ಭಾರತದಲ್ಲಿ ಗಾಲ್ಫ್ ಮೂಲಸೌಲಭ್ಯದ ಕನಸು

7

ಭಾರತದಲ್ಲಿ ಗಾಲ್ಫ್ ಮೂಲಸೌಲಭ್ಯದ ಕನಸು

Published:
Updated:
ಭಾರತದಲ್ಲಿ ಗಾಲ್ಫ್ ಮೂಲಸೌಲಭ್ಯದ ಕನಸು

`2016ರ ಒಲಿಂಪಿಕ್ಸ್‌ನಲ್ಲಿ ಗಾಲ್ಫ್ ಕ್ರೀಡೆಯೂ ಸೇರ್ಪಡೆಯಾಗಲಿದೆ. ಆಗ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮತ್ತು ಸರ್ಕಾರಗಳು ಈ ಆಟಕ್ಕೆ ಬೇಕಾದ ಮೂಲಸೌಲಭ್ಯದ ಅಭಿವೃದ್ಧಿಗೆ ಒತ್ತು ನೀಡುತ್ತವೆ. ಇದರಿಂದ ಆಟ ಇನ್ನಷ್ಟು ಜನಪ್ರಿಯಗೊಳ್ಳಲು ಸಾಧ್ಯವಿದೆ. ಬಹಳಷ್ಟು ಪ್ರತಿಭಾವಂತರು ಅರಳಲು ಅವಕಾಶವಾಗುತ್ತದೆ~

 ಭಾರತೀಯ ಗಾಲ್ಫ್ ಯೂನಿಯನ್ (ಐಜಿಯು) ಸದಸ್ಯ ರಯಾನ್ ಇರಾನಿಯವರ ಭರವಸೆಯ ಮಾತುಗಳಿವು.ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಐತಿಹಾಸಿಕ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್‌ಕೋರ್ಸ್‌ನಲ್ಲಿ ಮೇ 3ರಂದು ನಡೆದ ಭಾರತ ಸಬ್‌ಜೂನಿಯರ್, ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ಅವರೊಡನೆ ಮಾತಿಗಿಳಿದಾಗ ಭಾರತದಲ್ಲಿ ಗಾಲ್ಫ್ ಬೆಳವಣಿಗೆಯ ಕುರಿತು ಅವರು ತಮ್ಮ ಅನಿಸಿಕೆಗಳನ್ನು ಹರಿಯಬಿಟ್ಟರು.`ಭಾರತದಲ್ಲಿ ಸಾರ್ವಜನಿಕ ಸ್ವಾಮ್ಯದ ಗಾಲ್ಫ್‌ಕೋರ್ಸ್‌ಗಳ ಕೊರತೆಯಿದೆ. ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೋರ್ಸ್‌ಗಳಿವೆ. ಆದರೆ ಇಡೀ ಭಾರತದಲ್ಲಿ ಇರುವುದು ಕೇವಲ 200 ಮಾತ್ರ. ಸರ್ಕಾರಿ ಸ್ವಾಮ್ಯದ ಸೌಲಭ್ಯಗಳು ಅಭಿವೃದ್ಧಿಯಾದರೆ ಹೆಚ್ಚು ಜನರಿಗೆ ಅವಕಾಶ ಸಿಗುತ್ತದೆ.

 

ಐಜಿಯು ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಗಾಲ್ಫ್ ಅಕಾಡೆಮಿ ತರಬೇತಿ ಸೌಲಭ್ಯ, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುತ್ತಿದೆ. ಅಂತರರಾಷ್ಟ್ರೀಯಮಟ್ಟದಲ್ಲಿ ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ಅರ್ಜುನ್‌ಸಿಂಗ್ ಅಟ್ವಾಲ್, ಅನಿರ್ಬನ್ ಲಹರಿ, ಗಗನಜಿತ್ ಬುಲ್ಲರ್ ಪ್ರಮುಖರು~`ಗಾಲ್ಫ್  ಶ್ರೀಮಂತರ ಆಟ ಎನ್ನುವುದು ತಪ್ಪು ಕಲ್ಪನೆ. ಗ್ರಾಮೀಣ ಭಾಗದ ಮತ್ತು ಮಧ್ಯಮವರ್ಗದ ಕುಟುಂಬಗಳ ಮಕ್ಕಳು ಈಗ ಸಾಕಷ್ಟು ಸಂಖ್ಯೆಯಲ್ಲಿ ಆಡುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಗಾಲ್ಫ್ ಕಿಟ್ ಬೆಲೆ ಸ್ವಲ್ಪ ಹೆಚ್ಚು. ಆದರೆ ಬಹುತೇಕ ಕ್ಲಬ್‌ಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 25ರಷ್ಟು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ರಾಮೀಣ ಪರಿಸರದಿಂದ ಬಂದ ಚಿಕ್ಕರಂಗಪ್ಪ ಮತ್ತು  ರಶೀದ್‌ಖಾನ್ ಅವರ ಸಾಧನೆ ಇದಕ್ಕೆ ಸೂಕ್ತ ಉದಾಹರಣೆ~`ಟಾಟಾ ಸಂಸ್ಥೆಯು ತನ್ನ ಫುಟ್‌ಬಾಲ್ ಅಕಾಡೆಮಿ ಮಾದರಿಯಲ್ಲಿ ಗಾಲ್ಫ್ ಅಕಾಡೆಮಿಯನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ವಸತಿ ಶಾಲೆಯ ಮಾದರಿಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸುತ್ತದೆ. ವಿದ್ಯಾಭ್ಯಾಸ ಮತ್ತು ಗಾಲ್ಫ್ ತರಬೇತಿಗಳೆರಡಕ್ಕೂ ಅರ್ಹ ಪ್ರತಿಭಾವಂತ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಐಜಿಯು ಮುಂದಿನ ದಿನಗಳಲ್ಲಿ ಸೆಂಟ್ರಲ್ ಹ್ಯಾಂಡಿಕ್ಯಾಪಿಂಗ್ ಪದ್ಧತಿಜಾರಿಗೊಳಿಸಲಿದ್ದು, ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಖಚಿತ~`ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಗಾಲ್ಫ್ ಆಟಗಾರರಿಗೆ ಒಂದಿಷ್ಟು ರಿಯಾಯಿತಿ ಮತ್ತು ಕೋಟಾ ಲಭ್ಯವಾಗುತ್ತಿದೆ. ಆದರೆ ಆಟಗಾರರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಬಗ್ಗೆ ಹೆಚ್ಚಿನ ಚಿಂತನೆ ನಡೆದಿಲ್ಲ.ನಮ್ಮ ಉದ್ದೇಶ ಏನೆಂದರೆ ಆಟದಿಂದ ಆಟಗಾರನಿಗೆ ಉತ್ತಮ ಆದಾಯ ಬರಬೇಕು. ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಆಟಗಾರನಿಗೆ ಬ್ಯಾಂಕ್‌ಗಳು ಮತ್ತಿತರ ಸಂಸ್ಥೆಗಳು ಉದ್ಯೋಗ ನೀಡುತ್ತಿದ್ದವು. ಆದರೆ ಈಗಿನ ಕ್ರಿಕೆಟಿಗರ ಗುರಿ ನೌಕರಿಯ ಬದಲು ಐಪಿಎಲ್ ಆಗುತ್ತಿದೆ.

 

ಅಲ್ಲಿ ಅವರ ಜೀವನಕ್ಕೆ ಬೇಕಾಗುವಷ್ಟು ಹಣ ಸಿಗುತ್ತದೆ. ಅದೇ ರೀತಿ  ಗಾಲ್ಫ್‌ನಲ್ಲಿಯೂ ವೃತ್ತಿಪರ ವಿಭಾಗದಲ್ಲಿ ಉತ್ತಮ ಅವಕಾಶಗಳಿವೆ. ಅದರಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಲು ಅವಕಾಶಗಳು ಸಾಕಷ್ಟಿವೆ~`ಬ್ರಿಟಿಷರು ಇಂಗ್ಲೆಂಡ್ ನಂತರ ಗಾಲ್ಫ್ ಕೋರ್ಸ್‌ಗಳನ್ನು ಆರಂಭಿಸಿದ್ದು ಭಾರತದಲ್ಲಿ ಮಾತ್ರ. ಅಲ್ಲದೇ ಈ ಆಟಕ್ಕೆ ಮಾನ್ಯತೆ ಸಿಕ್ಕಿದ್ದೂ ಇಲ್ಲಿಯೇ. ಈ ಎಲ್ಲ ಐತಿಹಾಸಿಕ ಕಾರಣಗಳ ಬಲ ಮತ್ತು ಇಲ್ಲಿರುವ ಪ್ರತಿಭಾವಂತರ ಸಂಖ್ಯೆಯನ್ನು ನೋಡಿದರೆ ಈ ಆಟಕ್ಕೆ ಉತ್ತಮ ಭವಿಷ್ಯವಿದೆ~ ಎಂದು ಇರಾನಿ ಈ ಕ್ರೀಡೆಯ ಬಗ್ಗೆ ಬಹಳಷ್ಟು ಭರವಸೆಯ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry