ಮಂಗಳವಾರ, ನವೆಂಬರ್ 19, 2019
26 °C

ಭಾರತದಲ್ಲಿ ಥಾಮಸ್, ಉಬೆರ್ ಕಪ್ ಫೈನಲ್

Published:
Updated:

ನವದೆಹಲಿ (ಪಿಟಿಐ): ಪ್ರತಿಷ್ಠಿತ ಥಾಮಸ್ ಮತ್ತು ಉಬೆರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಇದೇ ಮೊದಲ ಬಾರಿಗೆ ಭಾರತಕ್ಕೆ ಒದಗಿದೆ. ಫೈನಲ್ ಪಂದ್ಯಗಳ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.ಈ ಬಗ್ಗೆ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಎಐ) ಅಧ್ಯಕ್ಷ ಅಖಿಲೇಶ್ ದಾಸ್‌ಗುಪ್ತಾ, `ಎರಡು ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಆಯೋಜಿಸಲು ಅವಕಾಶ ದೊರೆತಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಆಯೋಜನೆಗೊಳ್ಳಲಿರುವ ಈ ಟೂರ್ನಿಗಳ ಯಶಸ್ಸಿಗೆ ಶ್ರಮಿಸುತ್ತೇವೆ' ಎಂದರು.ಪುರುಷರ ವಿಶ್ವ ಚಾಂಪಿಯನ್‌ಷಿಪ್ `ದಿ ಥಾಮಸ್ ಕಪ್' (1948-49ರಲ್ಲಿ ಆರಂಭ) ಮತ್ತು ಮಹಿಳೆಯರ ವಿಶ್ವ ಚಾಂಪಿಯನ್‌ಷಿಪ್ `ಉಬೆರ್ ಕಪ್' (1956-57ರಲ್ಲಿ ಆರಂಭ), ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಆಯೋಜಿಸುವ ಎರಡು ಪ್ರಮುಖ ಟೂರ್ನಿಗಳಾಗಿವೆ.ಹೊಸ ಶೈಲಿಯಲ್ಲಿ ಟೂರ್ನಿಗಳು: 2014ನೇ ಇಸವಿಯಿಂದ ಅನ್ವಯವಾಗುವಂತೆ ಎರಡೂ ಟೂರ್ನಿಗಳು ಹೊಸ ಶೈಲಿಯಲ್ಲಿ ಆಯೋಜನೆಗೊಳ್ಳಲಿವೆ. ಮುಂದಿನ ವರ್ಷದಿಂದ ಅರ್ಹತಾ ಪಂದ್ಯಗಳನ್ನು ಆಯೋಜಿಸದಿರಲು ಬಿಡಬ್ಲ್ಯುಎಫ್ ನಿರ್ಧರಿಸಿದೆ.ಈ ಮೊದಲು ಬೇರೆ ಬೇರೆ ಪ್ರದೇಶಗಳಲ್ಲಿ ಅರ್ಹತಾ ಪಂದ್ಯಗಳನ್ನು ಆಯೋಜಿಸಿ 12 ತಂಡಗಳಿಗೆ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗುತ್ತಿತ್ತು. ಆದರೆ, ಮುಂದಿನ ವರ್ಷದಿಂದ ಫೈನಲ್ ಪಂದ್ಯಗಳು ಮಾತ್ರ ಇರಲಿದ್ದು, ಒಟ್ಟು 16 ತಂಡಗಳು ಸ್ಪರ್ಧಿಸಲಿವೆ. ಈ 16 ತಂಡಗಳ ಪೈಕಿ 14 ತಂಡಗಳು ಅವುಗಳ ವಿಶ್ವ ರ‌್ಯಾಂಕಿಂಗ್‌ನ ಆಧಾರದಲ್ಲಿ ಫೈನಲ್ ಪ್ರವೇಶಿಸಿದರೆ, ಒಂದು ತಂಡ ಆತಿಥೇಯ ದೇಶ ಮತ್ತು ಇನ್ನೊಂದು ತಂಡ ಕಳೆದ ಬಾರಿಯ ಚಾಂಪಿಯನ್ ದೇಶದ್ದಾಗಿರುತ್ತದೆ.

ಪ್ರತಿಕ್ರಿಯಿಸಿ (+)