನ್ (69, 77ಎಸೆತ, 8ಬೌಂಡರಿ, 2 ಸಿಕ್ಸರ್) ಗಟ್ಟಿ ಬುನಾದಿಯನ್ನು ನಿರ್ಮಿಸಿತು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 23.1 ಓವರ್‌ಗಳಲ್ಲಿ 123 ರನ್ ಕಲೆ ಹಾಕಿ, ಉತ್ತಮ ಆರಂಭ ಒದಗಿಸಿತು.ವಿಂಡೀಸ್ ಎದುರಿನ ಮೊದಲ ಪಂದ್ಯದಲ್ಲಿ ಹಾಗೂ ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ದೆಹಲಿಯ ಧವನ್ ಈ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಉಳಿಸಿಕೊಂಡರು. ಆದರೆ, ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾಗಿದ್ದು ಕೊಹ್ಲಿ ಅಮೋಘ ಆಟ.ಕೊಹ್ಲಿ ಬಲ: ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 11 ಹಾಗೂ 2 ರನ್ ಮಾತ್ರ ಗಳಿಸಿದ್ದ ನಾಯಕ ಕೊಹ್ಲಿ `ಮಾಡು ಇಲ್ಲವೇ ಮಡಿ' ಹೋರಾಟದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರು. 83 ಎಸೆತಗಳನ್ನು ಎದುರಿಸಿದ ಈ ಬಲಗೈ ಬ್ಯಾಟ್ಸ್‌ಮನ್ 13 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 102 ರನ್ ಗಳಿಸಿದರು.40 ಓವರ್‌ಗಳಲ್ಲಿ 210 ರನ್ ಗಳಿಸಿದ್ದ ಭಾರತ ಕೊಹ್ಲಿಯ `ವಿರಾಟ' ಆಟದ ಬಲದಿಂದ ಕೊನೆಯ ಹತ್ತು ಓವರ್‌ಗಳಲ್ಲಿ 101 ರನ್ ಕಲೆ ಹಾಕಿತು. 48ನೇ ಓವರ್ ಬೌಲಿಂಗ್ ಮಾಡಿದ ಡ್ವೇನ್ ಬ್ರಾವೊ ಅವರ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸರ್ ಸಿಡಿಸಿದರೆ, ಅರ್. ಅಶ್ವಿನ್ (ಔಟಾಗದೆ 25) ನಾಲ್ಕು ಹಾಗೂ ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಈ ಓವರ್‌ನಲ್ಲಿ ಒಟ್ಟು 17 ರನ್‌ಗಳು ಬಂದವು. ಇದರಿಂದ ಭಾರತಕ್ಕೆ 300ಕ್ಕಿಂತಲೂ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು.ಜಯ ಅನಿವಾರ್ಯ: ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಪಡೆದಿರುವ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ತ್ರಿಕೋನ ಸರಣಿಯ ಫೈನಲ್ ಪ್ರವೇಶಿಸುವ ಸ್ಪರ್ಧಾ ಕಣದಲ್ಲಿ ಕೊಹ್ಲಿ ಬಳಗ ಉಳಿಯಬೇಕಾದರೆ, ವಿಂಡೀಸ್ ತಂಡವನ್ನು ಮಣಿಸಲೇಬೇಕು.ಸಂಕ್ಷಿಪ್ತ ಸ್ಕೋರು: ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 311. (ರೋಹಿತ್ ಶರ್ಮ 46, ಶಿಖರ್ ಧವನ್ 69, ವಿರಾಟ್ ಕೊಹ್ಲಿ 102, ಸುರೇಶ್ ರೈನಾ 10, ದಿನೇಶ್ ಕಾರ್ತಿಕ್ 6, ಮುರಳಿ ವಿಜಯ್ 27, ಆರ್. ಅಶ್ವಿನ್ ಔಟಾಗದೆ 25; ಕೆಮರ್ ರೋಚ್ 69ಕ್ಕೆ1, ಟಿನೊ ಬೆಸ್ಟ್ 51ಕ್ಕೆ2, ಮರ್ಲಾನ್ ಸ್ಯಾಮುಯೆಲ್ಸ್ 39ಕ್ಕೆ1, ಕೀರನ್ ಪೊಲಾರ್ಡ್ 21ಕ್ಕೆ1.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.