ಭಾರತಕ್ಕೆ ಮತ್ತೊಂದು ಗೆಲುವಿನ ರಸದೂಟ

7
ಅಂಧರ ಟಿ-20 ವಿಶ್ವಕಪ್: ಅಜಯ್ ವಿಶ್ವದಾಖಲೆಯ ಆಟ

ಭಾರತಕ್ಕೆ ಮತ್ತೊಂದು ಗೆಲುವಿನ ರಸದೂಟ

Published:
Updated:

ಬೆಂಗಳೂರು: ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡರೂ ಎದೆಗುಂದದೆ ದಿಟ್ಟ ಆಟವಾಡಿದ ಭಾರತ ತಂಡದವರು ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‌ಗಳ ಭರ್ಜರಿ ಗೆಲುವು ಪಡೆದರು.

ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ, ಅಜಯ್ ರೆಡ್ಡಿ (131ರನ್, 48ಎಸೆತ, 27ಬೌಂಡರಿ) ಹಾಗೂ ಭಾರತ ತಂಡದ ನಾಯಕ ಕನ್ನಡಿಗ ಶೇಖರ್ ನಾಯ್ಕ (ಔಟಾಗದೆ 134, 58ಎಸೆತ) ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 325 ರನ್‌ಗಳ ಸವಾಲಿನ ಗುರಿ ಇಂಗ್ಲೆಂಡ್ ತಂಡದ ಮುಂದಿಟ್ಟತು.

ಭಾರತದ ಬಲಿಷ್ಠ ಬೌಲಿಂಗ್ ಎದುರು ಇಂಗ್ಲೆಂಡ್ ತಂಡಕ್ಕೆ ಈ ಗುರಿ ಭಾರಿ ಕಷ್ಟ ಎನಿಸಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಉಪನಾಯಕ ಅಜಯ್ ಬೌಲಿಂಗ್‌ನಲ್ಲೂ ತಮ್ಮ  ಕೈ ಚಳಕ ತೋರಿದರು. ಪ್ರಮುಖ ಎರಡು ವಿಕೆಟ್‌ಗಳನ್ನು ಪಡೆದ ಆಂಧ್ರಪ್ರದೇಶದ ಈ ಆಟಗಾರ ಇಂಗ್ಲೆಂಡ್ ತಂಡವನ್ನು 200 ರನ್ ಒಳಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಇದರಿಂದ ಭಾರತ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಆಸ್ಟ್ರೇಲಿಯಾ ವಿರುದ್ಧ ಜಯ ಪಡೆದಿತ್ತು. ಕೇವಲ 34 ಎಸೆತಗಳಲ್ಲಿ ಶತಕ ಗಳಿಸಿದ ಅಜಯ್ ಟಿ-20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ದಾಖಲೆ ಮಾಡಿದರು.

ದಿನದ ಇತರ ಪಂದ್ಯಗಳಲ್ಲಿ ಶ್ರೀಲಂಕಾ ತಂಡ ನೇಪಾಳ ವಿರುದ್ಧವೂ, ಪಾಕಿಸ್ತಾನ ತಂಡದವರು ದಕ್ಷಿಣ ಆಫ್ರಿಕಾದ ಮೇಲೂ, ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧವೂ ಜಯ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 325 (ಕೇತನ್ ಪಟೇಲ್ 20, ಅಜಯ್ ರೆಡ್ಡಿ 131, ಶೇಖರ್ ನಾಯ್ಕ 134. ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151. (ಲುಕೆ ಸಗ್ 48, ಹಸನ್ ಖಾನ್ 32; ಅಜಯ್ ರೆಡ್ಡಿ 17ಕ್ಕೆ2, ಸುಭಾಷ್ ಬೊಯಾ 35ಕ್ಕೆ2. ಫಲಿತಾಂಶ:     ಭಾರತಕ್ಕೆ 174 ರನ್ ಗೆಲುವು. ಪಂದ್ಯಶ್ರೇಷ್ಠ: ಅಜಯ್ ರೆಡ್ಡಿ.

ಶ್ರೀಲಂಕಾ 20 ಓವರ್‌ಗಳಲ್ಲಿ 314ಕ್ಕೆ3. (ರವೀಂದ್ರ 134, ದೇಶಪ್ರಿಯ 75; ಅಮರ್ 55ಕ್ಕೆ1, ಸೂರ್ಯಪ್ರಸಾದ್ 48ಕ್ಕೆ1) ನೇಪಾಳ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 (ರುವಾನ್ ಕರುಣತಿಲಕ್ 28ಕ್ಕೆ1, ಸುಲೋಚನ ಗುಣವರ್ಧನೆ 10ಕ್ಕೆ1). ಫಲಿತಾಂಶ: ಶ್ರೀಲಂಕಾಕ್ಕೆ 177 ರನ್ ಜಯ.

ಪಾಕಿಸ್ತಾನ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 358. (ಮಹಮ್ಮದ್ ಜೊಹಿಬ್ 156, ಮಹಮ್ಮದ್ ಜಾಫರ್ 82, ಮಹಮ್ಮದ್ ಅಕ್ರಮ್ 69). ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 116. ಫಲಿತಾಂಶ: ಪಾಕಿಸ್ತಾನಕ್ಕೆ 242 ರನ್ ವಿಜಯ.

ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 239. (ಜಾರ್ಜ್ ಸ್ಟುವರ್ಟ್ 27; ರೈಮಂಡ್ ಮೊಕ್ಸಲೆ 38ಕ್ಕೆ3). ವೆಸ್ಟ್ ಇಂಡೀಸ್ 16.5 ಓವರ್‌ಗಳಲ್ಲಿ 174. ಫಲಿತಾಂಶ: ಆಸ್ಟ್ರೇಲಿಯಾಕ್ಕೆ 65 ರನ್ ಜಯ.

ಮೂರು ಗಂಟೆಯಲ್ಲಿ ಅಳಿಸಿ ಹೋದ ವಿಶ್ವದಾಖಲೆ

ಶತಕ ಗಳಿಸುವಲ್ಲಿ ವಿಶ್ವದಾಖಲೆ ಮೂಡಿಬಂದು ಕೇವಲ ಮೂರು ಗಂಟೆಯಲ್ಲಿ ಅಳಿಸಿ ಹೋದ ವಿಶೇಷ ಕ್ಷಣಕ್ಕೆ ಅಂಧರ ಟಿ-20 ವಿಶ್ವಕಪ್‌ನ ಸೋಮವಾರದ ಪಂದ್ಯಗಳು ಸಾಕ್ಷಿಯಾದವು.

ನೆಲಮಂಗಲದ ಬಳಿಯಿರುವ ಆದಿತ್ಯ ಗ್ಲೋಬಲ್ ಶಾಲಾ ಮೈದಾನದಲ್ಲಿ ಬೆಳಿಗ್ಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡದ ಮಹಮ್ಮದ್ ಜೊಹಿಬ್ ಕೇವಲ 36 ಎಸೆತಗಳಲ್ಲಿ ಶತಕ ಗಳಿಸಿ  ವಿಶ್ವದಾಖಲೆ ಮಾಡಿದ್ದರು. ಇದು ಟಿ-20ಯಲ್ಲಿ ದಾಖಲಾದ ವೇಗದ ಶತಕವಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಭಾರತದ ಅಜಯ್ ಕೇವಲ 34 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಜೊಹಿಬ್ ದಾಖಲೆ ಅಳಿಸಿ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry