ಭಾರತಕ್ಕೆ ಮತ್ತೊಂದು ಗೆಲುವು

7
ಚಾಂಪಿಯನ್ಸ್ ಟ್ರೋಫಿ ಹಾಕಿ: ಜರ್ಮನಿಗೆ ಆಘಾತ

ಭಾರತಕ್ಕೆ ಮತ್ತೊಂದು ಗೆಲುವು

Published:
Updated:

ಮೆಲ್ಬರ್ನ್ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಇಲ್ಲಿ ನಡೆಯುತ್ತಿರುವ 34ನೇ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್ ತಂಡವನ್ನು 4-2 ಗೋಲುಗಳಿಂದ ಮಣಿಸಿತು.ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಗೆಲುವು ಸಾಧಿಸಿತ್ತು. ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ `ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು ಎಂಟು ತಂಡಗಳು ಪಾಲ್ಗೊಂಡಿರುವ ಈ ಟೂರ್ನಿಯಲ್ಲಿ ಭಾರತ ಸತತ ಎರಡು ಗೆಲುವು ಪಡೆದ ಏಕೈಕ ತಂಡವಾಗಿದೆ. ಈ ಮೂಲಕ ಒಟ್ಟು ಆರು ಅಂಕ ಕಲೆ ಹಾಕಿದೆ.ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯದ ಭಾರತ ಈ ಪಂದ್ಯದಲ್ಲಿ ಆರಂಭದಿಂದಲೇ ವೇಗದ ಆಟಕ್ಕೆ ಮುಂದಾಯಿತು. ಭಾರತದ ಆಕಾಶ್‌ದೀಪ್ ಸಿಂಗ್ ಹತ್ತನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ,  ಗುರ್ವಿಂದರ್ ಸಿಂಗ್ ಚಾಂಡಿ 14ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿದರು. ಇದಕ್ಕೂ ಮುನ್ನ ನ್ಯೂಜಿಲೆಂಡ್ ಮೂರನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಮುನ್ನಡೆ ಸಾಧಿಸಿತ್ತು.ವಿ.ಆರ್. ರಘುನಾಥ್ 25ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ಸು ಕಂಡರು.  ಆದರೆ, ಭಾರತದ ವೇಗದ ಆಟಕ್ಕೆ ಅಷ್ಟೇ ಚುರುಕಾಗಿ ತಿರುಗೇಟು ನೀಡಿದ ನ್ಯೂಜಿಲೆಂಡ್ ತಂಡದ ನಿಕೊಲಸ್ ವಿಲ್ಸನ್ 37ನೇ ನಿಮಿಷದಲ್ಲಿ ಒಂದು ಗೋಲು ತಂದಿತ್ತು ಮುನ್ನಡೆಯನ್ನು 3-2ಕ್ಕೆ ತಗ್ಗಿಸಿದರು.ಉಭಯ ತಂಡಗಳು ಸಮಬಲವಾಗಿ ಪೈಪೋಟಿ ನೀಡುತ್ತಿದ್ದಾಗ, ಭಾರತ ಕೊನೆಯಲ್ಲಿ ಚುರುಕಿನ ಆಟ ಪ್ರದರ್ಶಿಸಿತು. 65ನೇ ನಿಮಿಷದಲ್ಲಿ ಗೋಲು ಕಲೆ ಹಾಕಿದ ದಾನಿಷ್ ಮುಜ್ತಬಾ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜರ್ಮನಿ ಎದುರು ಮಂಗಳವಾರ ಭಾರತ ಪೈಪೋಟಿ ನಡೆಸಲಿದೆ. ಜರ್ಮನಿ ಎದುರು ಗೆಲುವು ಸಾಧ್ಯವಾದರೆ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.ಇಂಗ್ಲೆಂಡ್‌ಗೆ ಜಯ: ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಎರಡನೇ ಪಂದ್ಯದಲ್ಲಿ ಭರ್ಜರಿ ಚೇತರಿಕೆ ಪ್ರದರ್ಶನ ನೀಡಿತು. ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜರ್ಮನಿ ತಂಡವನ್ನು 4-1ಗೋಲುಗಳಿಂದ ಸೋಲಿಸಿ ಅಚ್ಚರಿಗೆ ಕಾರಣವಾಯಿತು. ಆಸ್ಟ್ರೇಲಿಯಾ ಹಾಗೂ ಹಾಲೆಂಡ್ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು ಗೋಲು ರಹಿತ ಡ್ರಾದಲ್ಲಿ ಅಂತ್ಯಕಂಡಿತು. ಪಾಕಿಸ್ತಾನ 2-0ರಲ್ಲಿ ಬೆಲ್ಜಿಯಂ ಎದುರು ಗೆಲುವು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry