ಶನಿವಾರ, ಫೆಬ್ರವರಿ 27, 2021
31 °C
ಹಾಕಿ: ಇಂದು ಐರ್ಲೆಂಡ್‌ ಜತೆ ಪೈಪೋಟಿ

ಭಾರತಕ್ಕೆ ಭರ್ಜರಿ ಆರಂಭದ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಭರ್ಜರಿ ಆರಂಭದ ನಿರೀಕ್ಷೆ

ರಿಯೊ ಡಿ ಜನೈರೊ: ಮೂರೂವರೆ ದಶಕದಿಂದ ಪದಕದ ಬರ ಎದುರಿಸುತ್ತಿರುವ ಭಾರತ ಹಾಕಿ ತಂಡ ಹೊಸ ಕನಸು, ನಿರೀಕ್ಷೆಯೊಂದಿಗೆ ರಿಯೊ ಒಲಿಂಪಿಕ್ಸ್‌ ಕೂಟದಲ್ಲಿ ಶನಿವಾರ ತನ್ನ ಅಭಿಯಾನ ಆರಂಭಿಸಲಿದೆ.ಎಂಟು ಬಾರಿ ಚಿನ್ನ ಗೆದ್ದಿರುವ ಭಾರತ ಪುರುಷರ ತಂಡ ಡಿಯೊ ಡೊರೊ ಒಲಿಂಪಿಕ್‌ ಹಾಕಿ ಕ್ರೀಡಾಂಗಣ ದಲ್ಲಿ ನಡೆಯಲಿರುವ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ನ ಸವಾಲನ್ನು ಎದುರಿಸಲಿದೆ.1980ರ ಮಾಸ್ಕೊ ಒಲಿಂಪಿಕ್‌ ಕೂಟದಲ್ಲಿ ಭಾರತ ಕೊನೆಯದಾಗಿ ಚಿನ್ನ ಗೆದ್ದಿತ್ತು. ಆ ಬಳಿಕ ಭಾರತ ಹಾಕಿ ತಂಡಕ್ಕೆ ಪದಕ ಮರೀಚಿಕೆಯಾಗಿಯೇ ಉಳಿದು ಕೊಂಡಿದೆ.ಮಾಸ್ಕೊ ಒಲಿಂಪಿಕ್ಸ್‌ ಬಳಿಕ ಭಾರತ ತಂಡ ವೈಫಲ್ಯ ಅನುಭವಿಸಿದ್ದೇ ಹೆಚ್ಚು. ಎಂಟು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್‌ ಕೂಟಕ್ಕೆ ಅರ್ಹತೆ ಪಡೆಯುವಲ್ಲೇ ವಿಫಲವಾಗಿತ್ತು. 2012 ರ ಲಂಡನ್‌ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದ ತಂಡ ಕೊನೆಯ ಸ್ಥಾನ ಪಡೆದುಕೊಂಡಿತ್ತು.ಹಾಲಿ ಚಾಂಪಿಯನ್‌ ಜರ್ಮನಿ, ರನ್ನರ್‌ ಅಪ್‌ ನೆದರ್ಲೆಂಡ್ಸ್‌ ಮತ್ತು ಪಾನ್‌ ಅಮೆರಿಕಾ ವಲಯದ ಪ್ರಮುಖ ತಂಡಗಳಾದ ಅರ್ಜೆಂಟೀನಾ ಮತ್ತು ಕೆನಡಾ ದೇಶಗಳು ‘ಬಿ’ ಗುಂಪಿನಲ್ಲಿ ಭಾರ ತದ ಜತೆಗೆ ಸ್ಥಾನ ಪಡೆದುಕೊಂಡಿವೆ. ಆದ್ದರಿಂದ ಐರ್ಲೆಂಡ್‌ ವಿರುದ್ಧ ಭರ್ಜರಿ ಗೆಲುವು ಪಡೆದು ಇನ್ನುಳಿದ ಪಂದ್ಯಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳು ವುದು ಪಿ.ಆರ್‌. ಶ್ರೀಜೇಶ್‌ ನೇತೃತ್ವದ ಭಾರತ ತಂಡದ ಗುರಿ.ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ನಲ್ಲಿ ಆಡುತ್ತಿರುವ ಐರ್ಲೆಂಡ್‌ ತಂಡ ವನ್ನು ಹಗುರವಾಗಿ ಕಾಣಲು ಭಾರತ ಸಿದ್ಧವಿಲ್ಲ. ಐರ್ಲೆಂಡ್‌ ತಂಡ ಯುರೋಪಿಯನ್‌ ಚಾಂಪಿಯನ್‌ಷಿಪ್‌ ನಲ್ಲಿ ಬ್ರಿಟನ್‌ ಮತ್ತು ಬೆಲ್ಜಿಯಂ ದೇಶಗಳನ್ನು ಹಿಂದಿಕ್ಕಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ವಿಶ್ವ ಹಾಕಿ ಲೀಗ್‌್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಮಲೇಷ್ಯಾ ತಂಡ ಗಳನ್ನು ಮಣಿಸಿತ್ತು. ಆದ್ದರಿಂದ ಶನಿ ವಾರದ ಪಂದ್ಯದಲ್ಲಿ ಆರಂಭದಲ್ಲೇ ಗೋಲು ಗಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರುವುದು ಭಾರತದ ಲೆಕ್ಕಾಚಾರ.ಉಪನಾಯಕ ಎಸ್‌.ವಿ. ಸುನಿಲ್‌ ಮತ್ತು ಮಾಜಿ ನಾಯಕ ಸರ್ದಾರ್‌ ಸಿಂಗ್‌ ಅವರು ಎದುರಾಳಿ ತಂಡಕ್ಕೆ ತಲೆನೋವು ಉಂಟುಮಾಡಬಲ್ಲರು. ಸರ್ದಾರ್‌ ಹಳೆಯ ಫಾರ್ಮ್‌ನಲ್ಲಿಲ್ಲದಿದ್ದರೂ, ಅವರ ಅಪಾರ ಅನುಭವ ತಂಡದ ನೆರವಿಗೆ ಬರಲಿದೆ. ವಿ.ಆರ್‌. ರಘುನಾಥ್‌, ಕೊತಜಿತ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ರಕ್ಷಣಾ ವಿಭಾಗಕ್ಕೆ ಬಲ ತುಂಬಲಿದ್ದಾರೆ. ನಾಯಕ ಶ್ರೀಜೇಶ್‌ ಗೋಲುಪೆಟ್ಟಿಗೆ ಬಳಿ ಎಂದಿನಂತೆ ಚಮತ್ಕಾರ ತೋರಿದರೆ, ಐರ್ಲೆಂಡ್‌ಗೆ ಗೋಲು ಗಳಿಸುವುದು ಸುಲಭವಲ್ಲ.‘ಲಂಡನ್‌ ಒಲಿಂಪಿಕ್ಸ್‌ನಲ್ಲಿ 12ನೇ ಸ್ಥಾನ ಪಡೆದಿದ್ದೆವು. ಅದನ್ನು ಉತ್ತಮ ಪಡಿಸಿಕೊಳ್ಳುವುದು ನಮ್ಮ ಗುರಿ’ ಎಂದು ಕೋಚ್‌ ರೋಲಂಟ್‌ ಓಲ್ಟಮನ್ಸ್‌ ಹೇಳಿದ್ದಾರೆ.ಮಹಿಳಾ ತಂಡಕ್ಕೆ ಜಪಾನ್‌ ಸವಾಲು: ಭಾರತ ಮಹಿಳಾ ತಂಡದವರು ಭಾನು ವಾರ ನಡೆಯಲಿರುವ ಮೊದಲ ಪಂದ್ಯ ದಲ್ಲಿ ಜಪಾನ್‌್ ತಂಡದ ಸವಾಲನ್ನು ಎದುರಿಸಲಿದ್ದಾರೆ. ಭಾರತದ ಮಹಿಳೆಯರು 36 ವರ್ಷಗಳ ಬಿಡುವಿನ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ವಿಶ್ವ ಹಾಕಿ ಲೀಗ್‌ ಟೂರ್ನಿಯಲ್ಲಿ ಜಪಾನ್‌ ತಂಡವನ್ನು ಮಣಿಸಿ ಭಾರತ ಒಲಿಂ ಪಿಕ್ಸ್‌ಗೆ ಅವಕಾಶ ಪಡೆದುಕೊಂಡಿತ್ತು. ಇದೀಗ ಮೊದಲ ಪಂದ್ಯದಲ್ಲಿ ಅದೇ ಎದುರಾಳಿಗಳ ವಿರುದ್ಧ ಪೈಪೋಟಿ ನಡೆಸಲಿದೆ.

ಹಾಕಿ ಆಟಗಾರರಿಗೆ ಹೊಸ ಕಿಟ್‌

ನವದೆಹಲಿ (ಪಿಟಿಐ): ರಿಯೊ ಒಲಿಂ ಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರ ತದ ಕ್ರೀಡಾಪಟುಗಳಿಗೆ ಎದು ರಾಗಿರುವ ಎಲ್ಲ ಸಮಸ್ಯೆಗಳು ಶೀಘ್ರ ದಲ್ಲೇ ಬಗೆಹರಿಯಲಿವೆ ಎಂದು ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಹೇಳಿದ್ದಾರೆ. ಸೂಕ್ತ ಅಳತೆಯ ಜರ್ಸಿ ಇಲ್ಲ ಎಂಬ ಕಾರಣ ಹಾಕಿ ಆಟಗಾರರು ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಾಕಿ ತಂಡಕ್ಕೆ ಹೊಸ ಕಿಟ್‌ ಕಳುಹಿಸಲಾಗು ವುದು’ ಎಂದಿದ್ದಾರೆ.‘ಹಾಕಿ ತಂಡದ ಕೆಲವು ಆಟಗಾರ ರಿಗೆ ಸೂಕ್ತ ಅಳತೆಯ ಜರ್ಸಿ ಸಿಕ್ಕಿಲ್ಲ ಎಂಬ ದೂರು ಬಂದಿದೆ. ತಂಡ ಬ್ರೆಜಿಲ್‌ಗೆ ತೆರಳುವ ವೇಳೆ ಕಿಟ್‌ ಕೊಟ್ಟಿದ್ದೆವು. ಇದೀಗ  ಹಾಕಿ ಇಂಡಿಯಾ ಹೊಸ ಕಿಟ್‌ ಕಳುಹಿಸಲಿದೆ’ ಎಂದು ಹೇಳಿದ್ದಾರೆ.‘ಶನಿವಾರ ಐರ್ಲೆಂಡ್‌ ವಿರುದ್ಧ ಪಂದ್ಯವಿರುವ ಕಾರಣ ಭಾರತದ ಆಟಗಾರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್‌ ಬಾತ್ರ ಶುಕ್ರವಾರ ಹೇಳಿದ್ದರು.  ಆದರೆ ಜರ್ಸಿ ಇಲ್ಲದ ಕಾರಣ ಪಾಲ್ಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿದ್ದವು.

‘ಭಾರತದ ಸ್ಪರ್ಧಿಗಳು ತಂಗಿರುವ ಕೊಠಡಿಗಳಲ್ಲಿ ಟಿ.ವಿ. ಮತ್ತು ಪೀಠೋಪಕರಣ ಇಲ್ಲ ಎಂಬ ದೂರುಗಳು ಬಂದಿದ್ದವು. ಕ್ರೀಡಾಪಟುಗಳಿಗೆ ಎಲ್ಲ ಸೌಲಭ್ಯ  ಮತ್ತು ಮೂಲಸೌಕರ್ಯ ಒದಗಿಸಿಕೊಡುವುದು  ಸಂಘಟಕರ ಜವಾಬ್ದಾರಿ’ ಎಂದು  ಹೇಳಿದ್ದಾರೆ.

ಭಾರತ–ಐರ್ಲೆಂಡ್‌

ಶನಿವಾರ

ಆರಂಭ: ರಾತ್ರಿ 7.30

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.