ಭಾರತಕ್ಕೆ 6 ಲಕ್ಷ ಕೋಟಿಗೂ ಹೆಚ್ಚು ನಷ್ಟ!

7

ಭಾರತಕ್ಕೆ 6 ಲಕ್ಷ ಕೋಟಿಗೂ ಹೆಚ್ಚು ನಷ್ಟ!

Published:
Updated:

ವಾಷಿಂಗ್ಟನ್(ಪಿಟಿಐ/ಐಎಎನ್‌ಎಸ್): `ಕಪ್ಪು ಹಣದ ಹಾವಳಿಯಿಂದ ಭಾರತವು ದಶಕದಲ್ಲಿ 123 ಶತಕೋಟಿ ಡಾಲರ್ (ರೂ 6,76,500 ಕೋಟಿ ) ನಷ್ಟ ಅನುಭವಿಸಿದೆ' ಎಂಬ ಆತಂಕಕಾರಿ ಅಂಶವನ್ನು ಅಮೆರಿಕ ಮೂಲದ `ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ' ಸಂಸ್ಥೆಯ ವರದಿ ತಿಳಿಸಿದೆ.ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 2001ರಿಂದ 2010ರ ಅವಧಿಯಲ್ಲಿ ನಡೆದ ಅಕ್ರಮ ಹಣಕಾಸು ವಹಿವಾಟಿನ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ. ಕಪ್ಪು ಹಣದ ಪಿಡುಗಿನ ರಾಷ್ಟ್ರಗಳಲ್ಲಿ ಭಾರತ 8ನೇ ಸ್ಥಾನದಲ್ಲಿದೆ ಎಂದೂ ಇದರಲ್ಲಿ ತಿಳಿಸಲಾಗಿದೆ.ಕಪ್ಪುಹಣದಿಂದ ನಷ್ಟಕ್ಕೀಡಾಗಿರುವ 20 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಷ್ಯಾ ಖಂಡದ ಏಕೈಕ ರಾಷ್ಟ್ರವಾಗಿರುವ ಭಾರತವು, 2010ರಲ್ಲಿ 1.6 ಶತಕೋಟಿ ಡಾಲರ್ ಕಳೆದುಕೊಂಡಿದ್ದು, ಚೀನಾ, ಮೆಕ್ಸಿಕೊ, ಮಲೇಷ್ಯಾ, ಸೌದಿ ಅರೇಬಿಯಾ, ರಷ್ಯ, ಫಿಲಿಪ್ಪೀನ್ಸ್ ಮತ್ತು ನೈಜೀರಿಯಾದಂತಹ ರಾಷ್ಟ್ರಗಳಿಗಿಂತಲೂ ಹೆಚ್ಚು ಆರ್ಥಿಕ ನಷ್ಟ ಅನುಭವಿಸಿದೆ.`ಭಾರತದ ಸಂಪತ್ತು ಕಪ್ಪು ಹಣದ ಮೂಲಕ ಹರಿದುಹೋಗುತ್ತಿದ್ದು, ಆ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಆತಂಕ ಎದುರಾಗಿದೆ' ಎಂದು ಸಂಸ್ಥೆಯ ನಿರ್ದೇಶಕ ರೇಮಂಡ್ ಬೇಕರ್ ಅಭಿಪ್ರಾಯಪಟ್ಟಿದ್ದಾರೆ. `ಈಗಾಗಲೇ ಕೈತಪ್ಪಿ ಹೋಗಿರುವ ಮತ್ತು ವಿದೇಶಗಳಲ್ಲಿರುವ ಕಪ್ಪು ಹಣದ ಬಗ್ಗೆ ಮಾತ್ರ ಭಾರತೀಯ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲುತ್ತಿವೆ. ತೆರಿಗೆ ವಂಚಿಸಿ ವಿದೇಶ ಸೇರುವ ಕಪ್ಪು ಹಣದ ಹರಿವನ್ನು ತಡೆಗಟ್ಟುವ ಬಗ್ಗೆ ಚರ್ಚಿಸುತ್ತಿಲ್ಲ. ಅಲ್ಲಿನ ಸರ್ಕಾರಗಳೂ ಈ ಕುರಿತು ಗಂಭೀರ ಚಿಂತನೆ ನಡೆಸುತ್ತಿಲ್ಲ' ಎಂದೂ ಅವರು ದೂರಿದ್ದಾರೆ.ಆ ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಹೋಲಿಸಿದರೆ 123 ಶತಕೋಟಿ ಡಾಲರ್ ದೊಡ್ಡ ಮೊತ್ತವಾಗಿದೆ. ಈ ಹಣವನ್ನು ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಬಹುದಿತ್ತು ಎಂದು ಬೇಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯವರೆಗೆ ಅಂದರೆ 1948ರಿಂದ 2008ರ ಅವಧಿಯಲ್ಲಿ ಭಾರತದ ಬೊಕ್ಕಸಕ್ಕೆ ಸುಮಾರು 462 ಶತಕೋಟಿ ಡಾಲರ್ (25,41,000 ಕೋಟಿ ರೂಪಾಯಿ) ಹಾನಿಯಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry