ಶನಿವಾರ, ಏಪ್ರಿಲ್ 17, 2021
31 °C

ಭಾರತದಲ್ಲಿ ಹಾಕಿ ಆಡಳಿತ ಯಾರಿಗೆ...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದಲ್ಲಿ ಹಾಕಿ ಆಡಳಿತ ನಡೆಸುವವರು ಯಾರು? ಈ ಪ್ರಶ್ನೆಗೆ ದೀರ್ಘ ಕಾಲದಿಂದ ಉತ್ತರ ಸಿಕ್ಕಿಲ್ಲ. ಅಧಿಕಾರಕ್ಕಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಕೊನೆಗೊಳಿಸಲು ಮತ್ತೊಂದು ಸಾಹಸ ಈಗ ಆರಂಭವಾಗಿದೆ.ಯಾರ ಕೈಯಲ್ಲಿ ಹಾಕಿ ಉದ್ಧಾರ ಆಗುತ್ತದೆಂದು ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲು ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದು, ಅದು ಆಗಸ್ಟ್ 21ರಂದು ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಲಿದೆ. ಸಮಿತಿಯ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.`ಹಾಕಿ ಇಂಡಿಯಾ~ (ಎಚ್‌ಐ) ಹಾಗೂ `ಭಾರತ ಹಾಕಿ ಫೆಡರೇಷನ್~ (ಐಎಚ್‌ಎಫ್) ನಡುವೆ ಅಧಿಕಾರಕ್ಕಾಗಿ ನಿರಂತರ ಕಿತ್ತಾಟ ನಡೆದಿದೆ. ಇದರಿಂದಾಗಿ ಹಾಕಿ ಕ್ರೀಡೆಯ ಅಬಿವೃದ್ಧಿಗೂ ತೊಡಕಾಗಿರುವುದು ಸಹಜ.ಆದ್ದರಿಂದ ಕಳೆದ ತಿಂಗಳು ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ಆದರೆ ಅದು ಕಾರ್ಯಾರಂಭ ಮಾಡಿರಲಿಲ್ಲ. ಲಂಡನ್ ಒಲಿಂಪಿಕ್ ಕೂಟದಲ್ಲಿ ದೇಶದ ತಂಡವು ಒಂದೂ ಗೆಲುವಿಲ್ಲದೇ ಹಿಂದಿರುಗಿದ ನಂತರ ಈ ಆಟದ ಏಳಿಗೆಯ ಬಗ್ಗೆ ಮತ್ತೆ ಐಒಸಿ ಯೋಚಿಸಿದೆ.ಇನ್ನೊಂದು ವಿಚಿತ್ರವೆಂದರೆ ಐಒಎ ರಚಿಸಿರುವ ತ್ರಿಸದಸ್ಯ ಸಮಿತಿಯಲ್ಲಿ ಹಾಕಿ ಆಟದ ಗಂಧಗಾಳಿ ಅರಿಯದವರು ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲ ಈ ಸಮಿತಿಗೆ ಎಚ್‌ಐ ಹಾಗೂ ಐಎಚ್‌ಎಫ್ ಎಷ್ಟರ ಮಟ್ಟಿಗೆ ಗೌರವ ನೀಡುತ್ತವೆ ಎನ್ನುವ ಪ್ರಶ್ನೆಯೂ ಈಗಾಗಲೇ ಭೂತಾಕಾರವಾಗಿ ಬೆಳೆದು ನಿಂತಿದೆ.ಸಮಿತಿಯು ಆಗಸ್ಟ್ 21ರಿಂದ ಐಎಚ್ ಹಾಗೂ ಐಎಚ್‌ಎಫ್ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಿದೆ. ಆಗಸ್ಟ್ 31ರಂದು ಅದು ತನ್ನ ವರದಿಯನ್ನು ಐಒಎಗೆ ಸಲ್ಲಿಸಲಿದೆ. ಆನಂತರ ಭಾರತ ಒಲಿಂಪಿಕ್ ಸಂಸ್ಥೆಯು ಯಾರಿಗೆ ಅಧಿಕಾರ ನೀಡುವುದು ಸೂಕ್ತವೆಂದು ತೀರ್ಮಾನ ಕೈಗೊಳ್ಳಲಿದೆ.ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಜಿ.ಎಸ್.ಮಂದೇರ್ ನೇತೃತ್ವದ ತ್ರಿಸದಸ್ಯ ಸಮಿತಿಯಲ್ಲಿ ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ಮುಖ್ಯಸ್ಥ ವೀರೇಂದ್ರ ಪ್ರಸಾದ್ ಬೈಶಿಯಾ ಹಾಗೂ ಭಾರತ ಹ್ಯಾಂಡ್‌ಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಬಾಲಿ ಅವರು ಇದ್ದಾರೆ.`ದೇಶದಲ್ಲಿ ಹಾಕಿ ಆಡಳಿತದ ಉಸ್ತುವಾರಿ ಒಂದೇ ಸಂಸ್ಥೆಯ ಕಡೆಗೆ ಇರಬೇಕು. ಆ ಒಂದೇ ಸಂಸ್ಥೆಗೆ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹಾಗೂ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಮಾನ್ಯತೆ ಸಿಗಬೇಕು. ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಎಚ್‌ಐ ಹಾಗೂ ಐಎಚ್‌ಎಫ್ ಈ ಎರಡರಲ್ಲಿ ಒಂದಕ್ಕೆ ಮಾತ್ರ ಆ ಮಾನ್ಯತೆ ಇರುವಂತೆ ಮಾಡುವುದು ಐಒಎ ಉದ್ದೇಶವಾಗಿದೆ.

 

ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಸುಲಭವಾಗಬೇಕು ಎನ್ನುವ ಉದ್ದೇಶದಿಂದಲೇ ಸಮತಿ ರಚಿಸಲಾಗಿದೆ. ಎರಡೂ ಪಕ್ಷಗಳ ಅಭಿಪ್ರಾಯ ಹಾಗೂ ಆಡಳಿತ ಸಾಮರ್ಥ್ಯದ ಮಾಹಿತಿ ಸಂಗ್ರಹಿಸಿ ತ್ರಿಸದಸ್ಯ ಸಮಿತಿಯು ಇದೇ ತಿಂಗಳ ಕೊನೆಯಲ್ಲಿ ವರದಿ ಸಲ್ಲಿಸಲಿದೆ~ ಎಂದು ಸಮಿತಿಯ ಮುಖ್ಯಸ್ಥ ಕೂಡ ಆಗಿರುವ ಐಒಎ ಉಪಾಧ್ಯಕ್ಷ ಮಂದೇರ್ ತಿಳಿಸಿದರು.2008ರಲ್ಲಿ ಐಎಚ್‌ಎಫ್ ಅನ್ನು ಅಮಾನತುಗೊಳಿಸಿದ ನಂತರ ದೇಶದಲ್ಲಿ ಹಾಕಿ ಕ್ರೀಡೆಯ ಆಡಳಿತದ ಹೊಣೆಯನ್ನು ವಹಿಸಿಕೊಂಡಿದ್ದು ಎಚ್‌ಐ. ಆನಂತರ ಗೊಂದಲದ ವಾತಾವರಣ ಮುಂದುವರಿಯಿತು. ವಿವಾದ ನ್ಯಾಯಾಲಯದ ಕಟ್ಟೆ ಏರಿತು.ಈ ನಡುವೆಯೇ ರಾಷ್ಟ್ರೀಯ ತಂಡ ಆಯ್ಕೆ ಮಾಡಲು ಐಎಚ್‌ಗೆ ಸುಪ್ರೀಂ ಕೋರ್ಟ್ ಅಧಿಕಾರ ನೀಡಿತ್ತು. ಅಷ್ಟೇ ಅಲ್ಲ ಆ ಅವಧಿಯಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಕೂಡ ಹಾಕಿ ಇಂಡಿಯಾಕ್ಕೆ ಮಾನ್ಯತೆ ನೀಡಿತು.`ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಆ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆಂದು ನಿರೀಕ್ಷಿಸಲಾಗಿದೆ~ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿ.ಕೆ.ಮಲ್ಹೋತ್ರಾ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.