ಭಾರತದಲ್ಲಿನ ಪಂದ್ಯಗಳಲ್ಲಿ ಆಡಲು ಭಯವಿಲ್ಲ: ಶಾಹೀದ್ ಆಫ್ರಿದಿ

7

ಭಾರತದಲ್ಲಿನ ಪಂದ್ಯಗಳಲ್ಲಿ ಆಡಲು ಭಯವಿಲ್ಲ: ಶಾಹೀದ್ ಆಫ್ರಿದಿ

Published:
Updated:
ಭಾರತದಲ್ಲಿನ ಪಂದ್ಯಗಳಲ್ಲಿ ಆಡಲು ಭಯವಿಲ್ಲ: ಶಾಹೀದ್ ಆಫ್ರಿದಿ

ಲಾಹೋರ್ (ಪಿಟಿಐ): ಒತ್ತಡವನ್ನು ನಿವಾರಿಸಿಕೊಂಡು ಆಡುವಂಥ ಸತ್ವವುಳ್ಳ ಕ್ರಿಕೆಟಿಗರು ತಮ್ಮ ತಂಡದಲ್ಲಿದ್ದಾರೆಂದು ಭರವಸೆಯಿಂದ ನುಡಿದಿರುವ ಪಾಕಿಸ್ತಾನ ತಂಡದ ನಾಯಕ ಶಾಹೀದ್ ಆಫ್ರಿದಿ ‘ಭಾರತದಲ್ಲಿನ ಪಂದ್ಯಗಳಲ್ಲಿ ಆಡಲು ಭಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಬಹಳಷ್ಟು ಸಮಯದಿಂದ ಆಡಿಲ್ಲ; ಹಾಗೆಂದು ಅಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡುವುದು ಕಷ್ಟವಾಗುತ್ತದೆಂದು ವಿಶ್ಲೇಷಣೆ ಮಾಡುವುದು ಖಂಡಿತ ತಪ್ಪು. ನನ್ನ ಅಭಿಪ್ರಾಯದಲ್ಲಿ ಯಾವುದೇ ಸಮಸ್ಯೆ ಇಲ್ಲದೆಯೇ ಪ್ರತಿಯೊಂದು ಪಂದ್ಯದಲ್ಲಿ ವಿಶ್ವಾಸದಿಂದ ಮುನ್ನುಗ್ಗುತ್ತೇವೆ ಎಂದು ಆಫ್ರಿದಿ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಫೆಬ್ರುವರಿ 19ರಿಂದ ಆರಂಭವಾಗಲಿರುವ ವಿಶ್ವಕಪ್‌ನ ನಾಕ್‌ಔಟ್ ಪಂದ್ಯಗಳನ್ನು ಭಾರತದಲ್ಲಿ ಆಡಬೇಕಾದ ಪರಿಸ್ಥಿತಿ ಬಂದರೆ ಅದಕ್ಕೆ ಸಜ್ಜಾಗಿದ್ದೇವೆ ಎಂದ ಅವರು ‘ಭಾರತದಲ್ಲಿನ ಪ್ರೇಕ್ಷಕರ ಎದುರು ಆಡುವುದು ಸುಲಭವಲ್ಲ ಎನ್ನುವ ಅಭಿಪ್ರಾಯ ಸಹಜವಾಗಿಯೇ ಎಲ್ಲ ತಂಡಗಳಲ್ಲಿದೆ. ಆದರೆ ನಮಗೆ ಅಂಥ ವ್ಯತ್ಯಾಸವೇನು ಅನಿಸದು. ಪಾಕ್‌ನಲ್ಲಿ ಆಡಿದಂತೆಯೇ ಅನಿಸುತ್ತದೆ’ ಎಂದು ನುಡಿದರು.

ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಸುಧಾರಣೆಗೆ ಕ್ರಿಕೆಟ್ ಒಳ್ಳೆಯ ಮಾರ್ಗ. ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೋ ಒಂದು ಹಂತದಲ್ಲಿ ಉಭಯ ತಂಡಗಳು ಎದುರಾಗುತ್ತವೆಂದು ಆಶಿಸುತ್ತೇನೆ. ಮುಂಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿಯೇ ಮುಖಾಮುಖಿ ಆಗಬೇಕೆಂದು ನಾನು ಬಯಸುತ್ತೇನೆ. ಅದಕ್ಕಿಂತ ಅದ್ಭುತವಾದ ಪಂದ್ಯದ ಇನ್ನೊಂದಿರದು ಎಂದು ಅವರು ಹೇಳಿದರು.

ಮುಂಬೈ ಮೇಲೆ ಭಯೋತ್ಪಾದಕ ದಾಳಿ ಘಟನೆ ನಂತರ ಉಭಯ ದೇಶಗಳ ನಡುವಣ ಕ್ರಿಕೆಟ್ ಸಂಬಂಧದ ಕೊಂಡಿಯೇ ಕಳಚಿಕೊಂಡಿದೆ. ಆದರೆ ವಿಶ್ವಕಪ್‌ನಲ್ಲಿ ಮತ್ತೆ ಎರಡೂ ತಂಡಗಳು ಎದುರಾಗಬೇಕು ಎನ್ನುವುದು ಆಫ್ರಿದಿ ಆಶಯ.

‘ಆ ಒಂದು ಘಟನೆಯ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ. ಅವುಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಎರಡೂ ತಂಡಗಳು ಆಡಬೇಕು. ಹಿಂದೆಯೂ ರಾಜಕೀಯ ಸಂಬಂಧವು ಬಿಗಡಾಯಿಸಿದ್ದಾಗಲೇ ಅಲ್ಲಿಗೆ ಹೋಗಿ ಆಡಿದ್ದೆವು. ಈಗಲೂ ಅದೇ ಮನೋಸ್ಥಿತಿಯೊಂದಿಗೆ ಆಟದ ಕಡೆಗೆ ಮಾತ್ರ ಗಮನ ನೀಡುವುದು ನಮ್ಮ ತಂಡದ ಉದ್ದೇಶ. ದೊಡ್ಡದೊಂದು ಟೂರ್ನಿಯಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯುವತ್ತ ಚಿತ್ತವನ್ನು ಕೇಂದ್ರೀಕರಿಸಿದ್ದೇವೆ’ ಎಂದು ವಿವರಿಸಿದರು.

ವಿಶ್ವಕಪ್‌ಗೆ ಪಾಕ್ ತಂಡದ ನಾಯಕನನ್ನು ನೇಮಕ ಮಾಡುವಲ್ಲಿ ವಿಳಂಬವಾಗಿದ್ದು ಗೊಂದಲಗೊಳಿಸಲಿಲ್ಲವೆ ಎಂದು ಪ್ರಶ್ನಿಸಿದ್ದಕ್ಕೆ ‘ನಾನು ನ್ಯೂಜಿಲೆಂಡ್‌ನಲ್ಲಿ ಇದ್ದಾಗ ಈ ವಿಷಯವಾಗಿ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಆದರೆ ನಾನು ಆಟದತ್ತ ಮಾತ್ರ ಗಮನ ಕೊಟ್ಟಿದ್ದೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry