ಗುರುವಾರ , ಏಪ್ರಿಲ್ 15, 2021
27 °C

ಭಾರತಕ್ಕೆ ಮತ್ತೊಂದು ಗೆಲುವಿನ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಳ್ಳೆಕೆಲೆ, ಶ್ರೀಲಂಕಾ (ಪಿಟಿಐ): ಈಗಾಗಲೇ ಸರಣಿ ಗೆಲುವಿನ ಮುನ್ನಡೆ ಪಡೆದಿರುವ ಭಾರತ ತಂಡ ಶನಿವಾರ ಇಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ.ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ರ ಗೆಲುವಿನ ಮುನ್ನಡೆ ಪಡೆದುಕೊಂಡಿದೆ. ಈ ಕಾರಣ ಯಾವುದೇ ಒತ್ತಡವಿಲ್ಲದೆ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸರಣಿಯನ್ನು 4-1 ರಲ್ಲಿ ಗೆಲ್ಲುವುದು ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತದ ಗುರಿ.ಎರಡನೆ ಏಕದಿನ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳ ಸೋಲು ಅನುಭವಿಸಿತ್ತು. ಅದನ್ನು ಹೊರತುಪಡಿಸಿ ಉಳಿದ ಮೂರೂ ಪಂದ್ಯಗಳಲ್ಲಿ `ಮಹಿ~ ಬಳಗ ಅಧಿಕಾರಯುತ ಪ್ರದರ್ಶನ ನೀಡಿದೆ. ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ಸೋಲಿನ ಅಂತರವನ್ನು 2-3ಕ್ಕೆ ತಗ್ಗಿಸುವುದು ಮಾಹೇಲ ಜಯವರ್ಧನೆ ತಂಡದ ಲೆಕ್ಕಾಚಾರ.ಭಾರತ ಈ ಪಂದ್ಯದಲ್ಲಿ ಕೆಲವೊಂದು ಪ್ರಯೋಗಗಳಿಗೆ ಮುಂದಾದರೂ ಅಚ್ಚರಿಯಿಲ್ಲ. ಇದುವರೆಗೆ ಅವಕಾಶ ಲಭಿಸದ ಕೆಲವು ಆಟಗಾರರು ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು. ಈಗಾಗಲೇ ಎರಡು ಶತಕ ಗಳಿಸಿರುವ ವಿರಾಟ್ ಕೊಹ್ಲಿ ಭಾರತದ ಬ್ಯಾಟಿಂಗ್‌ನ ಬಲ ಎನಿಸಿಕೊಂಡಿದ್ದಾರೆ.ಬೌಲರ್‌ಗಳೂ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಮನೋಜ್ ತಿವಾರಿ ಒಳಗೊಂಡಂತೆ `ಪಾರ್ಟ್ ಟೈಮ್~ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ತಿವಾರಿ ನಾಲ್ಕು ವಿಕೆಟ್ ತಮ್ಮದಾಗಿಸಿಕೊಂಡಿದ್ದರು.ಶ್ರೀಲಂಕಾ ತಂಡ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ. ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕುಮಾರ ಸಂಗಕ್ಕಾರ 133 ರನ್ ಗಳಿಸಿದ್ದನ್ನು ಬಿಟ್ಟರೆ, ಇತರ ಯಾರಿಂದಲೂ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಆದರೆ ಸಂಗಕ್ಕಾರ ಗಾಯಗೊಂಡದ್ದು ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಪೇರಿಸಲು ವಿಫಲವಾದ ಕಾರಣ ತಂಡದ ಯೋಜನೆಗಳು ತಲೆಕೆಳಗಾಗುತ್ತಿವೆ.ನಾಯಕ ಜಯವರ್ಧನೆ ಕೂಡಾ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಯುವ ಬ್ಯಾಟ್ಸ್‌ಮನ್ ದಿನೇಶ್ ಚಂಡಿಮಾಲ್ ಅವರಿಗೆ ಹೆಚ್ಚಿನ ಅವಕಾಶ ಸಿಗಲಿ ಎಂಬ ಕಾರಣದಿಂದ ಮಾಹೇಲ ಈ ಹಿಂದಿನ ಪಂದ್ಯಗಳಲ್ಲಿ ಕೆಳಗಿನ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ್ದರು. ಆದರೆ ಈ ಯೋಜನೆ `ಕ್ಲಿಕ್~ ಆಗಿಲ್ಲ. ಆತ್ಮವಿಶ್ವಾಸದಲ್ಲಿರುವ ಭಾರತ ತಂಡವನ್ನು ಸೋಲಿಸಬೇಕಾದರೆ ಲಂಕಾ ತಂಡ ಅಸಾಮಾನ್ಯ ಪ್ರದರ್ಶನ ನೀಡಬೇಕಿದೆ.

ಪಂದ್ಯದ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.