ಭಾರತಕ್ಕೆ ಭೇಟಿ ನೀಡಲು ಸೂ ಕಿಗೆ ಪ್ರಧಾನಿ ಆಹ್ವಾನ

7

ಭಾರತಕ್ಕೆ ಭೇಟಿ ನೀಡಲು ಸೂ ಕಿಗೆ ಪ್ರಧಾನಿ ಆಹ್ವಾನ

Published:
Updated:
ಭಾರತಕ್ಕೆ ಭೇಟಿ ನೀಡಲು ಸೂ ಕಿಗೆ ಪ್ರಧಾನಿ ಆಹ್ವಾನ

ಯಾಂಗೂನ್ (ಪಿಟಿಐ): ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಡುತ್ತಿರುವ, ಆ ರಾಷ್ಟ್ರದ ವಿರೋಧ ಪಕ್ಷದ ನಾಯಕಿಯೂ ಆದ ಆಂಗ್ ಸಾನ್ ಸೂ ಕಿ ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಇಲ್ಲಿ ಭೇಟಿ ಮಾಡಿದರು. ಭಾರತಕ್ಕೆ ಭೇಟಿ ನೀಡುವಂತೆ ಅವರಿಗೆ ಆಹ್ವಾನವನ್ನೂ ನೀಡಿದರು.

ಜವಾಹರಲಾಲ್ ನೆಹರೂ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸುವಂತೆ  ಸೂಕಿ ಅವರಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿರುವ ಆಹ್ವಾನ ಪತ್ರವನ್ನು ಮುಖತಃ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೂ ಕಿ, `ಭಾರತಕ್ಕೆ ಶೀಘ್ರದಲ್ಲೇ ಭೇಟಿ ನೀಡುವೆ, ವಿಳಂಬ ಮಾಡುವುದಿಲ್ಲ~ ಎಂದರು.

ಸೂ ಕಿ ಅವರನ್ನು ಇಲ್ಲಿನ ಸೆಡೊನಿಯಾ ಹೋಟೆಲ್‌ನಲ್ಲಿ ಭೇಟಿ ಮಾಡಿದ ಪ್ರಧಾನಿ ಸಿಂಗ್, ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ತಾವು ಮತ್ತು ತಮ್ಮ ತಂದೆ- ತಾಯಿ ಭಾರತದೊಂದಿಗೆ ಹೊಂದಿದ್ದ ಸಂಬಂಧ ಮತ್ತು ಪಂಡಿತ್ ನೆಹರೂ ಹಾಗೂ ಅವರ ಕುಟುಂಬದವರ ಜೊತೆಗಿನ ಒಡನಾಟವನ್ನು ಸೂ ಕಿ ನೆನಪಿಸಿಕೊಂಡರು.

ಸೂ ಕಿ ಅವರು 1960ರ ದಶಕದಲ್ಲಿ ನವದೆಹಲಿಯ ಜೀಸಸ್ ಮತ್ತು ಮೇರಿ ಕಾನ್ವೆಂಟ್, ಲೇಡಿ ಶ್ರೀರಾಂ ಕಾಲೇಜ್‌ಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಆ ಸಮಯದಲ್ಲಿ ಸೂ ಕಿ ಅವರ ತಾಯಿ ಭಾರತದಲ್ಲಿ ರಾಯಭಾರಿಯಾಗಿದ್ದರು.

`ಭಾರತ ಮತ್ತು ಬರ್ಮಾ (ಮ್ಯಾನ್ಮಾರ್‌ನ ಹಿಂದಿನ ಹೆಸರು) ಗಡಿ ಹಂಚಿಕೊಂಡಿರುವ ಕಾರಣಕ್ಕೆ ಮಾತ್ರ ಮಿತ್ರ ದೇಶಗಳಲ್ಲ. ಪರಸ್ಪರ ಗೌರವಿಸುವಂತಹ ಮೌಲ್ಯಗಳು, ಪರಂಪರೆ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಈ ಕಾರಣಗಳಿಗೂ ಆತ್ಮೀಯ ಸಂಬಂಧ ಹೊಂದಿರುವ ರಾಷ್ಟ್ರಗಳು~ ಎಂದು ಸೂ ಕಿ ಹೇಳಿದರು.

`ಪ್ರಧಾನಿಯವರು ತಮ್ಮ ಬಿಡುವಿಲ್ಲದ ಪ್ರವಾಸದ ಕಾರ್ಯಕ್ರಮಗಳ ನಡುವೆಯೂ ನನ್ನನ್ನು ಭೇಟಿಯಾಗಲು ರಂಗೂನ್‌ಗೆ (ಯಾಂಗೂನ್) ಬಂದಿದ್ದಾರೆ. ಇದು ಅತ್ಯಂತ ಗೌರವ ಮತ್ತು ಸಂತಸದ ಸಮಯ. ಇದಕ್ಕಾಗಿ ನಾನು ಅವರಿಗೆ ಆಭಾರಿ~ ಎಂದರು.

ಬ್ಯಾಂಕಾಕ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಭಾಗವಹಿಸಲು ತೆರಳಬೇಕಿದ್ದ ಸೂ ಕಿ, ಸಿಂಗ್ ಅವರನ್ನು ಭೇಟಿ ಮಾಡುವುದಕ್ಕಾಗಿಯೇ ಬ್ಯಾಂಕಾಕ್‌ಗೆ ಹೊರಡುವ ಸಮಯವನ್ನು ಕೆಲವು ಕಾಲ ಮುಂದೂಡಿದರು. 24 ವರ್ಷಗಳ ನಂತರ ಸೂ ಕಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ.

`ಶಾಂತಿ ಮತ್ತು ಸ್ಥಿರತೆಯ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ನೆಲೆಸಬೇಕು ಎಂಬುದು ನಮ್ಮ ಗುರಿ~ ಎಂದ ಸೂ ಕಿ, `ಭಾರತ- ಮ್ಯಾನ್ಮಾರ್‌ಗಳು ಪರಸ್ಪರ ಅರಿತುಕೊಳ್ಳುವ ವಿಷಯ ಬಹಳಷ್ಟಿದೆ. ಮಿತ್ರ ರಾಷ್ಟ್ರಗಳು ಎಂದರೆ ಎರಡೂ ರಾಷ್ಟ್ರಗಳ ಜನರ ನಡುವಿನ ಸ್ನೇಹವೇ ಆಗಿದೆ~ ಎಂದರು.

ಭೇಟಿ ವೇಳೆ ಮೊದಲು ಮಾತು ಆರಂಭಿಸಿದ ಪ್ರಧಾನಿ ಸಿಂಗ್, `ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನೀವು(ಸೂ ಕಿ) ಮಾಡುತ್ತಿರುವ ಹೋರಾಟ ಮತ್ತು ಈ ನಿಟ್ಟಿನಲ್ಲಿ ನಿಮ್ಮ ನಿಲುವು ಅಭಿನಂದನೀಯ. ನಿಮ್ಮ ಹೋರಾಟ ವಿಶ್ವದ ಕೋಟಿಗಟ್ಟಲೆ ಜನರಿಗೆ ಸ್ಫೂರ್ತಿ ನೀಡಿದೆ~ ಎಂದರು.

`ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಲವಾದ ನಂಬಿಕೆಯುಳ್ಳ ನೀವು ಭಾರತದಲ್ಲಿ ಬಹುಕಾಲ ಇದ್ದು, ಒಡನಾಟ ಹೊಂದಿರುವಿರಿ ಎಂಬುದು ನಮಗೆ (ಭಾರತಕ್ಕೆ) ಗೌರವ ಸೂಚಕ~ ಎಂದರು.

ಸೂ ಕಿ ಅವರಿಗೆ ಭಾರತ ಸರ್ಕಾರ ಶಾಂತಿ ಮತ್ತು ಅಂತರರಾಷ್ಟ್ರೀಯ ಸಾಮರಸ್ಯಕ್ಕಾಗಿ ನೀಡುವ `ಜವಾಹರಲಾಲ್ ನೆಹರೂ~ ಪ್ರಶಸ್ತಿಯನ್ನು 1993ರಲ್ಲೇ ಘೋಷಿಸಿದೆ. ಆದರೆ, ಸೂ ಕಿ  ಇದನ್ನು ಈವರೆಗೂ ಸ್ವೀಕರಿಸಲು ಆಗಿಲ್ಲ. ಮ್ಯಾನ್ಮಾರ್ ಸೇನಾ ಆಡಳಿತವು ಸೂ ಕಿ ಅವರನ್ನು 1988ರಿಂದ ಕಳೆದ ವರ್ಷದವರೆಗೂ ಗೃಹ ಬಂಧನದಲ್ಲಿ ಇರಿಸಿತ್ತು.

ಬಹಾದ್ದೂರ್ ಷಾ ಜಾಫರ್ ಸ್ಮಾರಕಕ್ಕೆ ಪ್ರಧಾನಿ ಭೇಟಿ

ಯಾಂಗೂನ್‌ನಲ್ಲಿರುವ ಬಹಾದ್ದೂರ್ ಷಾ ಜಾಫರ್ ಸ್ಮಾರಕಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಭೇಟಿ ನೀಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್, ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಜೊತೆಗಿದ್ದರು. ಜಾಫರ್ ಭಾರತವನ್ನು ಆಳಿದ ಕೊನೆಯ ಮೊಗಲ್ ದೊರೆ.

ಸಿಂಗ್ ಭೇಟಿ: ಮಹತ್ವ ನೀಡದ ಚೀನಾ 

(ಐಎಎನ್‌ಎಸ್ ವರದಿ): ಭಾರತದ ಪ್ರಧಾನಿಯೊಬ್ಬರು 25 ವರ್ಷಗಳ ಬಳಿಕ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದರೂ ಚೀನಾ ಅದಕ್ಕೆ ಅಷ್ಟೇನು ಮಹತ್ವ ನೀಡಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ವರದಿ ಮಾಡಿದೆ.

`ಸಿಂಗ್ ಅವರ ಈ ಭೇಟಿಯನ್ನು ಚೀನಾ ಮಹತ್ವಪೂರ್ಣವೆಂದು ಪರಿಗಣಿಸಿಲ್ಲ~ ಎಂದು `ಗ್ಲೋಬಲ್ ಟೈಮ್ಸ~  ಸಂಪಾದಕೀಯದಲ್ಲಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry