ಭಾನುವಾರ, ಮೇ 16, 2021
28 °C
ನವಾಜ್ ಷರೀಫ್ ವಿದೇಶಾಂಗ ನೀತಿ ಅನಾವರಣ

ಭಾರತದತ್ತ ಸ್ನೇಹ ಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಭಾರತದೊಂದಿಗಿನ ಎಲ್ಲ ವಿವಾದಾತ್ಮಕ ವಿಷಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಬದ್ಧ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸ್ಪಷ್ಟಪಡಿಸಿದ್ದಾರೆ.ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ವಿದೇಶಾಂಗ ನೀತಿಯ ನೀಲನಕ್ಷೆ ಅನಾವರಣ ಮಾಡಿರುವ ಷರೀಫ್, `ನೆರೆ ದೇಶಗಳೊಂದಿಗಿನ ಮೈತ್ರಿ ಬಗ್ಗೆ ತಕ್ಷಣ ಗಮನ ಕೊಡಬೇಕು' ಎಂದು ಎಲ್ಲ ರಾಜತಾಂತ್ರಿಕರಿಗೆ ಸಂದೇಶ               ರವಾನಿಸಿದ್ದಾರೆ.` ಏಷ್ಯಾ ವಲಯದಲ್ಲಿ ಶಾಂತಿ ಹಾಗೂ ಸ್ಥಿರತೆ ನೆಲೆಸದಿದ್ದರೆ ನಾವು ಅಭಿವೃದ್ಧಿ ಸಾಧಿಸುವುದು ಅಸಾಧ್ಯ' ಎಂದಿರುವ ಅವರು, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಚುನಾವಣೆಗೆ ಮುನ್ನವೇ ಷರೀಫ್ ಅವರು ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಪ್ರಯತ್ನಿಸುವುದಾಗಿ ಹೇಳಿದ್ದರು. ಅದರಲ್ಲೂ ಮುಖ್ಯವಾಗಿ ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಮರುಚಾಲನೆ ನೀಡುವುದಾಗಿಯೂ ಭರವಸೆ ನೀಡಿದ್ದರು.ಸ್ಥಿರ ಸರ್ಕಾರ ಹಾಗೂ ಆಫ್ಘಾನಿಸ್ತಾನದಲ್ಲಿ ಶಾಂತಿ ಮೂಡಿಸಲು ಪ್ರಾದೇಶಿಕವಾಗಿ ಒಮ್ಮತ ಮೂಡಿಸಬೇಕಾದ ಅಗತ್ಯವನ್ನೂ ಅವರು ರಾಯಭಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಅಮೆರಿಕದೊಂದಿಗಿನ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್ತಾ, `ಎರಡೂ ದೇಶಗಳ ನಡುವೆ ಸಮಾನ ಆಸಕ್ತಿಗಳು ಸಾಕಷ್ಟಿವೆ. ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ.` ಸೌದಿ ಅರೇಬಿಯಾ, ಟರ್ಕಿ ಹಾಗೂ ಇರಾನ್ ನಮ್ಮ ಮಿತ್ರ ರಾಷ್ಟ್ರಗಳು. ಇನ್ನು ಚೀನಾ ಬಗ್ಗೆ ಹೇಳುವುದಾದರೆ ಅದು ನಮಗೆ ಅತ್ಯಂತ ಆಪ್ತವಾದ ದೇಶ' ಎಂದೂ ಅವರು ಬಣ್ಣಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.