ಭಾರತಕ್ಕೆ ಹೀನಾಯ ಸೋಲು

ಬುಧವಾರ, ಜೂಲೈ 17, 2019
25 °C
ತ್ರಿಕೋನ ಏಕದಿನ ಸರಣಿ

ಭಾರತಕ್ಕೆ ಹೀನಾಯ ಸೋಲು

Published:
Updated:

ಕಿಂಗ್‌ಸ್ಟನ್: ತ್ರಿಕೋನ ಏಕದಿನ ಸರಣಿಯಲ್ಲಿ ಮಂಗಳವಾರ ಭಾರತ ಮತ್ತು ಶ್ರೀಲಂಕಾ ಮಧ್ಯೆ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು 161 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದರಿಂದಾಗಿ ಭಾರತ ತಂಡವು ತ್ರಿಕೋನ ಸರಣಿಯಲ್ಲಿ ಆಡಿದ ಎರಡೂ ಪಂದ್ಯದಲ್ಲೂ ಸೋತಂತಾಗಿದೆ.ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ 348ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು 44.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 187ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ರವೀಂದ್ರ ಜಡೇಜಾ ಗಳಿಸಿದ 49 (62 ಎಸೆತ) ರನ್ ಅತ್ಯಧಿಕ ಮೊತ್ತ.ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಲಂಕನ್ನರಿಗೆ ಬ್ಯಾಟಿಂಗ್  ನಡೆಸುವಂತೆ ಆಹ್ವಾನಿಸಿದರು. ಆದರೆ ಲಂಕಾದ ಆರಂಭಿಕ ಜೋಡಿ ಉತ್ತಮ ಜತೆಯಾಟ ಪ್ರದರ್ಶಿಸಿತು. ಭಾರತದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಉಪುಲ್ ತರಂಗ (ಔಟಾಗದೆ 174) ಮತ್ತು ಮಾಹೇಲ ಜಯವರ್ಧನೆ (107) ಸಿಡಿಸಿದರು. ಮೊದಲ ವಿಕೆಟ್‌ಗೆ 38.4 ಓವರ್‌ಗಳಲ್ಲಿ 213 ರನ್ ಕಲೆಹಾಕಿದರು.

ಜಯವರ್ಧನೆ ಔಟಾದ ಬಳಿಕ ಬಂದ ನಾಯಕ ಮ್ಯಾಥ್ಯೂಸ್ 29 ಎಸೆತಗಳಲ್ಲಿ 44 ರನ್ ಗಳಿಸಿದರು. 50 ಓವರ್ ಗಳನ್ನೂ ಆಡಿದ ಲಂಕಾ ತಂಡ ಭಾರತದ ಗೆಲುವಿಗೆ 348 ರನ್ ಗಳ ಸವಾಲು ನೀಡಿತು.

ಗೆಲುವಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಲಂಕಾದ ಬೌಲರ್ ಗಳು ಚೇತರಿಸಿಕೊಳ್ಳಲು ಅವಕಾಶವೇ ನೀಡಲಿಲ್ಲ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (5) ಮತ್ತು ಶಿಖರ್ ಧವನ್ (24) ಜೋಡಿ ಉತ್ತಮ ಆರಂಭ ಪಡೆಯವಲ್ಲಿ ವಿಫಲರಾದರು.ಬಳಿಕ ಬಂದ ಮುರಳಿ ವಿಜಯ್ (30) ಕೊಹ್ಲಿ (2) ಕಾರ್ತಿಕ್ (22) ರೈನಾ (33) ಸಹ ತಂಡಕ್ಕೆ ಆಸರೆಯಾಗಲಿಲ್ಲ. ಈ ಹಂತದಲ್ಲಿ ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರವೀಂದ್ರ ಜಡೇಜಾ (ಅಜೇಯ 49 ರನ್ 62 ಎಸೆತ) ಏಕಾಂಗಿಯಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು. 187ರನ್ ಗೆ ಭಾರತ ತನ್ನೆಲ್ಲಾ ವಿಕೆಟ್ ಒಪ್ಪಿಸಿತು.ಉತ್ತಮ ದಾಳಿ ನಡೆಸಿದ ಹೆರಾತ್ 3, ಮಲಿಂಗಾ ಮತ್ತು ಸೇನಾನಾಯಕ್ ತಲಾ 2 ವಿಕೆಟ್ ಪಡೆದರು. ಕುಲಶೇಕರ ಮತ್ತು ಮ್ಯಾಥ್ಯೂಸ್ ತಲಾ ಒಂದು ವಿಕೆಟ್ ಪಡೆದರು.

ಪಂದ್ಯ ಶ್ರೇಷ್ಠ : ಉಪುಲ್ ತರಂಗ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry