ಭಾರತದೊಂದಿಗೆ ಮಿಲಿಟರಿ ಸಹಕಾರ ವಿಸ್ತರಣೆ: ಅಮೆರಿಕ ಆಸಕ್ತಿ.

7

ಭಾರತದೊಂದಿಗೆ ಮಿಲಿಟರಿ ಸಹಕಾರ ವಿಸ್ತರಣೆ: ಅಮೆರಿಕ ಆಸಕ್ತಿ.

Published:
Updated:

ವಾಷಿಂಗ್ಟನ್ (ಪಿಟಿಐ): ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ರಂಗದಲ್ಲಿ ಭಾರತದೊಂದಿಗೆ ಮಿಲಿಟರಿ ಸಹಕಾರವನ್ನು ವಿಸ್ತರಿಸುವ ಮೂಲಕ ಏಷ್ಯಾದಲ್ಲಿ ಹೆಚ್ಚಿನ ಭದ್ರತಾ ಸಹಕಾರ ಹೊಂದಲು ಅಮೆರಿಕ ಆಸಕ್ತಿ ಹೊಂದಿರುವುದಾಗಿ ಪೆಂಟಗನ್‌ನ ವರದಿಯೊಂದು ತಿಳಿಸಿದೆ.‘ಏಷ್ಯಾ ಉಪ ಖಂಡದಲ್ಲಿ ಮಿಲಿಟರಿ ಸಾಮರ್ಥ್ಯ ಬಲವರ್ಧನೆಗೊಳ್ಳುತ್ತಿದೆ. ಹಾಗಾಗಿ ನಾವು ಪ್ರಾದೇಶಿಕವಾಗಿ ಭದ್ರತಾ ಸಹಕಾರವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಮಿಲಿಟರಿ ಸಾಮರ್ಥ್ಯವನ್ನು ಇಡೀ ಏಷ್ಯಾ ಭಾಗದಲ್ಲಿ ವೃದ್ಧಿಗೊಳಿಸಿಕೊಳ್ಳುವ ಅಗತ್ಯವೂ ಇದೆ’ ಎಂದು ‘ನ್ಯಾಷನಲ್ ಮಿಲಿಟರಿ ಸಟ್ಯೆಾಟಜಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ  2011’ ವರದಿಯಲ್ಲಿ ಹೇಳಲಾಗಿದೆ.

ಭಾರತದೊಂದಿಗೆ ಮಿಲಿಟರಿ ಸಹಕಾರವನ್ನು ವಿಸ್ತರಿಸಿಕೊಳ್ಳಬೇಕು. ಪ್ರಮುಖವಾಗಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕ್ಷೇತ್ರದಲ್ಲಿ ಈ ಸಹಕಾರವನ್ನು ಬಯಸುತ್ತಿದ್ದು, ಜಾಗತಿಕ ಸಮಸ್ಯೆಯಾಗಿರುವ ಭಯೋತ್ಪಾದನೆ ನಿಗ್ರಹವೂ ಇದರಲ್ಲಿ ಸೇರಿದೆ ಎಂದು 24 ಪುಟಗಳ ವರದಿಯಲ್ಲಿ ಹೇಳಲಾಗಿದೆ. ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ, ಪಾಕಿಸ್ತಾನ, ಇಂಡೊನೇಷ್ಯಾ, ಸಿಂಗಪುರ ಮತ್ತು ಉಪ ಖಂಡದ ಇತರ ದೇಶಗಳೊಂದಿಗೂ ಅಮೆರಿಕ ಮಿಲಿಟರಿ ಸಹಕಾರ ವಿಸ್ತರಣೆ ಮತ್ತು ಜಂಟಿ ಸಮರಭ್ಯಾಸಗಳನ್ನು ನಡೆಸಲು ತೀರ್ಮಾನಿಸಿದ್ದು, ಆ ದೇಶಗಳ ಐಕ್ಯತೆ ಮತ್ತು ಭದ್ರತೆಗೆ ದೇಶಿಯ ಮತ್ತು ಅಂತರರಾಷ್ಟ್ರೀಯ ಬೆದರಿಕೆಗಳಿಗೆ ಉತ್ತರಿಸಲು ಇದರಿಂದ ಸಾಧ್ಯವಾಗುತ್ತದೆ ಎನ್ನುವುದನ್ನು ವರದಿ ಹೇಳಿದೆ.

‘ಮಿಲಿಟರಿ ಸಹಕಾರವನ್ನು ವಿಸ್ತರಣೆ ಮಾಡಿಕೊಳ್ಳುವ ಮೂಲಕ ಈ ಭಾಗದಲ್ಲಿ ಸುಸ್ಥಿರ ಮತ್ತು ವೈವಿಧ್ಯಮಯ ರೀತಿಯಲ್ಲಿ ಭದ್ರತೆಯನ್ನು ಕಾಪಾಡಬಹುದಾಗಿದೆ. ಭದ್ರತಾ ಒಪ್ಪಂದಗಳು ಮತ್ತು ಬದ್ಧತೆಗೆ ನಾವು ಆದ್ಯತೆ ನೀಡುತ್ತೇವೆ. ಇದು ಉಪಖಂಡದ ದೇಶಗಳ ಅಗತ್ಯವೂ ಆಗಿದೆ’ ಎಂದು ಹೇಳಲಾಗಿದೆ.ಅಲ್ಲದೆ ಪ್ರಾದೇಶಿಕವಾಗಿ ಭದ್ರತಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮಿಲಿಟರಿ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಮೂಲಕ ಜವಾಬ್ದಾರಿ ಮತ್ತು ಸಹಕಾರವನ್ನು ಬಲವರ್ಧನೆ ಮಾಡಿಕೊಳ್ಳಬಹುದು ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ. ಇದೇ ವೇಳೆ ಚೀನಾದೊಂದಿಗೆ ಸಕಾರಾತ್ಮಕ, ಸಹಕಾರಾತ್ಮಕ  ಸಂಬಂಧವನ್ನು ಹೊಂದಲು ಅಮೆರಿಕ ಇಚ್ಚಿಸುತ್ತದೆ. ಇದರಿಂದ ಏಷ್ಯಾ ಉಪಖಂಡದಲ್ಲಿ ಚೀನಾ ಪ್ರಮುಖ ರಾಷ್ಟ್ರವಾಗಿ ತನ್ನ ಪಾತ್ರ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry