ಶನಿವಾರ, ಸೆಪ್ಟೆಂಬರ್ 21, 2019
21 °C

ಭಾರತದಲ್ಲಿ ವಿಶ್ವದ 700ನೇ ಕೋಟಿ ಮಗು...

Published:
Updated:
ಭಾರತದಲ್ಲಿ ವಿಶ್ವದ 700ನೇ ಕೋಟಿ ಮಗು...

ನವದೆಹಲಿ: ಉತ್ತರ ಪ್ರದೇಶದ ಲಖನೌ ನಗರದಿಂದ 30ಕಿ.ಮೀ. ದೂರದಲ್ಲಿರುವ ದಾನೌ ಗ್ರಾಮದಲ್ಲಿ ಸೋಮವಾರ ಸಂಭ್ರಮದ ಕಳೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ಮಗುವೊಂದು ವಿಶ್ವದ ಗಮನ ಸೆಳೆದಿದೆ. ಈ ಮಗುವಿನ ಜನನದೊಂದಿಗೆ ವಿಶ್ವದ ಜನಸಂಖ್ಯೆ 700ನೇ ಕೋಟಿಯನ್ನು ತಲುಪಿದಂತಾಯಿತು.ರೈತ ಕುಟುಂಬದ ಅಜಯ್ ಕುಮಾರ್ ಮತ್ತು ವಿನಿತಾ ದಂಪತಿಗೆ ಮುಂಜಾನೆ 7.20ಕ್ಕೆ ಈ ಮಗು ಹುಟ್ಟುತ್ತಿದ್ದಂತೆಯೇ ಜನಸಂಖ್ಯಾ ಅಧ್ಯಯನಕ್ಕೆ ಸಂಬಂಧಿಸಿದ ಸಂಖ್ಯಾಶಾಸ್ತ್ರಜ್ಞರ ಪ್ರಕಾರ ಇದೊಂದು ಮಹತ್ವದ ಕ್ಷಣ. ಮೂರು ಕೆ.ಜಿ.ತೂಕದಿಂದ ಕೂಡಿರುವ ಮಗು ನರ್ಗಿಸ್ ಅತ್ಯಂತ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಅಶೋಕ್ ಮಿಶ್ರಾ `ನರ್ಗಿಸ್ ಜಗತ್ತಿನಲ್ಲಿ ಕರಾರುವಾಕ್ಕಾಗಿ ಏಳು ನೂರು ಕೋಟಿಯ ಮಗು ಎಂದೇನು ಹೇಳುತ್ತಿಲ್ಲ. ಆದರೆ ಆ ನಿಟ್ಟಿನಲ್ಲಿ ಇದೊಂದು ಸಾಂಕೇತಿಕ `ಹುಟ್ಟು~ ಎಂಬುದಾಗಿ ನಾವು ಅರ್ಥೈಸಿಕೊಳ್ಳಬೇಕು~ ಎಂದರು.ಮಗುವಿನ ತಂದೆ ಅಜಯ್ ಕುಮಾರ್ ಮಾತನಾಡುತ್ತಾ `ನಾನಂತೂ ಆರ್ಥಿಕ ಅಡಚಣೆಗಳಿಂದ ಉತ್ತಮ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ ನನ್ನ ಮಗಳಿಗಾದರೂ ಅತ್ಯುತ್ತಮ ಶಿಕ್ಷಣ ನೀಡಬೇಕೆಂಬುದೇ ನನ್ನ ಹೆಬ್ಬಯಕೆ. ನಮ್ಮೂರಲ್ಲಿ ವೈದ್ಯರಿಲ್ಲದೆ ಜನ ಪಡುತ್ತಿರುವ ಪಡಿಪಾಟಲು ಹೇಳತೀರದು. ಹೀಗಾಗಿ ನನ್ನ ಮಗಳನ್ನು ವೈದ್ಯಳನ್ನಾಗಿಸಬೇಕೆಂಬ ಗುರಿ ನನ್ನದು~ ಎಂದಿದ್ದಾರೆ.ಇಲ್ಲಿನ ಸರ್ಕಾರೇತರ ಸ್ವಯಂಸೇವಕ ಸಂಸ್ಥೆ `ಪ್ಲ್ಯಾನ್ ಇಂಡಿಯಾ~ದ ಕಾರ್ಯದರ್ಶಿ ಆರತಿ ಕಿರ್ಲೋಸ್ಕರ್ ಮಾತನಾಡಿ `ಈ ಮಗುವಿನ ಮುಂದಿನ ಏಳು ವರ್ಷಗಳ ಆರೈಕೆ ಮತ್ತು ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ~ ಎಂದಿದ್ದಾರೆ.ಭಾರತದಲ್ಲಿ ಅತ್ಯಧಿಕ ಜನಸಂಖ್ಯೆ (20ಕೋಟಿ)ಯ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಇವತ್ತಿಗೂ ಪ್ರತಿ ನಿಮಿಷಕ್ಕೆ 11 ಮಕ್ಕಳ ಜನನವಾಗುತ್ತಲೇ ಇವೆ. ಜಗತ್ತಿನಲ್ಲಿ ಚೀನಾ ಮತ್ತು ಭಾರತದಲ್ಲಿ ಅತ್ಯಧಿಕ ಜನಸಂಖ್ಯೆ ಇದ್ದು, ಏಷ್ಯಾ ಖಂಡವು ಜಗತ್ತಿನ ಜನಸಂಖ್ಯೆಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.ಅಕ್ಟೋಬರ್ 31ರ ರಾತ್ರಿ ರಷ್ಯಾದ ಕಾಮ್   ಚಟ್‌ಸ್ಕಿ ನಗರದಲ್ಲಿ ಹುಟ್ಟಿದ ಅಲೆಗ್ಸಾಂಡರ್ ಎಂಬ ಗಂಡು ಮಗು ಮತ್ತು ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಸೋಮವಾರ ಹುಟ್ಟಿದ ಡಾನಿಕಾ ಕಮಾಚೊ ಎಂಬ ಹೆಣ್ಣು ಮಗು ಕೂಡಾ ಏಳು ನೂರನೇ ಕೋಟಿಯ ಗೌರವಕ್ಕೆ ಪಾತ್ರವಾಗಿವೆ.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಸಾಲಿನಲ್ಲಿ ಫಿಲಿಪ್ಪೀನ್ಸ್ ಹನ್ನೆರಡನೇ ಸ್ಥಾನದಲ್ಲಿದೆ. ಈ ದೇಶದ ಆರೋಗ್ಯ ಸಚಿವಾಲಯ ಹೇಳಿಕೆಯೊಂದನ್ನು ನೀಡಿದ್ದು ಡಾನಿಕಾ ಕಮಾಚೊ ಹುಟ್ಟಿದ ಬಗ್ಗೆ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿಗೆ ಕಳುಹಿಸಲಾಗಿದ್ದು, 700ನೇ ಕೋಟಿಯ ಮಗು ಇವಳು ಎಂದು ಸಾಬೀತು ಪಡಿಸಲು ಯತ್ನಿಸಿದೆ.ಕಾಮ್‌ಚಟ್‌ಸ್ಕಿಯಲ್ಲಿ ಹುಟ್ಟಿದ ಮಗುವಿನ ತಾಯಿಗೆ ಅಲ್ಲಿನ ಸ್ಥಳೀಯ ಸರ್ಕಾರ `ಭೂಮಿಯ ಮೇಲಿನ 700ನೇ ಕೋಟಿಯ ಮಗು~ ಎಂಬ ದಾಖಲೆ ಪತ್ರವನ್ನೂ ನೀಡಿದೆ.ವಿಶ್ವಸಂಸ್ಥೆಯ ವರದಿ: ವಿಶ್ವದ ಜನಸಂಖ್ಯೆ 700ಕೋಟಿಯನ್ನು ತಲುಪಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಚೇರಿಯಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿಕೆಯೊಂದನ್ನು ನೀಡಿದ್ದಾರೆ. “ಈ ಭೂಮಿ 7ನೂರು ಕೋಟಿ ಜನರಿಂದ ಕಿಕ್ಕಿರಿದಂತಾಗಿದೆ ಎನ್ನುವುದಕ್ಕಿಂತ ಈ ಭೂಮಿ 700 ಕೋಟಿ ಜನರಿಂದ ಇನ್ನಷ್ಟೂ ಬಲಿಷ್ಠವಾಗಿದೆ ಎಂದುಕೊಳ್ಳೋಣ” ಎಂದು ಅವರು ತಿಳಿಸಿದ್ದಾರೆ.

Post Comments (+)