ಶುಕ್ರವಾರ, ಏಪ್ರಿಲ್ 16, 2021
31 °C

ಭಾರತದಲ್ಲಿ ಆಡಲು ಹಿಂಜರಿಕೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ‘ಪಾಕಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯ ತನ್ನ ನಾಕೌಟ್ ಹಂತದ ಪಂದ್ಯಗಳನ್ನು ಭಾರತೀಯ ನೆಲದಲ್ಲೂ ಆಡಲು ಸಿದ್ಧವಾಗಿರಬೇಕು ಎಂದು ಆ ತಂಡದ ಮಾಜಿ ನಾಯಕ ಇಮ್ರಾನ್ ಖಾನ್, ತಂಡದ ಹಾಲಿ ನಾಯಕ ಶಾಹೀದ್ ಅಫ್ರಿದಿಗೆ ಸಲಹೆ ಹೇಳಿದ್ದಾರೆ.‘ಕ್ವಾರ್ಟರ್‌ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ನಾವು ಎಲ್ಲಿ ಆಡಲು ಬಯಸಿದ್ದೇವೆ ಎಂಬುದನ್ನು ಬಹಿರಂಗವಾಗಿ ಚರ್ಚಿಸುವ ಅಗತ್ಯವಿಲ್ಲ’ ಎಂದೂ ಅವರು ಅಫ್ರಿದಿಗೆ ತಿಳಿಸಿದ್ದಾರೆ.‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ ಫೈನಲ್‌ಗಿಂತ ಮುಂಚೆ ಭಾರತದಲ್ಲಿ ಆಡುವ ಪ್ರಮೇಯ ಬರುವುದೇ ಇಲ್ಲ. ಆದ್ದರಿಂದ ಆಟಗಾರರು ಲೀಗ್‌ನ ಎಲ್ಲ ಪಂದ್ಯಗಳಲ್ಲಿ ಗೆಲ್ಲುವಂತಹ ಆಟ ಆಡಬೇಕು. ಇದರಿಂದ ಭಾರತದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡದಂತೆ ತಂಡ ತಪ್ಪಿಸಿಕೊಳ್ಳಬಹುದು’ ಎಂದು ಅಫ್ರಿದಿ ಈಚೆಗೆ ಹೇಳಿಕೆ ನೀಡಿದ್ದರು. ಶ್ರೀಲಂಕಾ ಇಲ್ಲವೆ ಬಾಂಗ್ಲಾದೇಶದಲ್ಲಿ ನಾಕೌಟ್ ಪಂದ್ಯಗಳನ್ನು ಆಡಲು ತಮ್ಮ ತಂಡ ಬಯಸುವುದಾಗಿಯೂ ಅವರು ತಿಳಿಸಿದ್ದರು.‘ತನ್ನ ಬದ್ಧ ಎದುರಾಳಿಯಾದ ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಿ, ಆ ಪಂದ್ಯ ಭಾರತೀಯ ನೆಲದಲ್ಲೇ ನಡೆದರೆ ಪಾಕಿಸ್ತಾನ ತಂಡಕ್ಕೆ ಅನುಕೂಲ’ ಎಂದು ಇಮ್ರಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.‘ಪಾಕಿಸ್ತಾನ ವಿರುದ್ಧ ತವರಿನಲ್ಲಿ ಆಡುವಾಗ ಭಾರತ ತಂಡದ ಮೇಲೇ ಅಧಿಕ ಒತ್ತಡವಿರುತ್ತದೆ. ಏಕೆಂದರೆ, ಮಾಮೂಲಿ ಪಂದ್ಯವಾದರೂ ಪಾಕ್ ವಿರುದ್ಧ ಆಡುವಾಗ ಜನರ ನಿರೀಕ್ಷೆ ಏನೆಂಬುದು ಆ ತಂಡದ ಆಟಗಾರರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಂತಹ ಸನ್ನಿವೇಶದಲ್ಲಿ ಇದಂತೂ ವಿಶ್ವಕಪ್ ಪಂದ್ಯ ಎಂಬುದನ್ನು ಮರೆಯುವ ಹಾಗಿಲ್ಲ’ ಎಂದು ಅವರು ಹೇಳಿದ್ದಾರೆ.‘ಅಫ್ರಿದಿ ಸ್ಥಾನದಲ್ಲಿ ನಾನೊಂದು ವೇಳೆ ಇದ್ದಿದ್ದರೆ ಭಾರತದ ವಿರುದ್ಧ ಅದರ ತವರಿನಲ್ಲಿಯೇ ತಂಡ ಆಡಲು ಉತ್ಸುಕವಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ಎದುರಾಳಿ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದೆ’ ಎಂದು ತಿಳಿಸಿದ್ದಾರೆ.‘ಎದುರಾಳಿ ಮೇಲೆ ಒತ್ತಡ ಹೇರಲು 1992ರ ವಿಶ್ವಕಪ್ ಟೂರ್ನಿ ಕಾಲಕ್ಕೆ ನಾನು ವಾಸಿಮ್ ಅಕ್ರಮ್‌ಗೆ ಸಾಧ್ಯವಾದಷ್ಟು ವೇಗದ ಎಸೆತಗಳನ್ನು ಹಾಕಬೇಕು. ವೈಡ್ ಅಥವಾ ನೋಬಾಲ್‌ಗಳ ಕುರಿತು ತಲೆಕೆಡಿಸಿಕೊಳ್ಳಬೇಡ ಎಂಬ ಸಲಹೆ ನೀಡಿದ್ದೇನೆ’ ಎಂದು ಮಾಧ್ಯಮದ ಮುಂದೆ ಹೇಳಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.‘ಮರುದಿನದ ಆಟಕ್ಕೆ ಸಿದ್ಧವಾದಾಗ ವಾಸಿಮ್ ಬಂದು ‘ಏನಿದೆಲ್ಲ?’ ಎಂದುೀಳಿದರು. ‘ನೀವು ಶಿಸ್ತುಬದ್ಧವಾಗಿ ಬೌಲ್ ಮಾಡಿ, ನಾನು ನೀಡಿದ ಹೇಳಿಕೆ ವಿರೋಧಿಗಳಿಗೆ ಮಾತ್ರ’ ಎಂದಿದ್ದೆ. ಎದುರಾಳಿಗಳ ಜೊತೆ ಸೆಣಸುವಾಗ ಇಂತಹ ಮಾನಸಿಕ ಆಟಗಳನ್ನೂ ಆಡಬೇಕಾಗುತ್ತದೆ’ ಎಂದು ಇಮ್ರಾನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.