ಸೋಮವಾರ, ಮಾರ್ಚ್ 27, 2023
22 °C
ಕ್ರಿಕೆಟ್‌: ಪ್ರವಾಸಿ ತಂಡದ ಬಿಗಿ ದಾಳಿ, ಕಣದಲ್ಲಿ ಕರ್ನಾಟಕದ ನಾಲ್ವರು ಆಟಗಾರರು

ಭಾರತಕ್ಕೆ ರಾಹುಲ್‌–ಪೂಜಾರ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ರಾಹುಲ್‌–ಪೂಜಾರ ಆಸರೆ

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿದ ಭಾರತ ‘ಎ’ ತಂಡಕ್ಕೆ ಕರ್ನಾಟಕದ ಕೆ.ಎಲ್‌.ರಾಹುಲ್‌ ಆಸರೆಯಾದರು. ಇದರಿಂದ ಆತಿಥೇಯ ತಂಡ ಆಸ್ಟ್ರೇಲಿಯಾ ‘ಎ’ ಎದುರು ಆರಂಭವಾದ ನಾಲ್ಕು ದಿನಗಳ ‘ಟೆಸ್ಟ್‌’ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿದೆ.



ಎಂ.ಎ. ಚಿದಂಬರಂ ಕ್ರೀಡಾಂಗಣ ದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಚೇತೇಶ್ವರ ಪೂಜಾರ ನಾಯಕತ್ವದ ಭಾರತ ‘ಎ’ ತಂಡ ಮೊದಲ ದಿನದಾಟದ ಅಂತ್ಯಕ್ಕೆ 77.1 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 221 ರನ್‌ಗಳಿಸಿದೆ.



ಮಳೆ ಅಡ್ಡಿಪಡಿಸಿದ ಕಾರಣ ಪೂರ್ಣ ದಿನದಾಟ ನಡೆಯಲಿಲ್ಲ. ಮೈದಾನ ಒದ್ದೆಯಾಗಿದ್ದರಿಂದ ಭಾರತ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಬೇಕಾಯಿತು. ಇದರ ಲಾಭಪಡೆದ ಕಾಂಗರೂಗಳ ನಾಡಿನ ತಂಡ ಆತಿಥೇಯರ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು.



ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್ ಜೂನಿಯರ್ ತಂಡದ ಕೋಚ್‌ ಆದ ಬಳಿಕ  ತಂಡ ಆಡುತ್ತಿರುವ ಮೊದಲ ಟೂರ್ನಿ ಇದಾಗಿದೆ.  ಚೈತನ್ಯದ ಚಿಲುಮೆ ಎನಿಸಿರುವ ದ್ರಾವಿಡ್‌ ಮಾರ್ಗದರ್ಶನ ದಲ್ಲಿ ಆಟಗಾರರು ಹಲವು ದಿನಗಳಿಂದ ಇಲ್ಲಿ ಅಭ್ಯಾಸ ನಡೆಸಿದ್ದರು. ಆದರೂ, ಭಾರತ ‘ಎ’ ತಂಡಕ್ಕೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ.



ಕೆ.ಎಲ್. ರಾಹುಲ್‌ ಜೊತೆ ಇನಿಂಗ್ಸ್ ಆರಂಭಿಸಿದ ಅಭಿನವ್‌ ಮುಕುಂದ್‌ 9 ರನ್ ಗಳಿಸಿ ಔಟಾದರು. ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ಪೂಜಾರ ಅರ್ಧಶತಕ ಗಳಿಸಿ ಆಸರೆಯಾದರು. 185 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ಮನ್‌ ರಾಹುಲ್ 14 ಬೌಂಡರಿ ಸೇರಿದಂತೆ 96 ರನ್ ಗಳಿಸಿದರು.



ಶತಕಕ್ಕೆ ನಾಲ್ಕು ರನ್‌ ಅಗತ್ಯವಿದ್ದಾಗ ಸೀನ್‌ ಅಬಾಟ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಮಿಡ್‌ ಆನ್‌ನಲ್ಲಿದ್ದ ಎದುರಾಳಿ ತಂಡದ ನಾಯಕ ಉಸ್ಮಾನ್‌ ಕ್ವಾಜಾ ಕೈಗೆ ಕ್ಯಾಚ್ ನೀಡಿದರು. ಸೌರಾಷ್ಟ್ರದ ಪೂಜಾರ 122 ಎಸೆತಗಳಲ್ಲಿ ಏಳು ಬೌಂಡರಿ ಒಳಗೊಂಡಂತೆ 55 ರನ್‌ ಬಾರಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ  38 ಓವರ್‌ಗಳಲ್ಲಿ 107 ರನ್ ಕಲೆ ಹಾಕಿತು.



ಪೂಜಾರ ಔಟಾದ ಬಳಿಕವೂ ಭಾರತ ‘ಎ’ ತಂಡದ ಪರದಾಟ ತಪ್ಪಲಿಲ್ಲ. ಕರ್ನಾಟಕದ ಇನ್ನೊಬ್ಬ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್ ಸೊನ್ನೆ ಸುತ್ತಿದರೆ, ಮಧ್ಯಪ್ರದೇಶದ ನಮನ್‌ ಓಜಾ 10 ರನ್ ಗಳಿಸಿ ಔಟಾದರು. ಐಪಿಎಲ್‌ನಲ್ಲಿ ಗಮನಾರ್ಹ ಸಾಮರ್ಥ್ಯ ನೀಡಿದ್ದ ಮುಂಬೈನ ಶ್ರೇಯಸ್ ಅಯ್ಯರ್‌ (39, 58ಎಸೆತ, 7 ಬೌಂಡರಿ) ರಾಹುಲ್‌ ಆಟಕ್ಕೆ ನೆರವಾದರು. 



ಈ ಜೋಡಿ ನಾಲ್ಕನೇ ವಿಕೆಟ್‌ಗೆ 55 ರನ್‌ ಗಳಿಸಿ ಮತ್ತೆ ಚೇತರಿಕೆ ನೀಡಿತು. ದಿನದಾಟದ ಕೊನೆಯಲ್ಲಿ ಭಾರತ ‘ಎ’ ತಂಡ ರನ್ ಗಳಿಸಲು ಪ್ರಯಾಸ ಪಡಬೇಕಾಯಿತು. ಕೊನೆಯ ಏಳು ರನ್‌ ಗಳಿಸುವ ಅಂತರದಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದು ಇದಕ್ಕೆ ಸಾಕ್ಷಿ. 



ಆಸ್ಟ್ರೇಲಿಯಾ ‘ಎ’ ಎದುರಿನ ಸರಣಿಗೆ ಕರ್ನಾಟಕದ ನಾಲ್ವರು ಆಟಗಾರರು ತಂಡದಲ್ಲಿದ್ದಾರೆ. ಶ್ರೇಯಸ್‌ ಗೋಪಾಲ್ ಹೊರತು ಪಡಿಸಿ ಮೂವರು ಆಟಗಾರರು ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಆ್ಯಂಡ್ರ್ಯೂ ಫಿಕೆಟ್‌ ಮತ್ತು ಸ್ಟೀವ್‌ ಓಕೆಫಿ ತಲಾ ಎರಡು ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು.

*

ಸ್ಕೋರ್‌ಕಾರ್ಡ್‌

ಭಾರತ ‘ಎ’  6ಕ್ಕೆ 221  (77.1 ಓವರ್‌ಗಳಲ್ಲಿ)

ಕೆ.ಎಲ್‌. ರಾಹುಲ್‌ ಸಿ ಉಸ್ಮಾನ್‌ ಕ್ವಾಜಾ ಬಿ ಸೀನ್‌ ಅಬಾಟ್‌  96

ಅಭಿನವ್‌ ಮುಕುಂದ್‌ ಬಿ ಆ್ಯಂಡ್ರ್ಯೂ ಫಿಕೆಟ್‌  09

ಚೇತೇಶ್ವರ ಪೂಜಾರ ಸಿ ಉಸ್ಮಾನ್‌ ಕ್ವಾಜಾ ಬಿ ಆ್ಯಂಡ್ರ್ಯೂ ಫಿಕೆಟ್‌  55

ಕರುಣ್‌ ನಾಯರ್‌ ಸಿ ಮಾರ್ಕಸ್‌ ಸ್ಟೋಯಿನಿಸ್‌ ಬಿ ಸ್ಟೀವ್‌ ಓಕೆಫಿ  00

ಶ್ರೇಯಸ್ ಅಯ್ಯರ್‌ ಬಿ ಗುರೀಂದರ್‌ ಸಂಧು  39

ನಮನ್ ಓಜಾ ಸಿ ಗುರೀಂದರ್‌ ಸಂಧು ಬಿ ಸ್ಟೀವ್‌ ಓಕೆಫಿ  10

ವಿಜಯ್‌ ಶಂಕರ್‌ ಬ್ಯಾಟಿಂಗ್‌  04

ಅಮಿತ್‌ ಮಿಶ್ರಾ ಬ್ಯಾಟಿಂಗ್‌  00

ಇತರೆ: (ಬೈ–4, ನೋ ಬಾಲ್‌–4)  08

ವಿಕೆಟ್‌ ಪತನ: 1–20 (ಮುಕುಂದ್‌; 1.5), 2–127  (ಪೂಜಾರ; 39.5), 3–132 (ಕರುಣ್‌; 44.4), 4–187 (ಐಯ್ಯರ್; 61.1), 5–214 (ರಾಹುಲ್‌; 66.5), 6–221 (ನಮನ್‌; 76.6).

ಬೌಲಿಂಗ್‌:  ಗುರೀಂದರ್‌ ಸಂಧು 16–5–53–1, ಆ್ಯಂಡ್ರ್ಯೂ ಫಿಕೆಟ್‌ 17–6–38–2, ಸೀನ್‌ ಅಬಾಟ್‌ 14–4–23–1, ಸ್ಟೀವ್‌ ಓಕೆಫಿ 19–4–66–2, ಮಾರ್ಕಸ್‌ ಸ್ಟೋಯಿನಿಸ್‌ 10–3–37–0, ಟ್ರಾವಿಸ್ ಹೆಡ್ 1.1–1–0–0.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.